AUSW vs INDW: ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಥಾಲಿ ರಾಜ್ ದಾಖಲೆ: ಆದ್ರೆ, ಮೊದಲ ಏಕದಿನದಲ್ಲಿ ಆಸೀಸ್ ವಿರುದ್ಧ ಸೋತ ಭಾರತ

| Updated By: Vinay Bhat

Updated on: Sep 21, 2021 | 12:34 PM

India Women vs Australia Women 1st ODI: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 20,000 ರನ್ ಪೂರೈಸಿದ ದಾಖಲೆ ಬರೆದರು.

AUSW vs INDW: ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಥಾಲಿ ರಾಜ್ ದಾಖಲೆ: ಆದ್ರೆ, ಮೊದಲ ಏಕದಿನದಲ್ಲಿ ಆಸೀಸ್ ವಿರುದ್ಧ ಸೋತ ಭಾರತ
Mithali Raj
Follow us on

ಕಾಂಗರೂಗಳ ನಾಡಿಗೆ ಪ್ರವಾಸ ಬೆಳೆಸಿರುವ ಭಾರತ ಮಹಿಳಾ ಕ್ರಿಕೆಟ್ ತಂಡ (Indian Womens Cricket Team) ಏಕದಿನ ಸರಣಿಯನ್ನು ಶುರು ಮಾಡಿದೆ. ಆದರೆ, ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್ (Mithali Raj) ಪಡೆ ಸೋಲು ಕಂಡಿದೆ. ಆಸ್ಟ್ರೇಲಿಯಾ (Australia Womens Team) ಬ್ಯಾಟ್ಸ್​ಮನ್​ಗಳ ಬೊಂಬಾಟ್ ಪ್ರದರ್ಶನದ ಎದುರು ಮಂಡಿಯೂರಿದ ಭಾರತ ಸೋಲಿನ ಆರಂಭ ಪಡೆದುಕೊಂಡಿದೆ. ಮಿಥಾಲಿ ಅರ್ಧಶತಕವೂ ತಂಡಕ್ಕೆ ಸಹಕಾರಿಯಾಗಿಲ್ಲ. ಆಸ್ಟ್ರೇಲಿಯಾ ಮಹಿಳೆಯರು 9 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ತಂಡ ಆರಂಭದಲ್ಲೇ ಸ್ಫೋಟಕ ಬ್ಯಾಟ್ಸ್​ಮನ್ ಶಫಾಲಿ ವರ್ಮಾ (8) ವಿಕೆಟ್ ಕಳೆದುಕೊಂಡಿತು. ಸ್ಮೃತಿ ಮಂದಾನ (16) ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 50 ರನ್​ಗೂ ಮುನ್ನವೇ 2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ನಾಯಕ ಮಿಥಾಲಿ ರಾಜ್ ಹಾಗೂ ಯಸ್ತಿಕಾ ಭಟಿಲಾ ಆಸರೆಯಾದರು.

ಎಚ್ಚರಿಕೆಯ ಆಟವಾಡಿದ ಈ ಜೋಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. 77 ರನ್​ಗಳ ಕಾಣಿಕೆ ನೀಡಿತು. ಚೆನ್ನಾಗಿಯೆ ಆಡುತ್ತಿದ್ದ ಯಸ್ತಿಕಾ 51 ಎಸೆತಗಳಲ್ಲಿ 35 ರನ್ ಗಳಿಸಿ ಔಟ್ ಆದರು. ಇದರ ಬೆನ್ನಲ್ಲೇ ದೀಪ್ತಿ ಶರ್ಮಾ (9) ಹಾಗೂ ಪೂಜಾ (17) ಬೇಗನೆ ನಿರ್ಗಮಿಸಿದ್ದು ಹೊಡೆತ ಬಿದ್ದಿತು. ಆದರೆ, ಛಲ ಬಿಡದೆ ಆಡಿದ ಮಿಥಾಲಿ ಆಕರ್ಷಕ ಅರ್ಧಶತಕ ಪೂರೈಸಿದರು.

