Asia Cup 2022: ಲಂಕಾ ತಂಡವನ್ನು 41 ರನ್​ಗಳಿಂದ ಮಣಿಸಿ ಏಷ್ಯಾಕಪ್​ನಲ್ಲಿ ಶುಭಾರಂಭ ಮಾಡಿದ ಭಾರತ ವನಿತಾ ತಂಡ..!

| Updated By: ಪೃಥ್ವಿಶಂಕರ

Updated on: Oct 01, 2022 | 4:59 PM

Asia Cup 2022: ಏಷ್ಯಾಕಪ್​ನ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ವನಿತಾ ಬಳಗ ಶ್ರೀಲಂಕಾ ಮಹಿಳಾ ತಂಡವನ್ನು 41 ರನ್​ಗಳಿಂದ ಮಣಿಸಿ ಟೂರ್ನಿಯಲ್ಲಿ ಭರ್ಜರಿ ಆರಂಭ ಮಾಡಿದೆ.

Asia Cup 2022: ಲಂಕಾ ತಂಡವನ್ನು 41 ರನ್​ಗಳಿಂದ ಮಣಿಸಿ ಏಷ್ಯಾಕಪ್​ನಲ್ಲಿ ಶುಭಾರಂಭ ಮಾಡಿದ ಭಾರತ ವನಿತಾ ತಂಡ..!
ಭಾರತ ವನಿತಾ ತಂಡ
Follow us on

ಏಷ್ಯಾಕಪ್​ನ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ವನಿತಾ ಬಳಗ ಶ್ರೀಲಂಕಾ ಮಹಿಳಾ ತಂಡವನ್ನು 41 ರನ್​ಗಳಿಂದ ಮಣಿಸಿ ಟೂರ್ನಿಯಲ್ಲಿ ಭರ್ಜರಿ ಆರಂಭ ಮಾಡಿದೆ. ಏಷ್ಯಾಕಪ್​ಗೂ ಮುನ್ನ ಇಂಗ್ಲೆಂಡ್ ಮಹಿಳಾ ತಂಡದೆದುರು ಆಡಿದ ಏಕದಿನ ಸರಣಿಯನ್ನು 3-0 ಅಂತರದಿಂದ ಗೆಲ್ಲುವುದರೊಂದಿಗೆ ಇಂಗ್ಲೆಂಡ್ ನೆಲದಲ್ಲಿ ಬರೋಬ್ಬರಿ 23 ವರ್ಷಗಳ ಬಳಿಕ ಏಕದಿನ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿದ ಹರ್ಮನ್​ಪ್ರೀತ್ ಪಡೆ, ಏಷ್ಯಾಕಪ್​ನಲ್ಲೂ ಅದೇ ಪ್ರದರ್ಶನವನ್ನು ಮುಂದುವರೆಸಿದೆ. ಟೀಂ ಇಂಡಿಯಾ ನೀಡಿದ 150 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ್ದ ಶ್ರೀಲಂಕಾ ಮಹಿಳಾ ತಂಡ 18.2 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 41 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಏಷ್ಯಾಕಪ್​ನ ಮೊದಲ ಪಂದ್ಯದಲ್ಲಿ ಬಲಿಷ್ಠ ಲಂಕಾ ತಂಡವನ್ನು ಮಣಿಸುವುದರೊಂದಿಗೆ ಭಾರತ ವನಿತಾ ತಂಡ ಟೂರ್ನಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ಪರ ಆರಂಭಿಕರಾಗಿ ಕಣಕ್ಕಿಳಿದ ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂದನಾ ನಿರೀಕ್ಷಿತ ಆರಂಭ ನೀಡಲಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಮೃತಿ ಈ ಪಂದ್ಯದಲ್ಲಿ ಕೇವಲ 6 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಕೆಲವು ದಿನಗಳಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಮತ್ತೊರ್ವ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಈ ಪಂದ್ಯದಲ್ಲೂ ಕೇವಲ 10 ರನ್​ಗಳಿಗೆ ಸುಸ್ತಾದರು.

