
ಚಾಂಪಿಯನ್ಸ್ ಟ್ರೋಫಿ (Champions Trophy 2025) ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಂ ಇಂಡಿಯಾಕ್ಕೆ ಶುಭಾಶಯಗಳ ಪ್ರಮಾಣ ಎಷ್ಟಿದೆಯೋ, ಅಷ್ಟ್ರೇ ಪ್ರಮಾಣದಲ್ಲಿ ಟೀಕೆಗಳು ಎದುರಾಗುತ್ತಿವೆ. ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವುದು ಬಹುಶಃ ಕ್ರಿಕೆಟ್ ಲೋಕದ ಭಾಗಶಃ ತಂಡಗಳಿಗೆ ಇಷ್ಟವಾಗಿಲ್ಲ ಎಂದು ಕಾಣುತ್ತದೆ. ಹೀಗಾಗಿಯೇ ಟ್ರೋಫಿ ಗೆದ್ದ ಬಳಿಕ ತರಹೆವಾರಿ ಕಾಮೆಂಟ್‌ಗಳು ಹೊರಬೀಳುತ್ತಿವೆ. ಅದರಲ್ಲೂ ನೆರೆಯ ರಾಷ್ಟ್ರ ಪಾಕಿಸ್ತಾನದ ಮಾಜಿ ಕ್ರಿಕೆಟಿಗರಂತೂ ರಾತ್ರಿಯಿಡೀ ನಿದ್ದೆ ಮಾಡಿಲ್ಲ ಎಂದು ತೊರುತ್ತದೆ. ಒಬ್ಬರಾದ ಬಳಿಕ ಒಬ್ಬರಂತೆ ಟೀಂ ಇಂಡಿಯಾದ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಇದೀಗ ಅವರ ಸಾಲಿಗೆ ಪಾಕ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ (Inzamam-ul-Haq) ಕೂಡ ಸೇರಿಕೊಂಡಿದ್ದಾರೆ.
ವಾಸ್ತವವಾಗಿ ಇಂಜಮಾಮ್ ಉಲ್ ಹಕ್ ಟೀಂ ಇಂಡಿಯಾ ಪ್ರಶಸ್ತಿ ಗೆದ್ದಿರುವ ಬಗ್ಗೆ ಯಾವುದೇ ತಕರಾರು ತೆಗೆದಿಲ್ಲ. ಬದಲಿಗೆ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ವಿರುದ್ಧ ಇಂಜಮಾಮ್ ಉಲ್ ಹಕ್ ಬೆಂಕಿಯುಗುಳಿದ್ದಾರೆ. ಒಂದು ಸಮಯದಲ್ಲಿ ಪಾಕ್ ತಂಡದ ವಿರುದ್ಧ ಆಡುವುದನ್ನು ತಪ್ಪಿಸಿಕೊಳ್ಳಲು ಶಾರ್ಜಾದಿಂದ ಪರಾರಿಯಾಗಲು ಯತ್ನಿಸಿದ್ದ ಸುನಿಲ್ ಗವಾಸ್ಕರ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದಿದ್ದಾರೆ.
ಇಂಜಮಾಮ್ ಉಲ್ ಹಕ್ ಈ ರೀತಿ ಆಕ್ರೋಶಬರಿತ ಮಾತುಗಳನ್ನಾಡಲು ಕಾರಣವೆಂದರೆ, ಸುನಿಲ್ ಗವಾಸ್ಕರ್ ನೀಡಿದ್ದ ಅದೊಂದು ಹೇಳಿಕೆ. ಚಾಂಪಿಯನ್ಸ್ ಟ್ರೋಫಿಯ ವೇಳೆ ಸುನಿಲ್ ಗವಾಸ್ಕರ್,‘ಭಾರತದ ಬಿ ತಂಡ ಕೂಡ ಪಾಕಿಸ್ತಾನಕ್ಕೆ ಸವಾಲು ಹಾಕಬಲ್ಲದು. ‘ಭಾರತದ ಬಿ ತಂಡವು ಖಂಡಿತವಾಗಿಯೂ ಪಾಕಿಸ್ತಾನವನ್ನು ತೊಂದರೆಗೆ ಸಿಲುಕಿಸಬಹುದು ಎಂದು ನಾನು ಭಾವಿಸುತ್ತೇನೆ. ಸಿ ತಂಡದ ಬಗ್ಗೆ ನನಗೆ ಖಚಿತವಿಲ್ಲ, ಆದರೆ ಪ್ರಸ್ತುತ ಫಾರ್ಮ್ ಅನ್ನು ಗಮನಿಸಿದರೆ, ಭಾರತ ಬಿ ತಂಡವನ್ನು ಸೋಲಿಸುವುದು ಪಾಕಿಸ್ತಾನಕ್ಕೆ ತುಂಬಾ ಕಷ್ಟಕರವಾಗಿರುತ್ತದೆ ಎಂದಿದ್ದರು.
