6,084 ದಿನಗಳ ಕಾಯುವಿಕೆ ಅಂತ್ಯ; ಹರ್ಮನ್ ತೋಳಿನ ಮೇಲೆ ಮೂಡಿದ ವಿಶ್ವಕಪ್ ಟ್ರೋಫಿ ಟ್ಯಾಟೂ
Harmanpreet Kaur: ಭಾರತ ಮಹಿಳಾ ಕ್ರಿಕೆಟ್ ತಂಡ ಮೊದಲ ಐಸಿಸಿ ವಿಶ್ವಕಪ್ ಗೆದ್ದಿದೆ. ಹರ್ಮನ್‌ಪ್ರೀತ್ ಕೌರ್ ತಮ್ಮ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಸ್ಮರಣೀಯ ಗೆಲುವನ್ನು ಶಾಶ್ವತವಾಗಿಸಲು, ಹರ್ಮನ್‌ಪ್ರೀತ್ ತಮ್ಮ ತೋಳಿನ ಮೇಲೆ ವಿಶ್ವಕಪ್ ಟ್ರೋಫಿಯ ಟ್ಯಾಟೂ ಹಾಕಿಸಿಕೊಂಡಿದ್ದಾರೆ. 52 ವರ್ಷಗಳ ಕಾಯುವಿಕೆಯ ಅಂತ್ಯ, ಇದು ಅವರ ಬಾಲ್ಯದ ಕನಸು ನನಸಾದ ಕ್ಷಣ.

ಭಾರತ ಮಹಿಳಾ ತಂಡ ( India Women’s Cricket Team) ಕೊನೆಗೂ ತನ್ನ ಐಸಿಸಿ (ICC) ಟ್ರೋಫಿ ಬರವನ್ನು ನೀಗಿಸಿಕೊಂಡಿದೆ. ಭಾನುವಾರ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಹರ್ಮನ್ ಪಡೆ ಮೊದಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಎತ್ತಿಹಿಡಿದಿದೆ. ಇದೀಗ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ವಿಶ್ವಕಪ್ ಗೆಲುವನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವ ಸಲುವಾಗಿ ತಮ್ಮ ತೋಳಿನ ಮೇಲೆ ವಿಶ್ವಕಪ್ ಟ್ರೋಫಿಯ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ. ವಿಶ್ವಕಪ್ ಫೈನಲ್ ಮುಗಿದ ಮರು ದಿನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಶ್ವಕಪ್ ಟ್ರೋಫಿಯ ಟ್ಯಾಟೂ ಹಾಕಿಸಿಕೊಂಡಿರುವ ಫೋಟೋಗಳನ್ನು ಹರ್ಮನ್ ಹಂಚಿಕೊಂಡಿದ್ದಾರೆ. ಹರ್ಮನ್ಗೆ ಈ ವಿಶ್ವಕಪ್ ಗೆಲುವು ಮತ್ತಷ್ಟು ವಿಶೇಷವಾಗಿದ್ದು, ಐಸಿಸಿ ಟ್ರೋಫಿಯನ್ನು ಗೆದ್ದ ಮೊದಲ ಭಾರತೀಯ ಮಹಿಳಾ ನಾಯಕಿ ಎಂಬ ದಾಖಲೆಯನ್ನು ಇತಿಹಾಸದ ಪುಟದಲ್ಲಿ ದಾಖಲಿಸಿದ್ದಾರೆ.
