Breaking news: ಏಕದಿನ ಏಷ್ಯಾಕಪ್​ಗೆ ಟೀಂ ಇಂಡಿಯಾ ಪ್ರಕಟ; ಸಂಜು ಔಟ್, ತಿಲಕ್ ಇನ್..!

|

Updated on: Aug 21, 2023 | 2:07 PM

India's Squad For Asia Cup 2023: ಆಗಸ್ಟ್ 30 ರಿಂದ ಆರಂಭವಾಗಲಿರುವ ಏಕದಿನ ಏಷ್ಯಾಕಪ್‌ಗೆ 17 ಸದಸ್ಯರ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ದೆಹಲಿಯಲ್ಲಿ ಅಜಿತ್ ಅಗರ್ಕರ್ ನೇತೃತ್ವದಲ್ಲಿ ನಡೆದ ​​ಸಭೆಯ ಬಳಿಕ ತಂಡವನ್ನು ಪ್ರಕಟಿಸಲಾಗಿದೆ. ಎಂದಿನಂತೆ ಟೀಂ ಇಂಡಿಯಾದ ನಾಯಕತ್ವ ರೋಹಿತ್ ಶರ್ಮಾ ಅವರ ಕೈಯಲ್ಲಿದ್ದು, ಉಪನಾಯಕರಾಗಿ ಹಾರ್ದಿಕ್ ಪಾಂಡ್ಯ ಮುಂದುವರೆಯಲ್ಲಿದ್ದಾರೆ.

Breaking news: ಏಕದಿನ ಏಷ್ಯಾಕಪ್​ಗೆ ಟೀಂ ಇಂಡಿಯಾ ಪ್ರಕಟ; ಸಂಜು ಔಟ್, ತಿಲಕ್ ಇನ್..!
ಟೀಂ ಇಂಡಿಯಾ
Follow us on

ಆಗಸ್ಟ್ 30 ರಿಂದ ಆರಂಭವಾಗಲಿರುವ ಏಕದಿನ ಏಷ್ಯಾಕಪ್‌ಗೆ (Asia Cup 2023) 17 ಸದಸ್ಯರ ಟೀಂ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ. ದೆಹಲಿಯಲ್ಲಿ ಅಜಿತ್ ಅಗರ್ಕರ್ (Ajit Agarkar) ನೇತೃತ್ವದಲ್ಲಿ ನಡೆದ ​​ಸಭೆಯ ಬಳಿಕ ಈ ತಂಡವನ್ನು ಪ್ರಕಟಿಸಲಾಗಿದೆ. ಎಂದಿನಂತೆ ಟೀಂ ಇಂಡಿಯಾದ ನಾಯಕತ್ವ ರೋಹಿತ್ ಶರ್ಮಾ (Rohit Sharma) ಅವರ ಕೈಯಲ್ಲಿದ್ದು, ಉಪನಾಯಕರಾಗಿ ಹಾರ್ದಿಕ್ ಪಾಂಡ್ಯ (Hardik Pandya) ಮುಂದುವರೆಯಲ್ಲಿದ್ದಾರೆ. ನಿರೀಕ್ಷೆಯಂತೆ ಬಹಳ ದಿನಗಳ ನಂತರ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಏಷ್ಯಾಕಪ್ ಮೂಲಕ ಟೀಂ ಇಂಡಿಯಾಕ್ಕೆ ಮರಳಿದ್ದಾರೆ. ಆದರೆ ಈ ಮೊದಲೇ ಊಹಿಸಿದಂತೆ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಏಕದಿನ ಏಷ್ಯಾಕಪ್ ತಂಡದಿಂದ ಕೈಬಿಡಲಾಗಿದೆ. ಆದರೆ ಅಚ್ಚರಿಯ ಆಯ್ಕೆ ಎಂಬಂತೆ ಕೇವಲ 8 ಟಿ20 ಪಂದ್ಯಗಳನ್ನಾಡಿರುವ ಹಾಗೂ ಒಂದೇ ಒಂದು ಏಕದಿನ ಪಂದ್ಯವನ್ನಾಡಿದ ಅನುಭವ ಹೊಂದಿರದ ಎಡಗೈ ಬ್ಯಾಟರ್ ತಿಲಕ್ ವರ್ಮಾ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

