ಪ್ರಧಾನಿ ಮೋದಿಯವರನ್ನು ಭೇಟಿಯಾದ ವಿಶ್ವ ವಿಜೇತ ಭಾರತ ಮಹಿಳಾ ತಂಡ

World Cup Champions Meet PM Modi: ಭಾರತ ಮಹಿಳಾ ಕ್ರಿಕೆಟ್ ತಂಡವು ನವೆಂಬರ್ 2 ರಂದು ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಐತಿಹಾಸಿಕ ಮೊದಲ ವಿಶ್ವಕಪ್ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತು. ಈ ಅಪ್ರತಿಮ ಸಾಧನೆಗೆ ದೇಶದಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ತಂಡವನ್ನು ಅಭಿನಂದಿಸಿದ್ದರು. ವಿಶ್ವಕಪ್ ವಿಜಯದ ನಂತರ ಮೂರು ದಿನಗಳ ಬಳಿಕ, ಮಹಿಳಾ ಪಡೆ ಪ್ರಧಾನಿ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದೆ.

ಪ್ರಧಾನಿ ಮೋದಿಯವರನ್ನು ಭೇಟಿಯಾದ ವಿಶ್ವ ವಿಜೇತ ಭಾರತ ಮಹಿಳಾ ತಂಡ
India Womens

Updated on: Nov 05, 2025 | 8:56 PM

ನವೆಂಬರ್ 2 ರಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್ ಫೈನಲ್ (Women’s World Cup) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್​ಗಳಿಂದ ಮಣಿಸಿದ್ದ ಭಾರತ ವನಿತಾ ಪಡೆ, 52 ವರ್ಷಗಳ ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಭಾರತದ ಸಿಂಹಿಣಿಯರ ಈ ಐತಿಹಾಸಿಕ ಸಾಧನೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಅಭಿಮಾನಿಗಳಿಂದ ಹಿಡಿದು ಮಾಜಿ ಕ್ರಿಕೆಟಿಗರು, ಸೆಲೆಬ್ರೆಟಿಗಳು ಸೇರಿದಂತೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಅವರು ಕೂಡ ಹರ್ಮನ್​ಪ್ರೀತ್ ಕೌರ್ (Hermanpreet Kaur) ಪಡೆಯನ್ನು ಅಭಿನಂದಿಸಿದ್ದರು. ಇದೀಗ ವಿಶ್ವಕಪ್ ಮುಗಿದ ಮೂರು ದಿನಗಳ ಬಳಿಕ ಮಹಿಳಾ ಪಡೆ, ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದೆ.

ಮೋದಿಗೆ ಜೆರ್ಸಿ ಉಡುಗೊರೆ

ಪ್ರಧಾನಿ ಅವರನ್ನು ಭೇಟಿ ಮಾಡಲು ಇಂದು ಮುಂಬೈನಿಂದ ದೆಹಲಿಗೆ ಬಂದಿಳಿದ ಭಾರತ ವನಿತಾ ಪಡೆಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಅಲ್ಲಿಂದ ಆಟಗಾರ್ತಿಯರೆಲ್ಲ ತಂಡದ ಹೋಟೆಲ್​ಗೆ ತೆರಳಿ ನಂತರ ಮೋದಿ ನಿವಾಸಕ್ಕೆ ಬಸ್ ಹತ್ತಿದರು. ಮೋದಿ ನಿವಾಸದಲ್ಲಿ ಆಟಗಾರ್ತಿಯರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದ್ದು, ಪ್ರಧಾನಿಯವರು ತಂಡದ ಎಲ್ಲಾ ಆಟಗಾರ್ತಿಯರೊಂದಿಗೆ ಸಂವಾದ ನಡೆಸಿದ್ದಾರೆ. ಇದೇ ವೇಳೆ ತಂಡದ ಎಲ್ಲಾ ಆಟಗಾರ್ತಿಯರ ಸಹಿ ಇರುವ ಜೆರ್ಸಿಯನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಲಾಗಿದೆ.

