AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್ ಮುಗಿದ ಬೆನ್ನಲ್ಲೇ 8 ಲೆಜೆಂಡರಿ ಆಟಗಾರ್ತಿಯರ ವೃತ್ತಿ ಬದುಕಿಗೆ ಫುಲ್​ ಸ್ಟಾಪ್

Women's Cricket Legends: ಭಾರತ ಮಹಿಳಾ ಕ್ರಿಕೆಟ್ ತಂಡವು ನವಿ ಮುಂಬೈನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಗೆಲುವಿನ ಬೆನ್ನಲ್ಲೇ, ನಾಯಕಿ ಹರ್ಮನ್‌ಪ್ರೀತ್ ಕೌರ್ ಸೇರಿ ಅಲಿಸಾ ಹೀಲಿ, ಮರಿಜಾನ್ನೆ ಕಪ್ ಅವರಂತಹ ಎಂಟು ಪ್ರಮುಖ ಆಟಗಾರ್ತಿಯರು ಮುಂದಿನ ವಿಶ್ವಕಪ್‌ ಆಡುವುದು ಅನುಮಾನವಾಗಿದೆ. ಇದು ಮಹಿಳಾ ಕ್ರಿಕೆಟ್‌ನ ಒಂದು ಯುಗದ ಅಂತ್ಯವನ್ನು ಸೂಚಿಸುತ್ತಿದೆ.

ವಿಶ್ವಕಪ್ ಮುಗಿದ ಬೆನ್ನಲ್ಲೇ 8 ಲೆಜೆಂಡರಿ ಆಟಗಾರ್ತಿಯರ ವೃತ್ತಿ ಬದುಕಿಗೆ ಫುಲ್​ ಸ್ಟಾಪ್
Women Cricketer
ಪೃಥ್ವಿಶಂಕರ
|

Updated on: Nov 04, 2025 | 9:51 PM

Share

ಮಹಿಳಾ ಕ್ರಿಕೆಟ್‌ ಜಗತ್ತಿಗೆ ಹೊಸ ಚಾಂಪಿಯನ್ ತಂಡ ಸಿಕ್ಕಿದೆ. ನವೆಂಬರ್ 2 ರ ರಾತ್ರಿ, ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ (Women’s World Cup Final) ಆತಿಥೇಯ ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಮೊದಲ ಬಾರಿಗೆ ಈ ಮೆಗಾ ಟೂರ್ನಿಯನ್ನು ಗೆದ್ದುಕೊಂಡಿದೆ. ಈ ವಿಶ್ವಕಪ್‌ನಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿದ್ದ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಪಡೆ ಆ ಬಳಿಕ ಅದ್ಭುತ ಪುನರಾಗಮನ ಮಾಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಇದೀಗ ವಿಶ್ವಕಪ್ ಮುಗಿಯುವುದರ ಜೊತೆಗೆ ಎಂಟು ಲೆಜೆಂಡರಿ ಆಟಗಾರ್ತಿಯರ ವೃತ್ತಿಜೀವನವು ಕೆಲವೇ ದಿನಗಳಲ್ಲಿ ಅಂತ್ಯವಾಗಬಹುದು ಎನ್ನಲಾಗುತ್ತಿದೆ. ಅಂತಹವರ ಪಟ್ಟಿಯಲ್ಲಿ ವಿಶ್ವಕಪ್ ಗೆದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಹೆಸರು ಕೂಡ ಸೇರಿದೆ.

ಮುಂದಿನ ವಿಶ್ವಕಪ್ ಆಡುವುದು ಅನುಮಾನ?

ವಾಸ್ತವವಾಗಿ 2025 ರ ವಿಶ್ವಕಪ್ ಭಾರತೀಯ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಕೊನೆಯ ವಿಶ್ವಕಪ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಪ್ರಸ್ತುತ 36 ವರ್ಷ ವಯಸ್ಸಿನ ಹರ್ಮನ್ ಮುಂದಿನ ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆ ಕಡಿಮೆ. ಏಕೆಂದರೆ ಮುಂದಿನ ವಿಶ್ವಕಪ್ ನಡೆಯುವುದು ನಾಲ್ಕು ವರ್ಷಗಳ ನಂತರ ಅಂದರೆ 2029 ರಲ್ಲಿ ನಡೆಯಲಿದೆ. ಪರಿಣಾಮವಾಗಿ, ಭಾರತೀಯ ನಾಯಕಿ ಮುಂದಿನ ಮೆಗಾ ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ. ಆದಾಗ್ಯೂ, ಅವರು ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಇದಲ್ಲದೆ, ಆಸ್ಟ್ರೇಲಿಯಾ ನಾಯಕಿ ಅಲಿಸಾ ಹೀಲಿ ಕೂಡ ಮುಂದಿನ ವಿಶ್ವಕಪ್‌ನಲ್ಲಿ ಆಡದಿರಬಹುದು.

