IND vs WI: ಸ್ಮೃತಿ- ರಿಚಾ ಸಿಡಿಲಬ್ಬರದ ಬ್ಯಾಟಿಂಗ್; ವಿಂಡೀಸ್ಗೆ ಬೃಹತ್ ಗುರಿ ನೀಡಿದ ಭಾರತ
IND vs WI: ನವಿ ಮುಂಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 217 ರನ್ ಗಳಿಸಿದೆ. ತಂಡದ ಪರ ಸ್ಮೃತಿ ಮಂಧಾನ (77) ಮತ್ತು ರಿಚಾ ಘೋಷ್ (54) ಅದ್ಭುತ ಅರ್ಧಶತಕಗಳ ಇನ್ನಿಂಗ್ಸ್ ಆಡಿದರು.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 217 ರನ್ ಕಲೆಹಾಕಿದೆ. ಈ ಮೂಲಕ ವಿಂಡೀಸ್ ಗೆಲುವಿಗೆ 218 ರನ್ಗಳ ಗುರಿ ನೀಡಿದೆ. ಟೀಂ ಇಂಡಿಯಾದ ಈ ಬೃಹತ್ ಮೊತ್ತ ಕಲೆಹಾಕುವಲ್ಲಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ರಿಚಾ ಘೋಷ್ ಸಿಡಿಸಿದ ಸಿಡಿಲಬ್ಬರದ ಅರ್ಧಶತಕ ಪ್ರಮುಖ ಕಾರಣವಾಯಿತು. ಈ ಇಬ್ಬರು ಆಟಗಾರ್ತಿರು ವಿಂಡೀಸ್ ಬೌಲರ್ಗಳನ್ನು ಚೆಂಡಾಡಿ ಕ್ರಮವಾಗಿ 77 ಹಾಗೂ 54 ರನ್ಗಳ ಕಾಣಿಕೆ ನೀಡಿದರು.
ಭಾರತಕ್ಕೆ ಆರಂಭಿಕ ಆಘಾತ
ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಓವರ್ನ ಎರಡನೇ ಎಸೆತದಲ್ಲೇ ಆರಂಭಿಕ ಆಟಗಾರ್ತಿ ಉಮಾ ಛೆಟ್ರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಇಲ್ಲಿಂದ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ಸ್ಮೃತಿ ಮಂಧಾನ ಹಾಗೂ ಜೆಮಿಮಾ ರಾಡ್ರಿಗಸ್ 2ನೇ ವಿಕೆಟ್ಗೆ 98 ರನ್ಗಳ ಕಾಣಿಕೆ ನೀಡಿದರು.
ಸ್ಮೃತಿ ಹ್ಯಾಟ್ರಿಕ್ ಅರ್ಧಶತಕ
ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಮೊದಲ 10 ಓವರ್ಗಳಲ್ಲೇ ತಂಡ 99 ರನ್ ಕಲೆಹಾಕಿತು. ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಮುಂದಾದ ಸ್ಮೃತಿ ಕೇವಲ 27 ಎಸೆತಗಳಲ್ಲಿ ತಮ್ಮ 30ನೇ ಅರ್ಧಶತಕ ಪೂರೈಸಿದರು. ಅಲ್ಲದೆ ಇದು ಈ ಸರಣಿಯಲ್ಲಿ ಸ್ಮೃತಿ ಅವರ ಮೂರನೇ ಅರ್ಧಶತಕ ಕೂಡ ಆಗಿತ್ತು. ಅಂತಿಮವಾಗಿ ತಮ್ಮ ಇನ್ನಿಂಗ್ಸ್ನಲ್ಲಿ 47 ಎಸೆತಗಳನ್ನು ಎದುರಿಸಿದ ಸ್ಮೃತಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 77 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಜೆಮಿಮಾ ಕೂಡ 39 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು.
ರಿಚಾ ಸಿಡಿಲಬ್ಬರದ ಬ್ಯಾಟಿಂಗ್
ಈ ಇಬ್ಬರ ವಿಕೆಟ್ ಪತನದ ಬಳಿಕ ಜೊತೆಯಾದ ರಾಘ್ವಿ ಹಾಗೂ ರಿಚಾ ಘೋಷ್ ಮೈದಾನದಲ್ಲಿ ಬೌಂಡರಿಗಳ ಮಳೆಗರೆದರು. ಒಂದೆಡೆ ರಿಚಾ ವಿಂಡೀಸ್ ಬೌಲರ್ಗಳ ಬೆವರಳಿಸಿದರೆ, ಇನ್ನೊಂದೆಡೆ ರಾಘ್ವಿ, ರಿಚಾಗೆ ಉತ್ತಮ ಸಾಥ್ ನೀಡಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ರಾಘ್ವಿ 22 ಎಸೆತಗಳಲ್ಲಿ 31 ರನ್ಗಳ ಕಾಣಿಕೆ ನೀಡಿದರೆ, ರಿಚಾ ಘೋಷ್ 21 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಸಹಿತ 54 ರನ್ ಬಾರಿಸಿ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