ಆರಂಭಿಕರಿಬ್ಬರೂ ಔಟಾದ ಬಳಿಕ ಜೊತೆಯಾದ ನಾಯಕಿ ಹರ್ಮನ್​ಪ್ರೀತ್ ಹಾಗೂ ಜೆಮಿಮಾ ರಾಡ್ರಿಗಸ್ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಜೊತೆಗೆ ಈ ಜೋಡಿ ತಂಡವನ್ನು ಶತಕದ ಗಡಿ ದಾಟಿಸಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ನಾಯಕಿ ಕೌರ್ ವೈಯಕ್ತಿಕ 33 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ ನಿದಾನಗತಿಯ ಬ್ಯಾಟಿಂಗ್ ಮಾಡಿದ ಕೌರ್ 2 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು.

ನಾಯಕಿಯ ವಿಕೆಟ್ ಪತನದ ಬಳಿಕವೂ ತನ್ನ ಅಬ್ಬರದ ಇನ್ನಿಂಗ್ಸ್ ಮುಂದುವರೆಸಿದ ಜೆಮಿಮಾ ರಾಡ್ರಿಗಸ್ ಕೇವಲ 53 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 76 ರನ್​ ಚಚ್ಚಿದರು. ಇವರ ವಿಕೆಟ್ ಬಳಿಕ ಬಂದ ಬಾಲಂಗೋಚಿಗಳು ಹೆಚ್ಚು ಅಬ್ಬರಿಸಲು ಸಾಧ್ಯವಾಗದೆ ಒಂದಂಕ್ಕಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಅಂತಿಮವಾಗಿ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ 150 ರನ್ ಗಳಿಸಿತು.

ಹರ್ಮನ್ ಪಡೆ ನೀಡಿದ 150 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಲಂಕಾ ಮಹಿಳಾ ತಂಡಕ್ಕೆ ಆರಂಭಿಕ ಆಟಗಾರ್ತಿ ಹರ್ಷಿತಾ ಸಮರವಿಕ್ರಮ 26 ರನ್​ಗಳಿಸಿ ಉತ್ತಮ ಆರಂಭವನ್ನು ನೀಡಲು ಪ್ರಯತ್ನಿಸಿದರು. ಆದರೆ 4ನೇ ಓವರ್​ನಲ್ಲಿ ನಾಯಕಿ ಅಟ್ಟಾಪಟು ವಿಕೆಟ್ ಕಳೆದುಕೊಳ್ಳುವುದರೊಂದಿಗೆ ತಂಡ ಹಿನ್ನಡೆ ಅನುಭವಿಸಿತು. ಈ ವಿಕೆಟ್ ಬಳಿಕ ಬಂದ ಶೆಹನಿ ಕೂಡ 9 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಹಾಸಿನಿ ಪೆರೇರಾ ಒಂದೆಡೆ ವಿಕೆಟ್ ಉರುಳುತ್ತಿದ್ದರೂ ತಮ್ಮ ಆಟ ಮುಂದುವರೆಸಿ ಕೊನೆಯವರೆಗೂ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ ಇನ್ನೊಂದು ಬದಿಯಿಂದ ಯಾವುದೇ ಸಹಕಾರ ಸಿಗದೆ ಅಂತಿಮವಾಗಿ 30 ರನ್​ಗಳಿಗೆ ತನ್ನ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಬಂದ ಕೆಳಕ್ರಮಾಂಕದ ಆಟಗಾರ್ತಿಯರು ಹೆಚ್ಚೆನೂ ಪ್ರತಿರೋಧ ತೋರದೆ ಪೆವಿಲಿಯನ್​ ಸೇರಿದರು. ಹೀಗಾಗಿ 18.2 ಓವರ್​ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡ ಲಂಕಾ ತಂಡ 41 ರನ್​ಗಳಿಂದ ಸೋಲೊಪ್ಪಿಕೊಂಡಿತು.

Published On - 4:27 pm, Sat, 1 October 22