ಆಸೀಸ್ ನಾಯಕಿ ಆಡುವುದಿಲ್ಲ

ಸೆಮಿಫೈನಲ್‌ನಲ್ಲಿ ಸೋತ ನಂತರ ಈ ಬಗ್ಗೆ ಮಾತನಾಡಿದ್ದ ಹೀಲಿ, ‘ನಾನು ಮುಂದಿನ ವಿಶ್ವಕಪ್‌ನಲ್ಲಿ ಆಡುವುದಿಲ್ಲ. ಹೀಗಾಗಿ ನಾನು ವಿಶ್ವಕಪ್ ನಡೆಯುವುದನ್ನು ಕುಳಿತು ನೋಡುತ್ತೇವೆ. ಮುಂದಿನ ವರ್ಷದ ಮಧ್ಯದಲ್ಲಿ ಟಿ20 ವಿಶ್ವಕಪ್ ಇದೆ, ಇದು ನಮ್ಮ ತಂಡಕ್ಕೆ ನಿಜವಾಗಿಯೂ ರೋಮಾಂಚನಕಾರಿಯಾಗಿದೆ. ಆದರೆ ನಮ್ಮ ಏಕದಿನ ಕ್ರಿಕೆಟ್ ಸ್ವಲ್ಪ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದರು. ಇದರರ್ಥ ಹೀಲಿ ಮುಂದಿನ ವಿಶ್ವಕಪ್ ಆಡುವುದಿಲ್ಲ ಎಂಬುದು ಖಚಿತವಾಗಿದೆ.

ಅವರಂತೆ ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಲ್​ರೌಂಡರ್ ಮರಿಜಾನ್ನೆ ಕಪ್ ಕೂಡ ಮುಂದಿನ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಹೀಗಾಗಿಯೇ ಫೈನಲ್ ಗೆದ್ದ ನಂತರ, ಟೀಂ ಇಂಡಿಯಾ ಆಟಗಾರ್ತಿಯರು ಮರಿಜಾನ್ನೆ ಕಪ್ ಅವರನ್ನು ಅಪ್ಪಿಕೊಂಡು ಅವರಿಗೆ ಸಾಂತ್ವನ ಹೇಳಿದರು. ಇವರಲ್ಲದೆ, ಇತರ ಅನೇಕ ಸ್ಟಾರ್ ಆಟಗಾರ್ತಿಯರ ಏಕದಿನ ವಿಶ್ವಕಪ್ ವೃತ್ತಿಜೀವನವೂ ಮುಗಿಯಬಹುದು.

ಇವರುಗಳ ವಿಶ್ವಕಪ್ ವೃತ್ತಿಜೀವನ ಭಾಗಶಃ ಅಂತ್ಯ

ಹರ್ಮನ್‌ಪ್ರೀತ್ ಕೌರ್ ಮತ್ತು ಅಲಿಸಾ ಹೀಲಿ ಜೊತೆಗೆ, ಆಸ್ಟ್ರೇಲಿಯಾದ ಎಲಿಸ್ ಪೆರ್ರಿ, ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್, ಆಲ್‌ರೌಂಡರ್ ಸುಜೀ ಬೇಟ್ಸ್, ಶ್ರೀಲಂಕಾದ ಇನೋಕಾ ರಣವೀರ ಮತ್ತು ಉದೇಶಿಕಾ ಪ್ರಬೋಧನಿ ಕೂಡ ತಮ್ಮ ಏಕದಿನ ವೃತ್ತಿಜೀವನವನ್ನು ಕೊನೆಗೊಳಿಸುವ ಸಾಧ್ಯತೆ ಇದೆ. ಆದಾಗ್ಯೂ, ಯಾವುದೇ ಆಟಗಾರ್ತಿ ಇದನ್ನು ಇನ್ನೂ ದೃಢಪಡಿಸಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