17 ಸದಸ್ಯರ ತಂಡ ಪ್ರಕಟ

ಪಾಕಿಸ್ತಾನ ಹಾಗೂ ಶ್ರೀಲಂಕಾ ಜಂಟಿಯಾಗಿ ಆತಿಥ್ಯ ನೀಡುತ್ತಿರುವ ಈ ಏಕದಿನ ಏಷ್ಯಾಕಪ್​ಗೆ ಈಗಾಗಲೇ ಪ್ರಮುಖ ಸ್ಪರ್ಧಿಗಳಾದ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು 17 ಸದಸ್ಯರ ಬಲಿಷ್ಠ ತಂಡವನ್ನು ಈ ಪಂದ್ಯಾವಳಿಗೆ ಪ್ರಕಟಿಸಿದ್ದವು. ವಾಸ್ತವವಾಗಿ ವಿಶ್ವಕಪ್​ಗೆ ಭಿನ್ನವಾಗಿ ಏಷ್ಯಾಕಪ್​ನಲ್ಲಿ 15 ಸದಸ್ಯರ ಬದಲು 17 ಸದಸ್ಯರ ತಂಡವನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಪಾಕಿಸ್ತಾನ ಹಾಗೂ ಶ್ರೀಲಂಕಾ 17 ಸದಸ್ಯರ ತಂಡವನ್ನು ಪ್ರಕಟಿಸಿದ್ದವು. ಇದೀಗ ಬಿಸಿಸಿಐ ಕೂಡ ಈ ಏಷ್ಯನ್ ವಿಶ್ವಕಪ್​ಗೆ 17 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

ತಂಡ ಹೀಗಿದೆ

ಈಗ ಪ್ರಕಟವಾಗಿರುವ 17 ಸದಸ್ಯರ ಏಷ್ಯಾಕಪ್ ತಂಡದಲ್ಲಿ 8 ಜನ ಬ್ಯಾಟರ್​ಗಳು ಆಯ್ಕೆಯಾಗಿದ್ದರೆ, ಇಬ್ಬರು ವೇಗದ ಬೌಲಿಂಗ್ ಆಲ್​ರೌಂಡರ್ ಹಾಗೂ ಇಬ್ಬರು ಸ್ಪಿನ್ ಆಲ್​ರೌಂಡರ್ ಸೇರಿದಂತೆ ಒಟ್ಟು ನಾಲ್ವರು ಆಟಗಾರರು ಆಲ್​ರೌಂಡರ್ ಕೋಟಾದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ನಾಲ್ವರು ಆಟಗಾರರು ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆದಿದ್ದರೆ, ತಂಡದಲ್ಲಿ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಮಾತ್ರ ಆಯ್ಕೆಯಾಗಿದ್ದಾರೆ.

ಒಡಿಐ ಏಷ್ಯಾಕಪ್​ ಸ್ಟ್ರೈಕ್ ರೇಟ್ ವಿಚಾರದಲ್ಲಿ ಈ ತಂಡದ ಆಟಗಾರರೇ ಬೆಸ್ಟ್

ಬ್ಯಾಟಿಂಗ್ ವಿಭಾಗ- ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ತಿಲಕ್ ವರ್ಮಾ, ಇಶಾನ್ ಕಿಶನ್.

ಆಲ್​ರೌಂಡರ್ಸ್​- ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್.

ಬೌಲಿಂಗ್ ವಿಭಾಗ- ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.

