ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡ ಇದೀಗ ಮತ್ತೆ ತನ್ನ ಗೆಲುವಿನ ಹಾದಿಗೆ ಮರಳಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ 60 ರನ್‌ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ್ದು, ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 217 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ157 ರನ್‌ಗಳಿಸಲಷ್ಟೇ ಶಕ್ತವಾಗಿ 60 ರನ್ಗಳಿಂದ ಸೋಲೊಪ್ಪಿಕೊಂಡಿತು.
ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿದ್ದರೆ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 9 ವಿಕೆಟ್‌ಗಳಿಂದ ಗೆದ್ದುಬೀಗಿತ್ತು. ಹೀಗಾಗಿ ಇಂದು ಗೆಲ್ಲುವ ತಂಡಕ್ಕೆ ಸರಣಿ ಕೈವಶವಾಗುತ್ತಿತ್ತು. ಅದರಂತೆ ನಿರ್ಣಾಯಕ ಪಂದ್ಯದಲ್ಲಿ ಸಾಂಘಿಕ ಹೋರಾಟ ನೀಡಿದ ಭಾರತ ವನಿತಾ ಪಡೆ ಅಮೋಘ ಗೆಲುವು ದಾಖಲಿಸಿತು.
India seal the T20I series 2-1 with a commanding all-round display in the decider against West Indies 👏
📝 #INDvWI: https://t.co/aRYawJSZNN pic.twitter.com/AXqKnki9SZ
— ICC (@ICC) December 19, 2024
ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಓವರ್ನ ಎರಡನೇ ಎಸೆತದಲ್ಲೇ ಆರಂಭಿಕ ಆಟಗಾರ್ತಿ ಉಮಾ ಛೆಟ್ರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಇಲ್ಲಿಂದ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ಸ್ಮೃತಿ ಮಂಧಾನ ಹಾಗೂ ಜೆಮಿಮಾ ರಾಡ್ರಿಗಸ್ 2ನೇ ವಿಕೆಟ್ಗೆ 98 ರನ್‌ಗಳ ಕಾಣಿಕೆ ನೀಡಿದರು.
ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಮೊದಲ 10 ಓವರ್ಗಳಲ್ಲೇ ತಂಡ 99 ರನ್ ಕಲೆಹಾಕಿತು. ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಮುಂದಾದ ಸ್ಮೃತಿ ಕೇವಲ 27 ಎಸೆತಗಳಲ್ಲಿ ತಮ್ಮ 30ನೇ ಅರ್ಧಶತಕ ಪೂರೈಸಿದರು. ಅಲ್ಲದೆ ಇದು ಈ ಸರಣಿಯಲ್ಲಿ ಸ್ಮೃತಿ ಅವರ ಮೂರನೇ ಅರ್ಧಶತಕ ಕೂಡ ಆಗಿತ್ತು. ಅಂತಿಮವಾಗಿ ತಮ್ಮ ಇನ್ನಿಂಗ್ಸ್ನಲ್ಲಿ 47 ಎಸೆತಗಳನ್ನು ಎದುರಿಸಿದ ಸ್ಮೃತಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 77 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಜೆಮಿಮಾ ಕೂಡ 39 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು.
ಈ ಇಬ್ಬರ ವಿಕೆಟ್ ಪತನದ ಬಳಿಕ ಜೊತೆಯಾದ ರಾಘ್ವಿ ಹಾಗೂ ರಿಚಾ ಘೋಷ್ ಮೈದಾನದಲ್ಲಿ ಬೌಂಡರಿಗಳ ಮಳೆಗರೆದರು. ಒಂದೆಡೆ ರಿಚಾ ವಿಂಡೀಸ್ ಬೌಲರ್ಗಳ ಬೆವರಳಿಸಿದರೆ, ಇನ್ನೊಂದೆಡೆ ರಾಘ್ವಿ, ರಿಚಾಗೆ ಉತ್ತಮ ಸಾಥ್ ನೀಡಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ರಾಘ್ವಿ 22 ಎಸೆತಗಳಲ್ಲಿ 31 ರನ್‌ಗಳ ಕಾಣಿಕೆ ನೀಡಿದರೆ, ರಿಚಾ ಘೋಷ್ 21 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಸಹಿತ 54 ರನ್ ಬಾರಿಸಿ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಬಹುಬೇಗನೇ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕಿ ಹೇಲಿ ಮ್ಯಾಥ್ಯೂಸ್ ಮತ್ತು ಅನುಭವಿ ಬ್ಯಾಟ್ಸ್‌ಮನ್ ಡಿಯಾಂಡ್ರಾ ಡಾಟಿನ್ ಉತ್ತಮ ಜೊತೆಯಾಟವನ್ನು ರಚಿಸುವ ಮೂಲಕ ತಂಡದ ಭರವಸೆಯನ್ನು ಜೀವಂತವಾಗಿರಿಸಿದರು. ಇಬ್ಬರ ನಡುವೆ 37 ರನ್‌ಗಳ ತ್ವರಿತ ಜೊತೆಯಾಟವಿತ್ತು. ಆದರೆ ಎಡಗೈ ಸ್ಪಿನ್ನರ್ ರಾಧಾ ಯಾದವ್ ಮ್ಯಾಥ್ಯೂಸ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು. ಇದಾದ ಬಳಿಕ ಯುವ ವೇಗಿ ಟೈಟಾಸ್ ಸಾಧು ಡಾಟಿನ್ ಅವರನ್ನು ಔಟ್ ಮಾಡುವ ಮೂಲಕ ವೆಸ್ಟ್ ಇಂಡೀಸ್ ತಂಡದ ಭರವಸೆಗೆ ಪೆಟ್ಟು ನೀಡಿದರು. ಶಿನೆಲ್ ಹೆನ್ರಿ ಕೇವಲ 16 ಎಸೆತಗಳಲ್ಲಿ 43 ರನ್ ಗಳಿಸಿ ಟೀಂ ಇಂಡಿಯಾಗೆ ಕೊಂಚ ಭಯ ಹುಟ್ಟಿಸಿದರೂ ರೇಣುಕಾ ಸಿಂಗ್ ಅವರನ್ನು ಔಟ್ ಮಾಡುವ ಮೂಲಕ ಬಿಗ್ ರಿಲೀಫ್ ನೀಡಿದರು. ಇದಾದ ಬಳಿಕ ವಿಂಡೀಸ್ ತಂಡದ ಕೆಳ ಕ್ರಮಾಂಕ ಪೆವಿಲಿಯನ್ ಪರೇಡ್ ನಡಿಸಿದ ಪರಿಣಾಮ ಇಡೀ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 pm, Thu, 19 December 24