“Gavaskar should control his tongue before speaking about other country.”
Inzamam-ul-Haqpic.twitter.com/U6k0mQcHn5
— Cricketopia (@CricketopiaCom) March 9, 2025
ಗವಾಸ್ಕರ್ ಅವರ ಈ ಹೇಳಿಕೆಯಿಂದ ಕೆಂಡಾಮಂಡಲಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್, ‘ಇಡೀ ಟೂರ್ನಿಯಲ್ಲಿ ಚೆನ್ನಾಗಿ ಆಡಿದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅವರಿಗೆ ಅಭಿನಂದನೆಗಳು. ಆದರೆ ಶ್ರೀ ಗವಾಸ್ಕರ್ ಕೂಡ ಅಂಕಿಅಂಶಗಳನ್ನು ನೋಡಬೇಕಾಗುತ್ತದೆ. ಒಂದು ಕಾಲದಲ್ಲಿ ಪಾಕಿಸ್ತಾನ ವಿರುದ್ಧ ಆಡುವುದನ್ನು ತಪ್ಪಿಸಿಕೊಳ್ಳಲು ಶಾರ್ಜಾದಿಂದ ಪಲಾಯನ ಮಾಡಲು ನಿರ್ಧರಿಸಿದ್ದ ಗವಾಸ್ಕರ್ ನಾಲಿಗೆಯನ್ನು ಹರಿಬಿಡಬಾರದು. ಅವರು ನಮಗಿಂತ ಹಿರಿಯರು, ನಮ್ಮ ಹಿರಿಯರು. ನಾವು ಅವರನ್ನು ತುಂಬಾ ಗೌರವಿಸುತ್ತೇವೆ, ಆದರೆ ಯಾವುದೇ ದೇಶದ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನೀವು ನಿಮ್ಮ ತಂಡವನ್ನು ಎಷ್ಟು ಬೇಕಾದರೂ ಹೊಗಳಬಹುದು, ಆದರೆ ಇತರ ತಂಡಗಳ ಬಗ್ಗೆ ಅಂತಹ ಕಾಮೆಂಟ್‌ಗಳನ್ನು ಮಾಡುವುದು ಒಳ್ಳೆಯದಲ್ಲ.
ಇದನ್ನೂ ಓದಿ: ಮೊದಲು ಸರಣಿ ಸೋಲು, ನಂತರ ಚಾಂಪಿಯನ್; ಭಾರತದ ಗೆಲುವಿನಲ್ಲಿ ಹೀಗೊಂದು ಕಾಕತಾಳೀಯ
‘ಅವರು ಅಂಕಿಅಂಶಗಳನ್ನು ನೋಡಬೇಕು, ಆಗ ಪಾಕಿಸ್ತಾನ ಎಲ್ಲಿದೆ ಎಂದು ಅವರಿಗೆ ತಿಳಿಯುತ್ತದೆ. ಅವರು ಅಂತಹ ಹೇಳಿಕೆ ನೀಡಿದ್ದು ನನಗೆ ತುಂಬಾ ಬೇಸರ ತಂದಿದೆ. ಅವರು ಒಬ್ಬ ಶ್ರೇಷ್ಠ ಮತ್ತು ಗೌರವಾನ್ವಿತ ಕ್ರಿಕೆಟಿಗ, ಆದರೆ ಅಂತಹ ಕಾಮೆಂಟ್‌ಗಳನ್ನು ಮಾಡುವ ಮೂಲಕ ಅವರು ತಮ್ಮ ಗೌರವಕ್ಕೆ ತಾವೇ ದಕ್ಕೆ ತಂದುಕೊಳ್ಳುತ್ತಿದ್ದಾರೆ. ಅವರು ತನ್ನ ನಾಲಿಗೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Mon, 10 March 25