IPL 2021: ಅರಬ್ ನಾಡಿನಲ್ಲಿ ಐಪಿಎಲ್ ಅಬ್ಬರ ಶುರು: ಇಂದು ಚೆನ್ನೈ-ಮುಂಬೈ ನಡುವೆ ಮೊದಲ ಸೆಣೆಸಾಟ

| Updated By: Vinay Bhat

Updated on: Sep 19, 2021 | 8:00 AM

Chennai Super Kings vs Mumbai Indians: ಮೇಲ್ನೋಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಮುಂಬೈ ಇಂಡಿಯನ್ಸ್ ತಂಡವೂ ಬಲಿಷ್ಠವಾಗಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರಿಗೆ ಗೆಲುವು ಎಂಬುದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

IPL 2021: ಅರಬ್ ನಾಡಿನಲ್ಲಿ ಐಪಿಎಲ್ ಅಬ್ಬರ ಶುರು: ಇಂದು ಚೆನ್ನೈ-ಮುಂಬೈ ನಡುವೆ ಮೊದಲ ಸೆಣೆಸಾಟ
CSK vs MI
Follow us on

ಕೊರೊನಾ ವೈರಸ್ (Corona virus) ಕಾರಣದಿಂದ ಭಾರತದಲ್ಲಿ ಅರ್ಧಕ್ಕೆ ನಿಂತಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021 Phase 2) ಟೂರ್ನಿಗೆ ಇಂದು ಮರುಚಾಲನೆ ಸಿಗಲಿದೆ. ಅರಬ್ಬರ ನಾಡಿನಲ್ಲಿ ಐಪಿಎಲ್​ನ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (CSKvsMI) ತಂಡಗಳು ಸೆಣೆಸಾಡುವ ಮೂಲಕ ಐಪಿಎಲ್ 2021 ಎರಡನೇ ಚರಣಕ್ಕೆ ಕ್ವಿಕ್ ಸ್ಟಾರ್ಟ್ ಸಿಗಲಿದೆ. ಧೋನಿ-ರೋಹಿತ್ (Dhoni vs Rohit) ನಡುವಣ ಫೈಟ್ ಎಂದ ಮೇಲೆ ಅದು ಹೈವೋಲ್ಟೇಜ್ ಪಂದ್ಯವಾಗದೆ ಇರಲಾರದು. ದುಬೈನಲ್ಲಿ ಸಂಜೆ 7:30ಕ್ಕೆ ಆರಂಭಗೊಳ್ಳಲಿರುವ ಪಂದ್ಯ ವೀಕ್ಷಣೆಗೆ ಅಭಿಮಾನಿಗಳಂತು ಕಾದುಕುಳಿತಿದ್ದಾರೆ. ಅಲ್ಲದೆ ಮೊದಲ ಚರಣದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸಿಎಸ್​ಕೆಯನ್ನ ಮಣಿಸಿತ್ತು. ಹೀಗಾಗಿ ಧೋನಿ (MS Dhoni) ನೇತೃತ್ವದ ಪಡೆ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಪ್ಲಾನ್​ನಲ್ಲಿದೆ.

ಈ ಹಿಂದಿನ ಹೆಚ್ಚಿನ ಆವೃತ್ತಿಯಂತೆ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಕೂಡ ಸ್ಲೋ ಸ್ಟಾರ್ಟ್ ಪಡೆದುಕೊಂಡಿದೆ. ಆಡಿದ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಒಟ್ಟು ಎಂಟು ಅಂಕಗಳೊಂಡಿದೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇತ್ತ ಚೆನ್ನೈ ತಂಡ ಕಳೆದ ಆವೃತ್ತಿಯ ಕಳಪೆ ಪ್ರದರ್ಶನದಿಂದ ಪುಟಿದೆದ್ದಿದೆ. ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಕಂಡಿದ್ದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಸೋತಿದೆ. ಒಟ್ಟು 10 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ.