ರಾಹುಲ್- ಶ್ರೇಯಸ್ ಇನ್

ಈ ಮೊದಲು ಟೀಂ ಇಂಡಿಯಾ ಅಭಿಮಾನಿಗಳಿಗಿದ್ದ ಒಂದೇ ಒಂದು ಆತಂಕವೆಂದರೆ, ಈ ಟೂರ್ನಿಗೆ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಲಭ್ಯರಾಗುತ್ತಾರಾ ಎಂಬುದು. ಇದೀಗ ಅಭಿಮಾನಿಗಳ ಆತಂಕಕ್ಕೆ ತೆರೆ ಬಿದ್ದಿದ್ದು, ಇಂಜುರಿಯಿಂದ ಚೇತರಿಸಿಕೊಂಡಿರುವ ರಾಹುಲ್ ಹಾಗೂ ಅಯ್ಯರ್ ಟೀಂ ಇಂಡಿಯಾಕ್ಕೆ ಮರಳಿದ್ದಾರೆ. ಈ ಇಬ್ಬರ ಆಗಮನದಿಂದ ತಂಡದಲ್ಲಿದ್ದ ನಾಲ್ಕನೇ ಕ್ರಮಾಂಕದ ಕೊರತೆ ಶ್ರೇಯಸ್ ಅಯ್ಯರ್ ರೂಪದಲ್ಲಿ ನೀಗಿದರೆ, ಕೆಎಲ್ ರಾಹುಲ್ ಆಗಮನದಿಂದ ಕೀಪಿಂಗ್ ಹಾಗೂ ಬ್ಯಾಟಿಂಗ್ ಮೂಲಕ ತಂಡದ ಬಲ ಮತ್ತಷ್ಟು ಹೆಚ್ಚಿದೆ.

ಏಕದಿನ ಏಷ್ಯಾಕಪ್​ನಲ್ಲಿ ಅತ್ಯಧಿಕ ಗೆಲುವು ದಾಖಲಿಸಿದ ತಂಡಗಳಿವು

ಸಂಜು, ಚಾಹಲ್ ಔಟ್!

ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ಪ್ರವಾಸದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಎಡವಿದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್​ಗೆ ಏಷ್ಯಾಕಪ್ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ( ಬ್ಯಾಕ್ ಅಪ್ ಆಟಗಾರನಾಗಿ ಆಯ್ಕೆ ಮಾಡಲಾಗಿದೆ). ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಗಮನಾರ್ಹ ಪ್ರದರ್ಶನ ನೀಡಿದರಾದರೂ, ಅದ್ಯಾಕೋ ಆ ಇನ್ನಿಂಗ್ಸ್ ಆಯ್ಕೆ ಮಂಡಳಿಯ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಹಾಗೆಯೇ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಗೂಗ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಏಷ್ಯಾಕಪ್ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಅದ್ಯಾಕೋ ಆಯ್ಕೆ ಮಂಡಳಿ ಚಾಹಲ್​ ಮೇಲೆ ಕೃಪ ಕಟಾಕ್ಷ ತೋರಿಲ್ಲ.

ತಿಲಕ್ ವರ್ಮಾ​ ಅಚ್ಚರಿಯ ಆಯ್ಕೆ

ಈ ಮೊದಲು ಟೀಂ ಇಂಡಿಯಾ ಆಯ್ಕೆಗೆ ಸಂಬಂಧಿಸಿದಂತೆ ಹೊರಬಿದ್ದ ಸುದ್ದಿಗಳಂತೆಯೇ ಟೀಂ ಇಂಡಿಯಾ ಆಯ್ಕೆಯಾಗಿದೆ. ಆದರೆ ತಂಡದಲ್ಲಿ ಅಚ್ಚರಿಯ ಆಯ್ಕೆಯೆಂದರೆ ಅದು ತಿಲಕ್ ವರ್ಮಾ. ಐಪಿಎಲ್​ನಲ್ಲಿ ಮಿಂಚಿ, ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದ ತಿಲಕ್ ವರ್ಮಾ ಇದುವರೆಗೆ ಕೇವಲ 8 ಪಂದ್ಯಗಳನ್ನಷ್ಟೇ ಆಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದ ತಿಲಕ್ ಇಡೀ ಸರಣಿಯಲ್ಲಿ ಭಾರತದ ಪರ ಅತ್ಯಧಿಕ ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ಆದರೆ ಐರ್ಲೆಂಡ್ ಪ್ರವಾಸದಲ್ಲಿ ತಿಲಕ್ ಬ್ಯಾಟ್ ಸದ್ದು ಮಾಡಿಲ್ಲ. ಅದರ ಹೊರತಾಗಿಯೂ ಆಯ್ಕೆ ಮಂಡಳಿ ತಿಲಕ್​ಗೆ ಏಕದಿನ ತಂಡದಲ್ಲಿ ಅವಕಾಶ ನೀಡಿದೆ.

 

ಏಷ್ಯಾಕಪ್​ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.

ಬ್ಯಾಕ್ ಅಪ್- ಸಂಜು ಸ್ಯಾಮ್ಸನ್.

Published On - 1:26 pm, Mon, 21 August 23