Asia cup 2022: ಎರಡು ಪಂದ್ಯ, ಎರಡು ಓವರ್, ಅದೇ ಪರಿಸ್ಥಿತಿ; ರೋಹಿತ್-ದ್ರಾವಿಡ್ ಜೋಡಿಗೆ ಹೊಸ ಟೆನ್ಶನ್..!

| Updated By: ಪೃಥ್ವಿಶಂಕರ

Updated on: Sep 07, 2022 | 5:45 PM

Asia cup 2022: 10 ತಿಂಗಳ ನಂತರ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಸತತ ಎರಡು ಟಿ20 ಪಂದ್ಯಗಳಲ್ಲಿ ಸೋತಿದೆ. ಕಾಕತಾಳೀಯವೆಂಬಂತೆ ಈ ಘಟನೆ ಕಳೆದ ಬಾರಿ ದುಬೈನಲ್ಲೇ ನಡೆದಿತ್ತು.

Asia cup 2022: ಎರಡು ಪಂದ್ಯ, ಎರಡು ಓವರ್, ಅದೇ ಪರಿಸ್ಥಿತಿ; ರೋಹಿತ್-ದ್ರಾವಿಡ್ ಜೋಡಿಗೆ ಹೊಸ ಟೆನ್ಶನ್..!
ದ್ರಾವಿಡ್- ರೋಹಿತ್
Follow us on

ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿಗೆ ಟೀಂ ಇಂಡಿಯಾ (Team India) ನಿರಾಸೆ ಮೂಡಿಸಿದೆ. ಸದ್ಯ ರೋಹಿತ್ ಶರ್ಮಾ (Rohit Sharma) ತಂಡ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಟೀಂ ಇಂಡಿಯಾಗೆ ಇಂಥದ್ದೊಂದು ಕಾಲ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಭಾರತ ಏಷ್ಯಾ ಕಪ್‌ನಲ್ಲಿ ಪ್ರಶಸ್ತಿ ಸ್ಪರ್ಧಿಗಳಾಗಿ ಪಂದ್ಯಾವಳಿ ಪ್ರಾರಂಭಿಸಿತು. ಜೊತೆಗೆ ಆರಂಭ ಕೂಡ ಬಲವಾಗಿತ್ತು. ಮೊದಲೆರಡು ಪಂದ್ಯಗಳನ್ನು ಸುಲಭವಾಗಿ ಗೆದ್ದಿದ್ದ ಭಾರತ, ಎರಡನೇ ಹಂತದಲ್ಲಿ ಆಘಾತ ಎದುರಿಸಿದೆ.

ಮೊದಲು ಪಾಕಿಸ್ತಾನದ ಎದುರು ಸೋತ ಭಾರತ, ಬಳಿಕ ಶ್ರೀಲಂಕಾ ಎದುರು ಸೋತಿತ್ತು. ಈಗ ಭಾರತ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಫೈನಲ್‌ಗೆ ತಲುಪಲು ಈಗ ಭಾರತ ಇತರ ತಂಡಗಳ ಪಲಿತಾಂಶವನ್ನು ಅವಲಂಬಿಸಿದೆ. ಆದರೆ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಸೋಲಿನಲ್ಲಿ ಭಾರತಕ್ಕೆ ಒಂದೇ ರೀತಿಯ ಸಮಸ್ಯೆ ಎದುರಾಗಿದ್ದನ್ನು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

10 ತಿಂಗಳ ನಂತರ ಸತತ 2 ಸೋಲು

ಭಾನುವಾರ ಟೀಂ ಇಂಡಿಯಾ ಪಾಕಿಸ್ತಾನಕ್ಕೆ 182 ರನ್ ಟಾರ್ಗೆಟ್ ನೀಡಿತ್ತು. ಆ ಗುರಿಯನ್ನು ಪಾಕಿಸ್ತಾನ ಐದು ವಿಕೆಟ್‌ಗಳಿಂದ ದಾಟಿತು. ನಿನ್ನೆಯ ಪಂದ್ಯದಲ್ಲಿ ಶ್ರೀಲಂಕಾಕ್ಕೆ 174 ರನ್​ಗಳ ಟಾರ್ಗೆಟ್ ನೀಡಲಾಗಿತ್ತು. ಶ್ರೀಲಂಕಾ ಅದನ್ನು ಬೆನ್ನಟ್ಟಿತು. 10 ತಿಂಗಳ ನಂತರ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಸತತ ಎರಡು ಟಿ20 ಪಂದ್ಯಗಳಲ್ಲಿ ಸೋತಿದೆ. ಕಾಕತಾಳೀಯವೆಂಬಂತೆ ಈ ಘಟನೆ ಕಳೆದ ಬಾರಿ ದುಬೈನಲ್ಲೇ ನಡೆದಿತ್ತು. ಅಲ್ಲದೆ ಎರಡೂ ಬಾರಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ಸೋಲನುಭವಿಸಿತ್ತು. ಆದರೆ ವ್ಯತ್ಯಾಸವೆನೆಂದರೆ ಅದು ಟಿ20 ವಿಶ್ವಕಪ್ ಆದರೆ, ಇದು ಏಷ್ಯಾಕಪ್ ಟೂರ್ನಿಯಾಗಿದೆ ಅಷ್ಟೆ.

