IND vs NZ: ವಿಶ್ವ ಚಾಂಪಿಯನ್ನರಿಗೆ ಮಣ್ಣು ಮುಕ್ಕಿಸಿದ ಟೀಂ ಇಂಡಿಯಾ
IND vs NZ: ಭಾರತ ಮತ್ತು ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 59 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಸ್ಮೃತಿ ಮಂಧಾನ ನೇತೃತ್ವದಲ್ಲಿ ಭಾರತ 227 ರನ್ ಗಳಿಸಿತು. ನ್ಯೂಜಿಲೆಂಡ್ 168 ರನ್‌ಗಳಿಗೆ ಆಲೌಟ್ ಆಯಿತು. ರಾಧಾ ಯಾದವ್ ಮತ್ತು ಸೈಮಾ ಠಾಕೋರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಒಂದೆಡೆ ಭಾರತ ಹಾಗೂ ನ್ಯೂಜಿಲೆಂಡ್ ಪುರುಷ ತಂಡಗಳ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಇನ್ನೊಂದೆಡೆ ಇದೇ ಭಾರತ ಹಾಗೂ ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಅಹಮದಾಬಾದ್‌ನಲ್ಲಿ ಆರಂಭವಾಗಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ, ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ನ್ಯೂಜಿಲೆಂಡ್ ತಂಡವನ್ನು ಬರೋಬ್ಬರಿ 59 ರನ್‌ಗಳಿಂದ ಮಣಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಲೀಗ್ ಸುತ್ತಿನ ಮೊದಲ ಪಂದ್ಯದಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಭಾರತಕ್ಕೆ ಕಳಪೆ ಆರಂಭ
ಮೊದಲ ಏಕದಿನ ಪಂದ್ಯದಿಂದ ಖಾಯಂ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೊರಗುಳಿದಿದ್ದರಿಂದ ಅವರ ಸ್ಥಾನದಲ್ಲಿ ಸ್ಮೃತಿ ಮಂಧಾನ ತಂಡವನ್ನು ಮುನ್ನಡೆಸಿದರು. ಹೀಗಾಗಿ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಮಂಧಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಟಿ20 ವಿಶ್ವಕಪ್‌ನಂತೆ ಇಲ್ಲಿಯೂ ಭಾರತ ತಂಡದ ಬ್ಯಾಟಿಂಗ್ ನಿರಾಸೆ ಮೂಡಿಸಿತು. ನಾಯಕತ್ವ ನಿಭಾಯಿಸುತ್ತಿದ್ದ ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾದರೆ, ಶೆಫಾಲಿ ವರ್ಮಾ (33) ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾದರು.
ಕೈಹಿಡಿದ ಮಧ್ಯಮ ಕ್ರಮಾಂಕ
ಯಾಸ್ತಿಕಾ ಭಾಟಿಯಾ (37) ಕೂಡ ಅಲ್ಪ ಮೊತ್ತದ ಇನ್ನಿಂಗ್ಸ್ ಆಡಿದರು ಆದರೆ ಅವರಿಗೂ ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್ (35), ದೀಪ್ತಿ ಶರ್ಮಾ (41) ಮತ್ತು ಚೊಚ್ಚಲ ಪಂದ್ಯವನ್ನಾಡಿದ ತೇಜಲ್ ಹಸನ್‌ಬಿಸ್ 42 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಟೀಂ ಇಂಡಿಯಾ ಪೂರ್ಣ 50 ಓವರ್ಗಳನ್ನು ಆಡಲಾಗದೆ 44.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 227 ರನ್ ಕಲೆಹಾಕಿತು. ನ್ಯೂಜಿಲೆಂಡ್ ಪರ ಅಮೆಲಿಯಾ ಕಾರ್ ಗರಿಷ್ಠ 4 ವಿಕೆಟ್ ಪಡೆದರು.
A winning start to the ODI series in Ahmedabad 🤩#TeamIndia complete a 59 runs victory over New Zealand in the 1st #INDvNZ ODI and take a 1-0 lead 👏👏
Scorecard – https://t.co/VGGT7lSS13@IDFCFIRSTBank pic.twitter.com/QUNOirPjbh
— BCCI Women (@BCCIWomen) October 24, 2024
ಕಿವೀಸ್ಗೆ ಆರಂಭಿಕ ಆಘಾತ
227 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ಗೂ ಉತ್ತಮ ಆರಂಭ ಸಿಗಲಿಲ್ಲ. ನಿಗದಿತ ಅಂತರದಲ್ಲಿ ತಂಡ ವಿಕೆಟ್ ಕಳೆದುಕೊಳ್ಳುತ ಸಾಗಿತು. ವಿಶ್ವಕಪ್ ಸ್ಟಾರ್ ಓಪನರ್ ಜಾರ್ಜಿಯಾ ಪ್ಲಿಮ್ಮರ್ (25) ತಂಡಕ್ಕೆ ವೇಗದ ಆರಂಭ ನೀಡಿದರಾದರೂ ಬೇಗನೆ ಔಟಾದರು. ನಾಯಕಿ ಸೋಫಿ ಡಿವೈನ್ ತಾವು ಮಾಡಿಕೊಂಡ ಎಡವಟ್ಟಿನಿಂದ ತಾವೇ ವಿಕೆಟ್ ಕೈಚೆಲ್ಲಿದರು. ಆದರೆ ಆ ಬಳಿಕ ಜೊತೆಯಾದ ಬ್ರೂಕ್ ಹ್ಯಾಲಿಡೆ (39) ಮತ್ತು ಮ್ಯಾಡಿ ಗ್ರೀನ್ (31) 49 ರನ್‌ಗಳ ಜೊತೆಯಾಟವನ್ನಾಡಿ ಟೀಂ ಇಂಡಿಯಾ ವೇಗಿಗಳನ್ನು ಕಾಡಿದರು.
ಆದರೆ ಈ ಇಬ್ಬರೂ ಬ್ಯಾಟರ್ಗಳು ತಂಡದ ಮೊತ್ತ 128 ರನ್ಗಳಿದ್ದಾಗ ಪೆವಿಲಿಯನ್ ಸೇರಿಕೊಂಡರು. ಇಲ್ಲಿಂದ ಕಿವೀಸ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಆದರೆ ಕೊನೆಯಲ್ಲಿ ಗೆಲುವಿಗಾಗಿ ಹೋರಾಡಿದ ಅಮೆಲಿಯಾ ಕರ್ 25 ರನ್‌ಗಳ ಇನ್ನಿಂಗ್ಸ್ ಆಡಿದರಾದರೂ, ಇತರ ಬ್ಯಾಟರ್ಗಳ ವಿಕೆಟ್ ಪತನದಿಂದಾಗಿ ಸೋಲೊಪ್ಪಿಕೊಳ್ಳಬೇಕಾಯಿತು. ಅಂತಿಮವಾಗಿ ಕಿವೀಸ್ ತಂಡ 40.4 ಓವರ್‌ಗಳಲ್ಲಿ ಕೇವಲ 168 ರನ್‌ಗಳಿಗೆ ಆಲೌಟ್ ಆದರೆ, ಇತ್ತ ಟೀಂ ಇಂಡಿಯಾ 59 ರನ್‌ಗಳಿಂದ ಗೆಲುವು ಸಾಧಿಸಿತು. ಟೀಂ ಇಂಡಿಯಾ ಪರ ರಾಧಾ ಯಾದವ್ 3 ಹಾಗೂ ಚೊಚ್ಚಲ ಪಂದ್ಯವನ್ನಾಡಿದ ಸೈಮಾ ಠಾಕೋರ್ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