IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ ಯಾವಾಗ?
Team India Squad Announcement: ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಮುಖ 2 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲು 2-0 ಅಂತರದ ಗೆಲುವು ಅನಿವಾರ್ಯವಾಗಿದೆ. ದೇಶೀಯ ಕ್ರಿಕೆಟ್ ಮುಗಿದಿದ್ದು, ಬಿಸಿಸಿಐ ಶೀಘ್ರದಲ್ಲೇ ಟೆಸ್ಟ್ ತಂಡವನ್ನು ಪ್ರಕಟಿಸಲಿದೆ. ರಿಷಭ್ ಪಂತ್, ಮೊಹಮ್ಮದ್ ಶಮಿ ಪುನರಾಗಮನದ ನಿರೀಕ್ಷೆಯಿದ್ದು, ಕರುಣ್ ನಾಯರ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ (Team India) ಆ ಬಳಿಕ ತವರಿಗೆ ವಾಪಸ್ಸಾಗಲಿದೆ. ನಂತರ ತವರಿನಲ್ಲಿಯೇ ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. 4ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (WTC) ಭಾರತದ ಮೂರನೇ ಟೆಸ್ಟ್ ಸರಣಿ ಇದಾಗಲಿದ್ದು, ಇಲ್ಲಿಯವರೆಗೆ ಆಡಿದ ಎರಡು ಸರಣಿಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿದ್ದ ಭಾರತ, ಆ ನಂತರ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ್ದ ಸರಣಿಯನ್ನು 2-0 ಅಂತರದಲ್ಲಿ ವೈಟ್‌ವಾಶ್ ಮಾಡಿತ್ತು. ಈ ಎರಡು ಸರಣಿಗಳ ನಂತರ ಭಾರತ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಈಗ ಭಾರತ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತಲುಪುವ ಅವಕಾಶವಿದೆ.
ಇದು ಸಾಧ್ಯವಾಗಬೇಕಾದರೆ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 2-0 ಅಂತರದಲ್ಲಿ ಸೋಲಿಸಬೇಕಾಗಿದೆ. ಈ ಸರಣಿ ಭಾರತದಲ್ಲಿ ನಡೆಯುವುದರಿಂದ ಟೀಂ ಇಂಡಿಯಾಕ್ಕೆ ಮೇಲುಗೈ ಎನ್ನಬಹುದು. ಆದರೆ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಯನ್ನು 3-0 ಅಂತರದಿಂದ ಸೋತಿದ್ದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾವನ್ನು ಮಣಿಸುವುದು ಅಷ್ಟು ಸುಲಭದ ಕೆಲಸವಲ್ಲ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ನವೆಂಬರ್ 14 ರಿಂದ ಆರಂಭವಾಗಲಿದೆ. ಈ ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಘೋಷಿಸಲಾಗಿದೆಯಾದರೂ ಭಾರತ ತಂಡವನ್ನು ಇನ್ನೂ ಘೋಷಿಸಿಲ್ಲ.
ಟೀಂ ಇಂಡಿಯಾ ಪ್ರಕಟ ಯಾವಾಗ?