ಮಿಥಾಲಿ 107 ಎಸೆತಗಳಲ್ಲಿ 61 ರನ್ ಬಾರಿಸಿ ಔಟ್ ಆದರು. ನಂತರ ಬಂದ ರಿಚಾ ಘೋಷ್ ಅಜೇಯ 32 ರನ್ ಸಿಡಿಸಿದ ಪರಿಣಾಮ ಭಾರತ 50 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು. ಆಸೀಸ್ ಪರ ಡಾರ್ಸಿ ಬ್ರೌನ್ 4 ವಿಕೆಟ್ ಕಿತ್ತು ಮಿಂಚಿದರು.

226 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಮಹಿಳೆಯರು ಮೊದಲ ವಿಕೆಟ್​ಗನೇ ಶತಕದ ಜೊತೆಯಾಟ ಆಡಿದರು. ಓಪನರ್​ಗಳಾದ ರಿಚೆಲ್ ಹೇನೆಸ್ ಮತ್ತು ಅಲಿಸ್ಸಾ ಹೇಲೆ ಬಿರುಸಿನ ಬ್ಯಾಟಿಂಗ್ ನಡೆಸಿದರು. ಭಾರತೀಯ ಬೌಲರ್​ಗಳು ಎಷ್ಟೇ ಪ್ರಯತ್ನ ಪಟ್ಟರೂ ಇವರಿಬ್ಬರನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಈ ಜೋಡಿ ಬರೋಬ್ಬರಿ 126 ರನ್​ಗಳ ಜೊತೆಯಾಟ ಆಡಿ ಗೆಲುವು ಖಚಿತ ಪಡಿಸಿತು.

ಅಲಿಸ್ಸಾ ಹೇಲೆ 77 ಎಸೆತಗಳಲ್ಲಿ 77 ರನ್ ಬಾರಿಸಿ ಔಟ್ ಆದರು. ರಿಚೆಲ್ 100 ಎಸೆತಗಳಲ್ಲಿ ಅಜೇಯ 93 ಹಾಗೂ ನಾಯಕಿ ಮೆಗ್ ಲ್ಯಾನ್ನಿಂಗ್ 69 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸಿದರು. ಆಸ್ಟ್ರೇಲಿಯಾ 41 ಓವರ್​ನಲ್ಲೇ ಕೇವಲ 1 ವಿಕೆಟ್ ಕಳೆದುಕೊಂಡು 227 ರನ್ ಬಾರಿಸಿ 9 ವಿಕೆಟ್​ಗಳ ಗೆಲುವು ಕಂಡಿತು.

ಮಿಥಾಲಿ ರಾಜ್ 20 ಸಾವಿರ ರನ್:

ಈ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 20,000 ರನ್ ಪೂರೈಸಿದ ದಾಖಲೆ ಬರೆದರು. ಭರ್ಜರಿ ಫಾರ್ಮ್ ನಲ್ಲಿರುವ ಮಿಥಾಲಿ ರಾಜ್ ಅರ್ಧಶತಕ ಸಿಡಿಸುವ ಮೂಲಕ ಸತತ 5ನೇ ಅರ್ಧಶತಕ ಸಿಡಿಸಿದ ಮತ್ತೊಂದು ದಾಖಲೆ ಬರೆದರು. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ 4 ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಫಿಫ್ಟಿ ಸಿಡಿಸಿದ್ದರು. ಮಿಥಾಲಿ ರಾಜ್​ಗೆ ಇದು ಒಟ್ಟಾರೆ 59ನೇ ಅರ್ಧಶತಕವಾಗಿದೆ.

Neeraj Chopra: ನಟನೆಯಲ್ಲೂ ಮಿಂಚಿದ ಚಿನ್ನದ ಹುಡುಗ: ನೀರಜ್ ಚೋಪ್ರಾ ಹೊಸ ಜಾಹೀರಾತು ಫುಲ್ ವೈರಲ್‌

Bomb threats: ಇಂಗ್ಲೆಂಡ್​ನಲ್ಲಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಬಾಂಬ್ ಬೆದರಿಕೆ

(India Women vs Australia Women 1st ODI Mithali Raj Achieves Huge Milestone but Australia Women won by 9 wkts)