ಭಾರತದ ಮೊದಲ ನಾಯಕಿ
ಹರ್ಮನ್‌ಪ್ರೀತ್ ಹಂಚಿಕೊಂಡಿರುವ ಫೋಟೋದಲ್ಲಿ ವಿಶ್ವಕಪ್ ಟ್ರೋಫಿಯ ಟ್ಯಾಟೂ ಜೊತೆಗೆ ವಿಶ್ವಕಪ್ ಗೆದ್ದ ವರ್ಷ ಹಾಗೂ 52 ಎಂಬ ಸಂಖ್ಯೆಯನ್ನು ಬರೆಸಿದ್ದಾರೆ. 52 ಎಂಬ ಸಂಖ್ಯೆಯೂ ಎರಡು ವಿಶೇಷತೆಗಳನ್ನು ಹೊಂದಿದ್ದು, ಮೊದಲನೆಯದ್ದು, 52 ವರ್ಷಗಳ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರೆ, ಎರಡನೇಯದ್ದು, ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ಗಳಿಂದ ಸೋಲಿಸಿ ಟ್ರೋಫಿ ಎತ್ತಿಹಿಡಿದಿತ್ತು. ಈ ಟ್ಯಾಟೂ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹರ್ಮನ್, ಇದು ನನ್ನ ಚರ್ಮ ಮತ್ತು ಹೃದಯದಲ್ಲಿ ಶಾಶ್ವತವಾಗಿ ಅಚ್ಚೊತ್ತಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
View this post on Instagram
6084 ದಿನಗಳ ಕಾಯುವಿಕೆ ಅಂತ್ಯ
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದ ಮೊದಲ ದಿನದಿಂದಲೂ ವಿಶ್ವಕಪ್ ಟ್ರೋಫಿಗಾಗಿ ಕಾಯುತ್ತಿದ್ದೆ ಎಂದು ಹರ್ಮನ್‌ಪ್ರೀತ್ ಕೌರ್ ಬರೆದಿದ್ದಾರೆ. ವಾಸ್ತವವಾಗಿ ಹರ್ಮನ್‌ಪ್ರೀತ್ ಕೌರ್ ಮಾರ್ಚ್ 7, 2009 ರಂದು ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ, 6084 ವರ್ಷಗಳ ಕಾಯುವಿಕೆಯ ನಂತರ, ಅವರು ಅಂತಿಮವಾಗಿ ನವೆಂಬರ್ 2, 2025 ರಂದು ವಿಶ್ವಕಪ್ಗೆ ಮುತ್ತಿಟ್ಟಿದ್ದಾರೆ.
ವಿಶ್ವಕಪ್ ಗೆಲ್ಲಿಸಿಕೊಟ್ಟ ಶಫಾಲಿ ವರ್ಮಾಗೆ ಒಲಿದ ನಾಯಕತ್ವ ಪಟ್ಟ
ನನಗೆ ತುಂಬಾ ಭಾವನಾತ್ಮಕ ಕ್ಷಣ
ಮಂಗಳವಾರದಂದು ಬಿಸಿಸಿಐ ಹರ್ಮನ್‌ಪ್ರೀತ್ ಅವರ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ವಿಶ್ವಕಪ್ ಮತ್ತು ತಮ್ಮ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, ‘ಇದು ನನಗೆ ತುಂಬಾ ಭಾವನಾತ್ಮಕ ಕ್ಷಣ, ಏಕೆಂದರೆ ನಾನು ಮೊದಲೇ ಹೇಳಿದಂತೆ, ಇದು ನನ್ನ ಬಾಲ್ಯದಿಂದಲೂ ಕನಸಾಗಿತ್ತು. ನಾನು ಟಿವಿ ನೋಡುವುದು ಮತ್ತು ಕ್ರಿಕೆಟ್ ಆಡಲು ಪ್ರಾರಂಭಿಸಿದಾಗಿನಿಂದ, ವಿಶ್ವಕಪ್ ಗೆಲ್ಲುವುದು ನನ್ನ ಕನಸಾಗಿತ್ತು. ನಾನು ಈಗ ತುಂಬಾ ನಿರಾಳವಾಗಿದ್ದೇನೆ ಮತ್ತು ನಾನು ಹಲವು ವರ್ಷಗಳಿಂದ ಕಂಡ ಕನಸು ಈಗ ನನಸಾಗಿದೆ. ಹೀಗಾಗಿ ನಾನು ದೇವರಿಗೆ ಕೃತಜ್ಞನಾಗಿದ್ದೇನೆ’ ಎಂದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Wed, 5 November 25
