PAK vs SA: ಆಫ್ರಿಕಾ ಮಣಿಸಿ ಏಕದಿನ ಸರಣಿ ಗೆದ್ದ ಪಾಕ್; ಭಾರತದ ದಾಖಲೆ ಉಡೀಸ್
PAK vs SA: ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಅದ್ಭುತ ಬ್ಯಾಟಿಂಗ್ ಮತ್ತು ಶಾಹೀನ್ ಶಾ ಅಫ್ರಿದಿ ಮತ್ತು ನಸೀಮ್ ಶಾ ಅವರ ಅತ್ಯುತ್ತಮ ಬೌಲಿಂಗ್ ಸಹಾಯದಿಂದ ಈ ಗೆಲುವು ಸಾಧ್ಯವಾಗಿದೆ. ಈ ಜಯದೊಂದಿಗೆ ಪಾಕಿಸ್ತಾನ ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ಏಕದಿನ ಸರಣಿ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನೂ ಗೆದ್ದುಕೊಂಡಿರುವ ಪಾಕಿಸ್ತಾನ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ಉಭಯ ತಂಡಗಳ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಅಂದರೆ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಸೋತರೂ ಸರಣಿ ತನ್ನದಾಗಿಸಿಕೊಳ್ಳಲಿದೆ. ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ಏಕದಿನ ಸರಣಿ ಗೆದ್ದಿರುವ ಪಾಕಿಸ್ತಾನ ಇದೀಗ ಹರಿಣಗಳ ನಾಡಲ್ಲಿ ಅತಿ ಹೆಚ್ಚು ದ್ವಿಪಕ್ಷೀಯ ಏಕದಿನ ಸರಣಿ ಗೆದ್ದ ಏಷ್ಯಾದ ಮೊದಲ ದೇಶ ಎಂಬ ದಾಖಲೆ ಬರೆದಿದೆ.
ಆಫ್ರಿಕಾದಲ್ಲಿ ಅತಿ ಹೆಚ್ಚು ಸರಣಿ ಗೆಲುವು
ಮೂರು ಪಂದ್ಯಗಳ ಸರಣಿಯಲ್ಲಿ ಇದುವರೆಗಿನ ಮೊದಲೆರಡು ಪಂದ್ಯಗಳನ್ನು ಪಾಕಿಸ್ತಾನ ಗೆದ್ದುಕೊಂಡಿದೆ. ಮೊದಲ ಪಂದ್ಯವನ್ನು ಪಾಕಿಸ್ತಾನ 3 ವಿಕೆಟ್‌ಗಳಿಂದ ಮತ್ತು ಎರಡನೇ ಪಂದ್ಯವನ್ನು 81 ರನ್‌ಗಳಿಂದ ಗೆದ್ದುಕೊಂಡಿತು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಮೂರು ಏಕದಿನ ಸರಣಿಗಳನ್ನು ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಗಿದೆ. ಇದರ ಜೊತೆಗೆ ಟೀಂ ಇಂಡಿಯಾದ ದಾಖಲೆಯನ್ನು ಪಾಕಿಸ್ತಾನ ಮುರಿದಿದೆ. ಟೀಂ ಇಂಡಿಯಾ ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ಎರಡು ಏಕದಿನ ಸರಣಿಗಳನ್ನು ಗೆದ್ದಿದ್ದು, ಭಾರತ 2017 ಮತ್ತು 2023ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಗೆದ್ದುಕೊಂಡಿತ್ತು.
ಪಾಕಿಸ್ತಾನ 11 ವರ್ಷಗಳ ಹಿಂದೆ ಅಂದರೆ 2013ರಲ್ಲಿ ನಡೆದಿದ್ದ ಮೊದಲ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು. ಅದರ ನಂತರ, 2021 ರಲ್ಲಿ ಎರಡನೇ ಬಾರಿಗೆ ಏಕದಿನ ಸರಣಿಯನ್ನು ಗೆದ್ದುಕೊಂಡಿತು. ಈಗ 2024 ರಲ್ಲಿ ಮೂರನೇ ಏಕದಿನ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸಿದೆ.
ಬಾಬರ್-ರಿಜ್ವಾನ್ ಜೊತೆಯಾಟ
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 50 ಓವರ್‌ಗಳಲ್ಲಿ 329 ರನ್ ಗಳಿಸಿತು. ತಂಡದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ ಮತ್ತು ರಿಜ್ವಾನ್ 115 ರನ್ ಜೊತೆಯಾಟವನ್ನಾಡಿದರೆ, ಕಮ್ರಾನ್ ಗುಲಾಮ್ ಕೂಡ ಅರ್ಧಶತಕದ ಕಾಣಿಕೆ ನೀಡಿದರು. ಹೀಗಾಗಿ ಪಾಕಿಸ್ತಾನ ಇಷ್ಟು ದೊಡ್ಡ ಸ್ಕೋರ್ ತಲುಪಲು ಸಾಧ್ಯವಾಯಿತು. ಬಾಬರ್ ಆಝಂ 73 ರನ್, ಮೊಹಮ್ಮದ್ ರಿಜ್ವಾನ್ 80 ರನ್ ಗಳಿಸಿದರೆ, ಕಮ್ರಾನ್ ಗುಲಾಮ್ 196 ಸ್ಟ್ರೈಕ್ ರೇಟ್‌ನಲ್ಲಿ 63 ರನ್ ಗಳಿಸಿದರು.
ಶಾಹೀನ್-ನಸೀಮ್ ಮಾರಕ ದಾಳಿ
330 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 43.1 ಓವರ್‌ಗಳಲ್ಲಿ 248 ರನ್‌ಗಳಿಗೆ ಆಲೌಟ್ ಆಯಿತು. ಪಾಕ್ ಪರ ಶಾಹೀನ್ ಶಾ ಆಫ್ರಿದಿ ಮತ್ತು ನಸೀಮ್ ಶಾ 7 ವಿಕೆಟ್ ಹಂಚಿಕೊಂಡರು. ಶಾಹೀನ್ 4 ವಿಕೆಟ್ ಪಡೆದರೆ, ನಸೀಮ್ 3 ವಿಕೆಟ್ ಪಡೆದರು. ಇವರಲ್ಲದೆ ಅಬ್ರಾರ್ ಅಹ್ಮದ್ 2 ವಿಕೆಟ್, ಸಲ್ಮಾನ್ ಅಘಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Fri, 20 December 24