Mohammed Shami: ಈ ಸ್ಟಾರ್ ಆಟಗಾರನನ್ನು ಮತ್ತೆ ಭಾರತ ಟಿ20 ತಂಡಕ್ಕೆ ಕರೆತರಲು ಮುಂದಾದ ಬಿಸಿಸಿಐ
Indian Cricket Team: ಕೆಲ ಸಮಯದಿಂದ ಭಾರತ ಟಿ20 ತಂಡದಿಂದ ಹೊರಬಿದ್ದಿದ್ದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಬಿಸಿಸಿಐ ಮುಂದಾಗಿದೆ.
ಕಳೆದ ಏಳು–ಎಂಟು ತಿಂಗಳುಗಳಿಂದ ಭಾರತ ಕ್ರಿಕೆಟ್ ತಂಡದಲ್ಲಿ ಮಹತ್ತರವಾದ ಬದಲಾವಣೆಗಳು ನಡೆಯುತ್ತಲೇ ಇದೆ. ಯುವ ಆಟಗಾರರಿಗೆ ಮಣೆ ಹಾಕುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಐಸಿಸಿ ಟಿ20 ವಿಶ್ವಕಪ್‌ಗೆ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟುತ್ತಿದೆ. ಈಗಾಗಲೇ ವಿಶ್ವಕಪ್ಗಾಗಿ ಕಾಂಗರೂಗಳ ನಾಡಿಗೆ ತೆರಳಲು ಭಾರತ ತಂಡ ಬಹುತೇಕ ಆಯ್ಕೆಯಾಗಿದೆ. ಆದರೆ, ಮೂರು ದಿನಗಳ ಹಿಂದೆ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಅವರಿಗೆ ಇಂಜುರಿಯ ಪ್ರಮಾಣ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡ ಕಾರಣ ಇವರು ಟಿ20 ವಿಶ್ವಕಪ್‌ಗೆ (T20 World Cup) ಅನುಮಾನ ಎಂಬ ಸುದ್ದಿ ಕೇಳಿಬಂದಿದೆ. ಈ ವಿಚಾರ ಹೊರಬೀಳುತ್ತಿದ್ದಂತೆ ಬಿಸಿಸಿಐ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದೆ. ಕೆಲ ಸಮಯದಿಂದ ಭಾರತ ಟಿ20 ತಂಡದಿಂದ ಹೊರಬಿದ್ದಿದ್ದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ.
ಬೆನ್ನು ನೋವಿನ ಸಮಸ್ಯೆ ಎದುರಿಸಿರುವ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್ ವೇಳೆಗೆ ಸಂಪೂರ್ಣವಾಗಿ ಗುಣಮುಖರಾಗಿ ಆಡುವುದು ಅನುಮಾನ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲೂ ಬುಮ್ರಾ ಕಣಕ್ಕಿಳಿದಿರಲಿಲ್ಲ. ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಹಾಗೂ ಏಷ್ಯಾಕಪ್ ಟೂರ್ನಿಯಿಂದಲೂ ಬುಮ್ರಾ ವಿಶ್ರಾಂತಿ ಪಡೆದಿದ್ದಾರೆ. ಆದರೆ, ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿರುವ ವಿಶ್ವಕಪ್‌ಗೆ ಬೂಮ್ರಾ ಲಭ್ಯವಾಗಬಹುದು ಎಂಬ ನಿರೀಕ್ಷೆಯಿಟ್ಟುಕೊಳ್ಳಲಾಗಿತ್ತು. ಆದರೆ, ಬಿಸಿಸಿಐನ ಅಧಿಕಾರಿಯೊಬ್ಬರು ಬುಮ್ರಾ ಆ ಹೊತ್ತಿಗೆ ಗುಣಮುಖರಾಗುವುದು ಅನುಮಾನ ಎಂದಿದ್ದಾರೆ.
