Pak vs Eng: ಪಾಕ್ ಬ್ಯಾಟರ್ ಪವರ್ಫುಲ್ ಹೊಡೆತಕ್ಕೆ ತಬ್ಬಿಬ್ಬಾದ ಲೆಗ್ ಅಂಪೈರ್; ವಿಡಿಯೋ ನೋಡಿ
Pak vs Eng: ಚೆಂಡು ತನ್ನತ್ತ ಬರುತ್ತಿರುವುದನ್ನು ಗಮನಿಸಿದ ಅಂಪೈರ್ ಅಲೀಂ ದಾರ್ ಅದನ್ನು ತಪ್ಪಿಸಲು ತೀವ್ರ ಪ್ರಯತ್ನ ನಡೆಸಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರಭಸವಾಗಿ ಬಂದ ಚೆಂಡು ನೆರವಾಗಿ ಅಂಪೈರ್ನ ಎಡಗಾಲಿನ ತೊಡೆಗೆ ಬಡಿಯಿತು.
ಟಿ20 ಕ್ರಿಕೆಟ್ ಇಷ್ಟು ಕಡಿಮೆ ಅವದಿಯಲ್ಲಿ ಇಷ್ಟೊಂದು ಹೆಸರು ಮಾಡಿರುವುದಕ್ಕೆ ಪ್ರಮುಖ ಕಾರಣವೇ ಆಟದಲ್ಲಿರುವ ಹೊಡಿಬಡಿ ಸಿದ್ಧಾಂತ. ತಂಡದ 11 ಆಟಗಾರರಿಗೆ ಎದುರಿಸಲು ಕೇವಲ 120 ಎಸೆತಗಳು ಸಿಗುವುದರಿಂದ ಬ್ಯಾಟಿಂಗ್ಗಿಳಿದ ಪ್ರತಿಯೊಬ್ಬ ಬ್ಯಾಟರ್ ಬೌಂಡರಿ- ಸಿಕ್ಸರ್ ಮಳೆಗರೆಯಲು ಪ್ರಯತ್ನಿಸುತ್ತಾರೆ. ಒಮ್ಮೊಮ್ಮೆ ಈ ಯತ್ನದಲ್ಲಿ ಬ್ಯಾಟರ್ಗಳು ಯಶಸ್ವಿಯಾದರೆ, ಕೆಲವೊಮ್ಮೆ ಬೌಲರ್‌ಗಳು ಅವರ ವಿಕೆಟ್ ಉರುಳಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಈ ಸಂದರ್ಭದಲ್ಲಿ ಬ್ಯಾಟರ್‌ಗಳ ಬಲವಾದ ಹೊಡೆತಗಳಿಂದ ಬೌಲರ್‌ಗಳು ಮತ್ತು ಫೀಲ್ಡರ್‌ಗಳು ಕೆಲವೊಮ್ಮೆ ಗಂಭೀರವಾಗಿ ಗಾಯಗೊಂಡಿರುವುದು ಉಂಟು. ಇನ್ನು ಅಪರೂಪಕ್ಕೊಮ್ಮೆ ಫೀಲ್ಡ್ ಅಂಪೈರ್‌ಗಳು ಎಷ್ಟೇ ಜಾಗರೂಕರಾಗಿದ್ದರೂ ಬ್ಯಾಟರ್‌ಗಳ ಪವರ್ಫುಲ್ ಶಾಟ್ನಿಂದ ಸರಿಯಾಗಿ ಪೆಟ್ಟು ತಿನ್ನುವುದನ್ನು ನಾವು ಕಂಡಿದ್ದೇವೆ. ಈಗ ಅಂತಹದ್ದೆ ಒಂದು ಘಟನೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ (England and Pakistan) ನಡುವಿನ ಆರನೇ ಟಿ20 ಪಂದ್ಯದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಫೀಲ್ಡ್ ಅಂಪೈರ್ ಜವಾಬ್ದಾರಿ ಹೊತ್ತಿದ್ದ ಅಲೀಂ ದಾರ್ ಬಲವಾದ ಪೆಟ್ಟು ತಿಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಪಾಕ್ ತಂಡದ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಇಂಗ್ಲೆಂಡ್ ಬೌಲರ್ ರಿಚರ್ಡ್ ಗ್ಲೀಸನ್ ಎಸೆದ ಆ ಓವರ್‌ನಲ್ಲಿ ಬ್ಯಾಟರ್ ಹೈದರ್ ಫುಲ್ ಶಾಟ್ ಆಡಿದರು. ಚೆಂಡು ತನ್ನತ್ತ ಬರುತ್ತಿರುವುದನ್ನು ಗಮನಿಸಿದ ಅಂಪೈರ್ ಅಲೀಂ ದಾರ್ ಅದನ್ನು ತಪ್ಪಿಸಲು ತೀವ್ರ ಪ್ರಯತ್ನ ನಡೆಸಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರಭಸವಾಗಿ ಬಂದ ಚೆಂಡು ನೆರವಾಗಿ ಅಂಪೈರ್ನ ಎಡಗಾಲಿನ ತೊಡೆಗೆ ಬಡಿಯಿತು. ಈ ಬಲವಾದ ಹೊಡೆತದಿಂದ ಅಂಪೈರ್ ದಾರ್ ಕೆಲಕಾಲ ನೋವಿನಿಂದ ಬಳಲಿದರು.
Ouch! ?#PAKvENG | #UKSePK pic.twitter.com/DaD6EwSaVV
— Pakistan Cricket (@TheRealPCB) September 30, 2022
ಈ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್‌ಗಳಿಂದ ಗೆದ್ದು ಏಳು ಏಕದಿನ ಸರಣಿಯನ್ನು 3-3ರಲ್ಲಿ ಸಮಬಲಗೊಳಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 6 ವಿಕೆಟ್‌ಗೆ 169 ರನ್ ಗಳಿಸಿದರೆ, ಇಂಗ್ಲೆಂಡ್ 14.3 ಓವರ್‌ಗಳಲ್ಲಿ ಸುಲಭವಾಗಿ ಗುರಿ ತಲುಪಿತು. ಫಿಲ್ ಸಾಲ್ಟ್ 41 ಎಸೆತಗಳಲ್ಲಿ 88 ರನ್ ಗಳಿಸಿದರು. ಹೇಲ್ಸ್ 27, ಮಲಾನ್ 26 ಮತ್ತು ಡಕೆಟ್ 26 ರನ್ ಗಳಿಸಿದರು. ಸರಣಿಯ ಫಲಿತಾಂಶವನ್ನು ನಿರ್ಧರಿಸುವ ಅಂತಿಮ ಟಿ20 ಪಂದ್ಯ ನಾಳೆ ನಡೆಯಲಿದೆ.
ಬಾಬರ್ ದಾಖಲೆ
ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ 59 ಎಸೆತಗಳಲ್ಲಿ 87 ರನ್ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದೊಂದಿಗೆ ಬಾಬರ್ ಟಿ20 ಕ್ರಿಕೆಟ್ನಲ್ಲಿ 3 ಸಾವಿರ ರನ್ ಪೂರೈಸಿದರು. ಈ ಸಾಧನೆಯೊಂದಿಗೆ ಪಾಕ್ ನಾಯಕ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ. ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 3 ಸಾವಿರ ರನ್ ಪೂರೈಸಿದ ವಿಶ್ವ ದಾಖಲೆ ರನ್ ಮೆಷಿನ್ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ 81 ಇನಿಂಗ್ಸ್ಗಳ ಮೂಲಕ ಈ ಮೈಲುಗಲ್ಲು ಸಾಧಿಸಿದ್ದರು. ಇದೀಗ ಪಾಕ್ ತಂಡದ ನಾಯಕ ಬಾಬರ್ ಆಜಂ ಕೂಡ 81 ಇನಿಂಗ್ಸ್ ಮೂಲಕವೇ 3 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
Published On - 3:31 pm, Sat, 1 October 22