ಆಟಗಾರ್ತಿಯರೊಂದಿಗೆ ಸಂವಾದ

ಆಟಗಾರ್ತಿಯರೊಂದಿಗೆ ಸಂವಾದ ನಡೆಸಿರುವ ಮೋದಿ ಅವರು, ಇಡೀ ತಂಡದ ಹೋರಾಟಕ್ಕೆ ಮುಚ್ಚುಗೆ ವ್ಯಕ್ತಪಡಿಸಿದ್ದಾರೆ. ಸತತ ಮೂರು ಸೋಲುಗಳು, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ ಇದೆಲ್ಲವನ್ನು ಮೆಟ್ಟಿ ನಿಂತು ವಿಶ್ವಕಪ್ ಎತ್ತಿಹಿಡಿದ ಮಹಿಳಾ ತಂಡದ ಸಾಧನೆಯನ್ನು ಮೋದಿ ಶ್ಲಾಘಿಸಿದರು. ‘ಸೋಲಿಗೆ ಹೆದರಬಾರದು ಎಂದು ನೀವು ತೋರಿಸಿದ್ದೀರಿ. 2017 ರಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ನನ್ನನ್ನು ಭೇಟಿಯಾಗಿದ್ದರು. ಆದರೆ ಆಗ ಟ್ರೋಫಿ ಇರಲಿಲ್ಲ. ಇದೀಗ ಟ್ರೋಫಿಯೊಂದಿಗೆ ಭೇಟಿಯಾಗಿದ್ದಾರೆ ಎಂದರು. ಇದೇ ವೇಳೆ ಹರ್ಮನ್, ‘ನಾವು ಮತ್ತೆ ಭೇಟಿಯಾಗುತ್ತೇವೆ ಸರ್!’ ಎಂದರು. ಇದಕ್ಕೆ ಪ್ರಧಾನಿ ನಕ್ಕರು ಮತ್ತು ಎಲ್ಲರೂ ಚಪ್ಪಾಳೆ ತಟ್ಟಿದರು.

ಮನದಾಳ ತೆರೆದಿಟ್ಟ ಸ್ಮೃತಿ-ದೀಪ್ತಿ

ಇದೇ ವೇಳೆ ಮಾತನಾಡಿದ ಸ್ಮೃತಿ ಮಂಧಾನ, ಪ್ರಧಾನಿ ಸರ್ ನಮಗೆ ಪ್ರೇರಣೆ ನೀಡುತ್ತಾರೆ. ಇಂದು ಹುಡುಗಿಯರು ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ, ಇದೆಲ್ಲವೂ ನಿಮ್ಮಿಂದಲೇ’ ಎಂದರು. ಆ ಬಳಿಕ ಮಾತನಾಡಿದ ದೀಪ್ತಿ, ‘2017 ರಲ್ಲಿ ಪ್ರಧಾನಿ ಕಷ್ಟಪಟ್ಟು ಕೆಲಸ ಮಾಡಿ, ನಿಮ್ಮ ಕನಸುಗಳು ನನಸಾಗುತ್ತವೆ’ ಎಂದು ಹೇಳಿದ್ದರು. ಇಂದು ಆ ಕನಸು ನನಸಾಯಿತು’ ಎಂದರು.

ಪಂದ್ಯದ ಬಗ್ಗೆ ಚರ್ಚೆ

ಹಾಗೆಯೇ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಭಾರತವನ್ನು ಸೋಲಿನ ದವಡೆಗೆ ತಳ್ಳುತ್ತಿದ್ದ ದಕ್ಷಿಣ ಆಫ್ರಿಕಾ ನಾಯಕಿ ಲೌರಾ ನೀಡಿದ ಕ್ಯಾಚ್ ಅನ್ನು ತೆಗೆದುಕೊಳ್ಳುವಲ್ಲಿ ಅಮನ್‌ಜೋತ್ ಮಾಡಿದ ಎಡವಟ್ಟಿನ ಬಗ್ಗೆಯೂ ಮಾತನಾಡಿದ ಮೋದಿ, ನೀವು ಕ್ಯಾಚ್ ತೆಗೆದುಕೊಳ್ಳುವಾಗ ಮೊದಲು ಚೆಂಡನ್ನು ನೋಡಿ, ಕ್ಯಾಚ್ ಹಿಡಿದ ನಂತರ ಟ್ರೋಫಿಯನ್ನು ನೋಡಿ ಎಂದರು. ಇದೇ ವೇಳೆ ಮಾತನಾಡಿದ ಯುವ ವೇಗಿ ಕ್ರಾಂತಿ ಗೌಡ್, ನನ್ನ ಸಹೋದರ ನಿಮ್ಮ ದೊಡ್ಡ ಅಭಿಮಾನಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರ ಸಹೋದರನಿಗೆ ಮುಕ್ತ ಆಹ್ವಾನ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:08 pm, Wed, 5 November 25