ಬುಮ್ರಾ ಜಾಗಕ್ಕೆ ಮತ್ತೊಬ್ಬ ಅನುಭವಿ ಆಘಾತಕಾರಿ ಬೌಲರ್ನ ಅವಶ್ಯಕತೆ ತಂಡಕ್ಕಿದೆ. ಹೀಗಾಗಿ ಬಿಸಿಸಿಐ ಮೊಹಮ್ಮದ್ ಶಮಿ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಶಮಿ ಕೊನೆಯದಾಗಿ ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲಿ ಭಾರತ ಪರ ಕಣಕ್ಕಿಳಿದಿದ್ದರು. ನಂತರ ಅವರಿಗೆ ಅವಕಾಶ ನೀಡಲಾಗಿಲ್ಲ. ಈ ಬಾರಿಯ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯುವುದರಿಂದ ಶಮಿಗೆ ಅಲ್ಲಿನ ಪಿಚ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಬೌನ್ಸಿ ಪಿಚ್‌ಗಳಲ್ಲಿ ಮಿಂಚುವ ಸಾಮರ್ಥ್ಯವನ್ನೂ ಹೊಂದಿದ್ದಾರೆ. ಶಮಿ ಹೊಸ ಚೆಂಡಿನಲ್ಲಿ ವಿಕೆಟ್ ಕಬಳಿಸುವುದರಲ್ಲಿ ನಿಸ್ಸೀಮರು ಎಂಬುದನ್ನು ಸಾಭೀತು ಪಡಿಸಿದ್ದಾರೆ.
“ಮೊಹಮ್ಮದ್ ಶಮಿ ಭಾರತದ ಪ್ರಮುಖ ವೇಗಿಗಳಲ್ಲಿ ಒಬ್ಬರು. ಅವರ ಕೆಲಸದ ಹೊರೆ ಕಡಿಮೆ ಮಾಡಲು ಅವರನ್ನು ಟಿ20 ಮಾದರಿಯಿಂದ ದೂರ ಇಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಇಬ್ಬರು ಸೂಪರ್ ವೇಗಿಗಳು ಗಾಯಗೊಂಡಿರುವ ಕಾರಣ ಭಾರತವು ವಿಶ್ವಾಸಾರ್ಹ ಆಟಗಾರನನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಬೇಕಾಗಿದೆ. ಶಮಿಗೆ ಆಸ್ಟ್ರೇಲಿಯಾದ ಪರಿಸ್ಥಿತಿ ಚೆನ್ನಾಗಿ ಗೊತ್ತು. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಭಾರತದ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಇನ್ಸೈಡ್ ಸ್ಪೋರ್ಟ್ ಜೊತೆ ಮಾತನಾಡಿದ್ದಾರೆ.
ಇತ್ತ ಬೂಮ್ರಾ 2019ರಲ್ಲಿ ತೀವ್ರ ನೋವಿಗೆ ತುತ್ತಾಗಿ ಸುದೀರ್ಘ ವಿಶ್ರಾಂತಿ ಪಡೆದುಕೊಂಡಿದ್ದರು. ಇದೀಗ ಮತ್ತೆ ಅದೇ ರೀತಿ ಬೆನ್ನುನೋವ ಕಾಡುತ್ತಿದೆ ಎನ್ನಲಾಗಿದೆ. ವಿಶ್ವಕಪ್‌ನ ತಂಡದ ಘೋಷಣೆಗೆ ಕೇವಲ ಒಂದು ತಿಂಗಳ ಕಾಲಾವಕಾಶ ಮಾತ್ರವೇ ಬಾಕಿಯಿದೆ. ಹೀಗಾಗಿ ಬಿಸಿಸಿಐ ಹಾಗೂ ಆಯ್ಕೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಎಲ್ಲಾದರು ಬುಮ್ರಾ ಅಲಭ್ಯರಾದರು ಎಂದಾದರೆ ಮತ್ತೊಬ್ಬ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡುವುದು ಖಚಿತ.
Published On - 7:35 am, Sun, 14 August 22