Team India: ಟೀಮ್ ಇಂಡಿಯಾದ ಏಕದಿನ ವಿಶ್ವಕಪ್ ತಯಾರಿ ಶುರು..!

| Updated By: ಝಾಹಿರ್ ಯೂಸುಫ್

Updated on: Jul 25, 2023 | 5:00 PM

ಅಕ್ಟೋಬರ್ 5 ರಿಂದ ಶುರುವಾಗಲಿರುವ ಏಕದಿನ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ  ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

Team India: ಟೀಮ್ ಇಂಡಿಯಾದ ಏಕದಿನ ವಿಶ್ವಕಪ್ ತಯಾರಿ ಶುರು..!
Team India
Follow us on

ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ ಏಕದಿನ ಸರಣಿಯು ಗುರುವಾರದಿಂದ ಶುರುವಾಗಲಿದೆ. ಈ ಸರಣಿಯೊಂದಿಗೆ ಟೀಮ್ ಇಂಡಿಯಾದ ಏಕದಿನ ವಿಶ್ವಕಪ್ ಪೂರ್ವ ತಯಾರಿ ಕೂಡ ಆರಂಭವಾಗಲಿದೆ. ಅಂದರೆ ಅಕ್ಟೋಬರ್​-ನವೆಂಬರ್​ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೂ ಮುನ್ನ ಭಾರತ ತಂಡವು ಕೇವಲ 2 ಏಕದಿನ ಸರಣಿಗಳನ್ನು ಮಾತ್ರ ಆಡಲಿದೆ. ಈ ಸರಣಿಗಳಲ್ಲಿ ಒಟ್ಟು 6 ಏಕದಿನ ಪಂದ್ಯಗಳನ್ನಾಡಲಾಗುತ್ತದೆ. ಮೊದಲು ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಆಡಲಿರುವ ಭಾರತ ತಂಡವು, ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ.

ಇನ್ನು ಇದರ ನಡುವೆ ಏಷ್ಯಾಕಪ್ ಕೂಡ ಜರುಗಲಿದ್ದು, ಈ ಟೂರ್ನಿಯಲ್ಲಿ ಭಾರತ ತಂಡವು ಫೈನಲ್ ಪ್ರವೇಶಿಸಿದರೆ ಒಟ್ಟು 5 ಏಕದಿನ ಪಂದ್ಯಗಳನ್ನಾಡಲಿದೆ. ಅಂದರೆ ಏಕದಿನ ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ 11 ಏಕದಿನ ಪಂದ್ಯಗಳನ್ನು (6+5 ಏಷ್ಯಾಕಪ್​ನಲ್ಲಿ ಫೈನಲ್​ ಪ್ರವೇಶಿಸಿದರೆ) ಆಡುವ ಸಾಧ್ಯತೆಯಿದೆ. ಈ ಮೂಲಕ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗಾಗಿ ಭರ್ಜರಿ ತಯಾರಿ ನಡೆಸಲಿದೆ.

ಅದರಲ್ಲೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಮುಂಬರುವ ಏಷ್ಯಾಕಪ್​ನಲ್ಲಿ ಅವಕಾಶ ನೀಡಲಾಗುತ್ತದೆ. ಇನ್ನು ಏಷ್ಯಾಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಏಕದಿನ ವಿಶ್ವಕಪ್​ಗೆ ಆಯ್ಕೆಯಾಗುವುದು ಖಚಿತ.

ಹೀಗಾಗಿಯೇ ಮುಂಬರುವ ಏಕದಿನ ಪಂದ್ಯಗಳು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ತುಂಬಾ ಮಹತ್ವದ್ದು. ಈ ಪಂದ್ಯಗಳಲ್ಲಿ ಮಿಂಚಿದರೆ ಮಾತ್ರ ಏಕದಿನ ವಿಶ್ವಕಪ್​ನಲ್ಲಿ ಸ್ಥಾನ ಸಿಗಲಿದೆ. ಅದರಲ್ಲೂ ಸ್ಟಾರ್ ಆಟಗಾರರ ದಂಡೇ ಹೊಂದಿರುವ ಟೀಮ್ ಇಂಡಿಯಾದಲ್ಲಿ ಇದೀಗ ಏಕದಿನ ವಿಶ್ವಕಪ್​ಗೆ ಆಯ್ಕೆಯಾಗುವ 15 ಸ್ಥಾನಗಳಿಗೆ ಪೈಪೋಟಿ ಏರ್ಪಟ್ಟಿದೆ ಎಂದರೆ ತಪ್ಪಾಗಲಾರದು.

ಏಷ್ಯಾಕಪ್ ವೇಳಾಪಟ್ಟಿ:

ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದೆ. ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 2 ರಂದು ಆಡಲಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುತ್ತಿರುವುದು ವಿಶೇಷ. ಇನ್ನು ಸೆಪ್ಟೆಂಬರ್ 4 ರಂದು ನಡೆಯಲಿರುವ ತನ್ನ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನೇಪಾಳ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ​ 10 ತಂಡಗಳು ಫೈನಲ್

ಏಕದಿನ ವಿಶ್ವಕಪ್ ವೇಳಾಪಟ್ಟಿ:

ಅಕ್ಟೋಬರ್ 5 ರಿಂದ ಶುರುವಾಗಲಿರುವ ಏಕದಿನ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ  ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಏಕದಿನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.