T20 World Cup 2022: ಕ್ರಿಕೆಟ್ ಪಂದ್ಯದ ವೇಳೆ ಪ್ರೇಮ ನಿವೇದನೆ ಹೊಸದೇನಲ್ಲ. ಇದೀಗ ಸಿಡ್ನಿ ಕ್ರಿಕೆಟ್ ಗ್ರೌಂಡ್ ಕೂಡ ಅಂತಹದ್ದೇ ಶುಭಘಳಿಗೆಗೆ ಸಾಕ್ಷಿಯಾಗಿದೆ. ಗುರುವಾರ ನಡೆದ ಭಾರತ-ನೆದರ್ಲ್ಯಾಂಡ್ಸ್ (India vs Netherlands)
ಪಂದ್ಯದ ವೇಳೆ ಭಾರತೀಯ ಅಭಿಮಾನಿಯೊಬ್ಬ ತನ್ನ ಪ್ರಿಯತಮೆ ಬಳಿ ಪ್ರೇಮ ನಿವೇದನೆ ಮಾಡಿದ್ದಾನೆ. ಎಲ್ಲರೂ ಪಂದ್ಯದ ಗುಂಗಿನಲ್ಲಿದ್ದರೆ ಇತ್ತ ಸ್ಟೇಡಿಯಂನಲ್ಲಿ ಗೆಳೆತಿ ಜೊತೆ ಬಂದಿದ್ದ ಯುವಕನೊಬ್ಬ ಎದ್ದು ತನ್ನ ಮನದಿಂಗಿತವನ್ನು ವ್ಯಕ್ತಪಡಿಸಿದ್ದರು.
ಗೆಳೆಯನ ಸರ್ಪ್ರೈಸ್ ನೋಡಿ ಆಶ್ಚರ್ಯಚಿಕಿತಳಾದ ಯುವತಿ ಆ ಬಳಿಕ ಆತನ ಪ್ರೇಮ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ್ದಾಳೆ. ಈ ವೇಳೆ ಆತ ಯುವತಿಗೆ ಉಂಗುರ ತೊಡಿಸಿದ್ದ. ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ (9) ಬೇಗನೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇನ್ನು ರೋಹಿತ್ ಶರ್ಮಾ 39 ಎಸೆತಗಳಲ್ಲಿ 53 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಜೊತೆಯಾಟವಾಡಿದರು. 3ನೇ ವಿಕೆಟ್ಗೆ 95 ರನ್ಗಳನ್ನು ಕಲೆಹಾಕಿದ ಈ ಜೋಡಿಯು ತಂಡವು ಬೃಹತ್ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಂತೆ 44 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ನೊಂದಿಗೆ ವಿರಾಟ್ ಕೊಹ್ಲಿ ಅಜೇಯ 62 ರನ್ ಬಾರಿಸಿದರೆ, ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 7 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 51 ರನ್ ಸಿಡಿಸಿದ್ದರು. ಪರಿಣಾಮ ಟೀಮ್ ಇಂಡಿಯಾ ಮೊತ್ತ 20 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 179 ಕ್ಕೆ ಬಂದು ನಿಂತಿತು.
ಇನ್ನು 180 ರನ್ಗಳ ಟಾರ್ಗೆಟ್ ಪಡೆದ ನೆದರ್ಲ್ಯಾಂಡ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಟೀಮ್ ಇಂಡಿಯಾ 56 ರನ್ಗಳ ಭರ್ಜರಿ ಜಯ ಸಾಧಿಸಿತು.