ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಟೀಮ್ ಇಂಡಿಯಾ ವಶಪಡಿಸಿಕೊಂಡಿದೆ. ಇದೇ ವೇಳೆ ಬಿಸಿಸಿಐ ಕೂಡ ಸೌತ್ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಿದೆ. ಈ ಸರಣಿಯಲ್ಲಿ ಉಭಯ ತಂಡಗಳು 3 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಲಿವೆ. ಈ ಸರಣಿಗಾಗಿ ಮೂರು ತಂಡಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಟೆಸ್ಟ್ ತಂಡದಲ್ಲಿ ಅನುಭವಿ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಸ್ಥಾನ ನೀಡಲಾಗಿಲ್ಲ. ಇದರ ಜೊತೆಗೆ ಮತ್ತೋರ್ವ ಆಟಗಾರು ಕೂಡ ಟೆಸ್ಟ್ ತಂಡದಿಂದ ಹೊರಬಿದ್ದಿದ್ದಾರೆ.
ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಟೀಮ್ ಇಂಡಿಯಾದಿಂದ ಹೊರಗುಳಿಯುತ್ತಿರುವುದು ಇದೇ ಮೊದಲಲ್ಲ. 2022 ರಿಂದ ಟೀಮ್ ಇಂಡಿಯಾದ ಪ್ರಯಾಣವು ಎರಡೂ ಆಟಗಾರರಿಗೆ ಏರಿಳಿತಗಳಿಂದ ತುಂಬಿದೆ. ಚೇತೇಶ್ವರ್ ಪೂಜಾರ ಅವರು ಕೌಂಟಿ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ ನಂತರ ಟೀಮ್ ಇಂಡಿಯಾಕ್ಕೆ ಮರಳಿದರು. ಆನಂತರ ವೆಸ್ಟ್ ಇಂಡೀಸ್ ಪ್ರವಾಸದಿಂದ ಅವರನ್ನು ಕೈ ಬಿಡಲಾಯಿತು.
ಮತ್ತೊಂದೆಡೆ ಅಜಿಂಕ್ಯ ರಹಾನೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಒನ್ ಮ್ಯಾನ್ ಆರ್ಮಿ ಆಗಿ ಮಿಂಚಿದ್ದರು. ಆದರೆ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ರಹಾನೆ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಕೈ ಬಿಡಲಾಗಿದೆ.
ಈ ಇಬ್ಬರು ಅನುಭವಿ ಆಟಗಾರರ ಜೊತೆ ತಂಡದಿಂದ ಹೊರಬಿದ್ದ ಮತ್ತೋರ್ವ ಆಟಗಾರ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ.ಎಸ್.ಭರತ್. ರಿಷಭ್ ಪಂತ್ ಸ್ಥಾನದಲ್ಲಿ ಅವಕಾಶ ಪಡೆದಿದ್ದ ಭರತ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಟೀಮ್ ಇಂಡಿಯಾ ಪರ 5 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದ ಭರತ್ 8 ಇನ್ನಿಂಗ್ಸ್‌ಗಳಲ್ಲಿ ಕಲೆಹಾಕಿದ್ದು ಕೇವಲ 129 ರನ್ ಮಾತ್ರ.
ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಕೆಎಸ್ ಭರತ್ ಅವರನ್ನು ಕೈ ಬಿಡಲಾಗಿದೆ. ಅವರ ಸ್ಥಾನದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಇಶಾನ್ ಕಿಶನ್ಗೆ ಅವಕಾಶ ಕಲ್ಪಿಸಲಾಗಿದೆ. ಇತ್ತ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕೆಎಲ್ ರಾಹುಲ್ ಕೂಡ ಇದ್ದಾರೆ. ಹೀಗಾಗಿ ಕೆಎಸ್ ಭರತ್ ಅವರ ಮುಂಬರುವ ದಿನಗಳಲ್ಲಿ ಅವಕಾಶ ಸಿಗುವುದು ಅನುಮಾನ.
ಏಕೆಂದರೆ ಈ ಬಾರಿಯ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ರಿಷಭ್ ಪಂತ್ ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಪಂತ್ ಮಿಂಚಿದರೆ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅವರೇ ಆಗಿ ಕಾಣಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ.
ಇದನ್ನೂ ಓದಿ: IPL 2024: ಕಡಿಮೆ ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿದ ರಚಿನ್ ರವೀಂದ್ರ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮುಖೇಶ್ ಕುಮಾರ್, ಮುಕೇಶ್. ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ.