INDW vs AUSW: ಕೊನೆಯಲ್ಲಿ ಎಡವಿದ ಭಾರತ; ಆಸೀಸ್ಗೆ 6 ವಿಕೆಟ್ ಜಯ
INDW vs AUSW: ಭಾರತ ವನಿತಾ ಪಡೆ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ ನಡುವೆ ನವಿ ಮುಂಬೈನ ಡಾ.ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್ಗಳ ಜಯ ಸಾಧಿಸಿದೆ.
ಭಾರತ ವನಿತಾ ಪಡೆ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ (India Women vs Australia Women) ನಡುವೆ ನವಿ ಮುಂಬೈನ ಡಾ.ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 4 ವಿಕೆಟ್ ಕಳೆದುಕೊಂಡು 19ನೇ ಓವರ್ನಲ್ಲಿ ಗೆಲುವಿನ ನಗೆ ಬೀರಿತು. ಈ ಪಂದ್ಯದ ಗೆಲುವಿನೊಂದಿಗೆ ಆಸ್ಟ್ರೇಲಿಯಾ 3 ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
ಭಾರತಕ್ಕೆ ಕಳಪೆ ಆರಂಭ
ಮೊದಲ ಪಂದ್ಯದಲ್ಲಿ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಅರ್ಧಶತಕ ಬಾರಿಸಿದ್ದರೆ ಎರಡನೇ ಪಂದ್ಯದಲ್ಲಿ ಆರಂಭಿಕರಿಬ್ಬರು ಬೇಗನೇ ಪೆವಿಲಿಯನ್ ಸೇರಿಕೊಂಡರು. ಶಫಾಲಿ ವರ್ಮಾ 1 ರನ್ ಗಳಿಸಿ ಔಟಾದರೆ, ಸ್ಮೃತಿ ಮಂಧಾನ 23 ರನ್, ಜೆಮಿಮಾ ರಾಡ್ರಿಗಸ್ 13 ರನ್, ದೀಪ್ತಿ ಶರ್ಮಾ 30 ರನ್, ರಿಚಾ ಘೋಷ್ 23 ರನ್ ಗಳಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ 6 ರನ್ ಮೀರಿ ಮುಂದೆ ಹೋಗಲಿಲ್ಲ.
ತಂಡದ ಪರ ಪರ ದೀಪ್ತಿ ಶರ್ಮಾ ಗರಿಷ್ಠ 30 ರನ್ ಗಳಿಸಿದರೆ, ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ತಲಾ 23 ರನ್ ಗಳಿಸಿದರು. ಆಸ್ಟ್ರೇಲಿಯ ಪರ ಕಿಮ್ ಗಾರ್ತ್, ಅನ್ನಾಬೆಲ್ ಸದರ್ಲ್ಯಾಂಡ್ ಮತ್ತು ವೇರ್ಹ್ಯಾಮ್ ತಲಾ ಎರಡು ವಿಕೆಟ್ ಪಡೆದರು.
INDW vs AUSW: ಟಾಸ್ ಗೆದ್ದ ಆಸ್ಟ್ರೇಲಿಯಾ; ಭಾರತ ಮೊದಲು ಬ್ಯಾಟಿಂಗ್
ಆಸೀಸ್ಗೆ ಉತ್ತಮ ಆರಂಭ
ಭಾರತ ನೀಡಿದ 130 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಿಬ್ಬರು 51 ರನ್ಗಳ ಜೊತೆಯಾಟ ನೀಡಿದರು. ಆದರೆ ಆ ಬಳಿಕ ಭಾರತದ ಬೌಲರ್ಗಳು ಲಯಕ್ಕೆ ಮರಳಿ ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದರು. ಕಳೆದ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ್ದ ಟಿಟಾಸ್ ಸಾದು ಈ ಪಂದ್ಯದಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಹಾಗೆಯೇ ಕನ್ನಡತಿ ಶ್ರೇಯಾಂಕ ಪಾಟಿಲ್ ಕೂಡ ಕೇವಲ 4 ಓವರ್‌ಗಳಲ್ಲಿ ಬರೋಬ್ಬರಿ 40 ರನ್ ನೀಡಿ ತೀರ ದುಬಾರಿಯಾದರು.
ಕೊನೆಯ ಪೂಜಾ ಹೋರಾಟ
ಇದೆಲ್ಲದರ ನಡುವೆಯೂ ಕೊನೆಯಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶಿಸಿದ ಪೂಜಾ ವಸ್ತ್ರಾಕರ್ ಆಸೀಸ್ ಗೆಲುವಿಗೆ ಕಡಿವಾಣ ಹಾಕುವ ಸುಳಿವು ನೀಡಿದ್ದರು. ಹೀಗಾಗಿ ಕೊನೆಯ 2 ಓವರ್‌ಗಳಲ್ಲಿ ಆಸೀಸ್ ಗೆಲುವಿಗೆ 14 ರನ್ಗಳ ಅಗತ್ಯವಿತ್ತು. ಈ ವೇಳೆ ಹರ್ಮನ್‌ಪ್ರೀತ್ ಕೌರ್ ಮಾಡಿದ ಎಡವಟ್ಟು ತಂಡಕ್ಕೆ ಕೊಂಚ ದುಬಾರಿ ಎನಿಸಿತು. ಏಕೆಂದರೆ ಕಳೆದ ಪಂದ್ಯದ ಸ್ಟಾರ್ ಟಿಟಾಸ್ ಸಾದು ಅವರ 1 ಓವರ್ ಬಾಕಿ ಇರುವಂತೆಯೇ ಹರ್ಮನ್ 19ನೇ ಓವರ್ ಬೌಲ್ ಮಾಡಲು ಶ್ರೇಯಾಂಕ್ ಪಾಟೀಲ್ರನ್ನು ಆಯ್ಕೆ ಮಾಡಿದರು. ಇದರ ಲಾಭ ಪಡೆದ ಆಸೀಸ್ ಬ್ಯಾಟರ್ಗಳು ಒಂದೇ ಓವರ್ನಲ್ಲಿ 2 ಬೌಂಡರಿ, 1 ಸಿಕ್ಸರ್ ಸೇರಿದಂತೆ 17 ರನ್ ಕಲೆಹಾಕಿ ಜಯದ ನಗೆಬೀರಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:15 pm, Sun, 7 January 24