ಎರಡು ಪಂದ್ಯ, ಎರಡು ಓವರ್ಗಳು, ಅದೇ ಪರಿಸ್ಥಿತಿ

ಕಳೆದ ಬಾರಿ ಟೀಂ ಇಂಡಿಯಾ ಸೋಲಿಗೆ ಕಳಪೆ ಬ್ಯಾಟಿಂಗ್ ಕಾರಣ. ಈ ಬಾರಿ ಬ್ಯಾಟಿಂಗ್‌ಗಿಂತ ಬೌಲರ್‌ಗಳೇ ಹೆಚ್ಚು ದುಬಾರಿಯಾಗಿದ್ದಾರೆ. ಟೀಂ ಇಂಡಿಯಾದ ಎರಡೂ ಸೋಲಿಗೆ 19ನೇ ಓವರ್ ಕೊಡುಗೆ ಹೆಚ್ಚು ನೀಡಿದೆ. ಟಿ20 ಕ್ರಿಕೆಟ್‌ನಲ್ಲಿ 19ನೇ ಓವರ್‌ ಮಹತ್ವದ್ದಾಗಿದ್ದು, 19ನೇ ಓವರ್ ಬಿಗಿಯಾಗಿದ್ದರೆ, 20ನೇ ಓವರ್‌ನಲ್ಲಿ ಲಾಭ ಗಳಿಸಬಹುದು. ಆದರೆ ಈ ಓವರ್‌ನಲ್ಲಿ ಟೀಂ ಇಂಡಿಯಾಗೆ ಪೆಟ್ಟು ಬಿದ್ದಿತು.

ಕೊನೆಯ 2 ಓವರ್‌ಗಳಲ್ಲಿ ಎಷ್ಟು ರನ್‌ಗಳ ಅಗತ್ಯವಿತ್ತು?

ಪಾಕಿಸ್ತಾನದ ವಿರುದ್ಧ 2 ಓವರ್‌ಗಳಲ್ಲಿ 26 ರನ್‌ಗಳ ಅಗತ್ಯವಿತ್ತು. ಆಗ 19ನೇ ಓವರ್‌ನಲ್ಲಿ 19 ರನ್‌ಗಳು ಹರಿದುಬಂದವು. ಹಾಗಾಗಿ ಕೊನೆಯ ಓವರ್‌ನಲ್ಲಿ ಗೆಲುವಿಗೆ ಕೇವಲ 7 ರನ್‌ಗಳ ಅಗತ್ಯವಿತ್ತು. ಶ್ರೀಲಂಕಾ ವಿರುದ್ಧ 2 ಓವರ್‌ಗಳಲ್ಲಿ 21 ರನ್‌ಗಳ ಅಗತ್ಯವಿತ್ತು. ಈ ವೇಳೆ 19ನೇ ಓವರ್‌ನಲ್ಲಿ 14 ರನ್‌ಗಳು ಕೈ ತಪ್ಪಿದವು. ಮತ್ತೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 7 ರನ್‌ಗಳ ಅಗತ್ಯವಿತ್ತು.

ಎರಡೂ ಬಾರಿ ಭುವನೇಶ್ವರ್ ತಪ್ಪು

ಈ ಎರಡು ಪಂದ್ಯಗಳ ನಡುವೆ ಒಂದು ಸಾಮ್ಯತೆ ಇತ್ತು. ಇದೇ ಹತಾಶೆಗೆ ಮುಖ್ಯ ಕಾರಣ. ಈ ಎರಡೂ ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ 19ನೇ ಓವರ್ ಬೌಲ್ ಮಾಡಿದರು. ರೋಹಿತ್ ಶರ್ಮಾ ಅವರಿಗೆ ಚೆಂಡನ್ನು ಹಸ್ತಾಂತರಿಸಿದರು. ಕಳೆದ ಕೆಲವು ತಿಂಗಳುಗಳಲ್ಲಿ ಭುವನೇಶ್ವರ್ ಡೆತ್ ಓವರ್‌ಗಳಲ್ಲಿ ಬಲಿಷ್ಠವಾಗಿ ಬೌಲಿಂಗ್ ಮಾಡಿದ್ದಾರೆ. ಆದರೆ ಏಷ್ಯಾಕಪ್‌ನ ಎರಡೂ ಪ್ರಮುಖ ಪಂದ್ಯಗಳಲ್ಲಿ ಭುವನೇಶ್ವರ್ 19ನೇ ಓವರ್‌ನಲ್ಲಿ ಹೆಚ್ಚು ರನ್ ನೀಡಿದರು. ಟೀಂ ಇಂಡಿಯಾ ಸೋಲಿಗೆ ಅದೂ ಕೂಡ ಒಂದು ಕಾರಣ. ಈ ಎರಡೂ ಪಂದ್ಯಗಳಲ್ಲಿ ಅರ್ಷದೀಪ್ 20ನೇ ಓವರ್ ಬೌಲ್ ಮಾಡಿ, ಎದುರಾಳಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಅಲ್ಲದೆ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ-ಶ್ರೀಲಂಕಾ ಗೆಲುವಿಗೆ ತಲಾ 7 ರನ್‌ಗಳ ಅಗತ್ಯವಿತ್ತು.

Published On - 5:45 pm, Wed, 7 September 22