ವರದಿಯ ಪ್ರಕಾರ, ದೇಶೀಯ ರಣಜಿ ಟ್ರೋಫಿಯ ಎಲ್ಲಾ ಪಂದ್ಯಗಳು ಇಂದು ಮುಗಿದಿವೆ. ಇದು ಭಾರತೀಯ ಆಯ್ಕೆ ಸಮಿತಿಗೆ ಆಟಗಾರರನ್ನು ಆಯ್ಕೆ ಮಾಡಲು ಸುಲಭವಾಗುತ್ತದೆ. ಮುಂದಿನ 72 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಟೆಸ್ಟ್ ಸರಣಿಗೆ ತಂಡವನ್ನು ಘೋಷಿಸಬಹುದು. ಉಳಿದಂತೆ ಏಕದಿನ ಮತ್ತು ಟಿ20 ಸರಣಿಗೆ ತಂಡವನ್ನು ನವೆಂಬರ್ ಮೂರನೇ ವಾರದಲ್ಲಿ ಘೋಷಿಸಬಹುದು. ಭಾರತದ ಮೊದಲ ಟೆಸ್ಟ್ ಪಂದ್ಯ ನವೆಂಬರ್ 14 ರಂದು ನಡೆಯಲಿದ್ದು, ಎರಡನೇ ಟೆಸ್ಟ್ ಪಂದ್ಯ ನವೆಂಬರ್ 22 ರಂದು ನಡೆಯಲಿದೆ. ಭಾರತ ತಂಡದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದಾರೆ. ಅವರು ನಾಯಕರಾದ ಶುಭ್ಮನ್ ಗಿಲ್ ಮತ್ತು ಗೌತಮ್ ಗಂಭೀರ್ ಅವರೊಂದಿಗೆ ಟೆಸ್ಟ್ ತಂಡದ ಬಗ್ಗೆ ಚರ್ಚಿಸಲಿದ್ದಾರೆ. ಅದರ ನಂತರ ತಂಡಗಳನ್ನು ಘೋಷಿಸಲಾಗುವುದು. ಈ ತಂಡದಲ್ಲಿ ಎರಡು ಬದಲಾವಣೆಗಳಾಗುವುದು ಸ್ಪಷ್ಟವಾಗಿದೆ.
ತಂಡದಲ್ಲಿ 2 ಪ್ರಮುಖ ಬದಲಾವಣೆ
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತಂಡದಲ್ಲಿರುವ ನಾರಾಯಣ್ ಜಗದೀಶನ್ ಬದಲಿಗೆ ರಿಷಭ್ ಪಂತ್ ತಂಡದಲ್ಲಿ ಸ್ಥಾನ ಪಡೆಯಬಹುದು. ಪ್ರಸಿದ್ಧ್ ಕೃಷ್ಣ ಅವರ ಸ್ಥಾನವನ್ನು ಮೊಹಮ್ಮದ್ ಶಮಿ ವಹಿಸಿಕೊಳ್ಳಬಹುದು. ಇದರ ಹೊರತಾಗಿ, ಇತರ ಬದಲಾವಣೆಗಳನ್ನು ಮಾಡುವುದು ಕಷ್ಟ. ಸಾಯಿ ಸುದರ್ಶನ್ ಬದಲಿಗೆ ಕರುಣ್ ನಾಯರ್‌ಗೆ ಮತ್ತೆ ಅವಕಾಶ ಸಿಗುತ್ತದೆಯೇ? ಇದು ಕ್ರೀಡಾಭಿಮಾನಿಗಳು ಕೇಳುತ್ತಿರುವ ಪ್ರಶ್ನೆ. ಏಕೆಂದರೆ ಇಂಗ್ಲೆಂಡ್ ಪ್ರವಾಸದ ನಂತರ ಅವರನ್ನು ಕೈಬಿಡಲಾಯಿತು. ಆದರೆ ದೇಶೀಯ ಕ್ರಿಕೆಟ್‌ನಲ್ಲಿ, ಅವರು ದ್ವಿಶತಕ ಗಳಿಸುವ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾದ ಬಾಗಿಲು ತಟ್ಟಿದ್ದಾರೆ. ಈ ತಂಡದಲ್ಲಿ ಈಗ ಯಾವ ಬದಲಾವಣೆಗಳನ್ನು ಮಾಡಲಾಗುವುದು ಮತ್ತು ಯಾರನ್ನು ಆಯ್ಕೆ ಮಾಡಲಾಗುತ್ತದೆ? ಇದರ ಬಗ್ಗೆ ಕುತೂಹಲ ಉತ್ತುಂಗಕ್ಕೇರಿದೆ.
IND vs SA: ಭಾರತ ವಿರುದ್ಧದ ಟೆಸ್ಟ್ ಸರಣಿಗೆ 15 ಸದಸ್ಯರ ದಕ್ಷಿಣ ಆಫ್ರಿಕಾ ತಂಡ ಪ್ರಕಟ
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಸಂಭಾವ್ಯ ತಂಡ: ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