ಮೇಲ್ನೋಟಕ್ಕೆ ಉಭಯ ತಂಡಗಳೂ ಬಲಿಷ್ಠವಾಗಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾರಿಗೆ ಗೆಲುವು ಎಂಬುದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಚೆನ್ನೈನಲ್ಲಿ ಕೆಲ ಆಟಗಾರರು ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಸಿಎಸ್​ಕೆ ತಂಡದ ಬಲಿಷ್ಠ ಓಪನರ್ ಫಾಫ್ ಡುಪ್ಲೆಸಿಸ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಕಣಕ್ಕಿಳಿಯುವ ಸಾಧ್ಯತೆಗಳು ಕಡಿಮೆ. ಇವರ ಬದಲಾಗಿ ಕನ್ನಡಿಗ ರಾಬಿನ್ ಉತ್ತಪ್ಪ ಓಪನರ್ ಆಗಿ ಆಡುವ ಸಾಧ್ಯತೆಗಳು ಹೆಚ್ಚಿವೆ. 189 ಐಪಿಎಲ್ ಪಂದ್ಯಗಳನ್ನಾಡಿರುವ ಅನುಭವಿ ಉತ್ತಪ್ಪ ಜೊತೆಗೆ ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ಅಂಬಟಿ ರಾಯುಡು ಮತ್ತು ಎಂಎಸ್ ಧೋನಿ ಬ್ಯಾಟಿಂಗ್ ಶಕ್ತಿ ತಂಡದ ದೊಡ್ಡ ಪ್ಲಸ್ ಪಾಯಿಂಟ್. ಆಲ್‌ರೌಂಡರ್ ಆಟಗಾರರಾಗಿ ಮೊಯಿನ್ ಅಲಿ, ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೊ ಈ ಮೂವರೂ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. ಹೀಗೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳು ಬಲಿಷ್ಠವಾಗಲಿದ್ದು, ಮುಂಬೈನಂತಹ ಬಲಿಷ್ಠ ತಂಡವನ್ನು ಕಟ್ಟಿಹಾಕಲು ಧೋನಿಗೆ ಹೆಚ್ಚು ಬೌಲರ್ ಅವಕಾಶಗಳೂ ಕೂಡ ಸಿಕ್ಕಿದಂತಾಗಲಿದೆ. 3 ಸ್ಥಾನಗಳಿಗೆ ವೇಗಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಸ್ಥಾನವನ್ನು ಶಾರ್ದೂಲ್ ಠಾಕೂರ್, ದೀಪಕ್ ಚಹರ್ ಮತ್ತು ಜೋಶ್ ಹೇಜಲ್‌ವುಡ್ ತುಂಬಬಹುದು.

ಇತ್ತ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ತಂಡ ಎಲ್ಲಾ ಆಯಾಮಗಳಲ್ಲೂ ಬಲಿಷ್ಠವಾಗಿದೆ. ಬ್ಯಾಟಿಂಗ್​ನಲ್ಲಿ ರೋಹಿತ್ ಶರ್ಮಾ ಜೊತೆ ಸೂರ್ಯಕುಮಾರ್ ಯಾದವ್, ಕೀರಾನ್ ಪೊಲಾರ್ಡ್ ಅವರು ಪ್ರಮುಖ ಬ್ಯಾಟ್ಸ್​ಮನ್​ಗಳು. ಕ್ವಿಂಟನ್ ಡೀಕಾಕ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಅವರೂ ಉತ್ತಮ ಬ್ಯಾಟಿಂಗ್ ಮಾಡಬಲ್ಲರು. ಬೌಲಿಂಗ್​ನಲ್ಲಿ ಜಸ್​ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಟ್ರಂಪ್ ಕಾರ್ಡ್​ಗಳಾಗಿದ್ದಾರೆ.

ಒಟ್ಟಾರೆ ಮರಳುಗಾಡಿನ ನಾಡು ಯುಎಇಯಲ್ಲಿ ಇಂದಿನಿಂದ ಮತ್ತೆ ಐಪಿಎಲ್ ಹಬ್ಬ ಶುರುವಾಗಲಿದೆ. ಮೊದಲ ಪಂದ್ಯದಲ್ಲಿಯೇ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಟ ಕುತೂಹಲ ಮೂಡಿಸಿದೆ. ಈಗಾಗಲೇ ಪಂದ್ಯಕ್ಕೆ ಉಭಯ ತಂಡಗಳ ಆಟಗಾರರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ದಿನ ಮತ್ತೆ ಬಂದಿದ್ದು, ತಮ್ಮ ನೆಚ್ಚಿನ ಆಟಗಾರರ ಆಟವನ್ನು ಕಣ್ತುಂಬಿಕೊಳ್ಳಲು ಹೊಸ ಹುಮ್ಮಸ್ಸು, ಉತ್ಸಾಹ ಮೂಡಿದೆ.

IPL 2021: ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ: ಕಾದು ಕುಳಿತಿರುವ ಅಭಿಮಾನಿಗಳು

ಟೆಸ್ಟ್ ಸರಣಿ ಆರಂಭವಾದ ಕ್ಷಣದಿಂದಲೇ ಟೀಮ್ ಇಂಡಿಯ ಆಟಗಾರರು ಐಪಿಎಲ್ ನಲ್ಲಿ ಆಡಲು ಉತ್ಸುಕರಾಗಿದ್ದರು: ಗಾಫ್

(IPL 2021 CSK vs MI: MS Dhoni Team will square off against defending champions Mumbai Indians on Sunday)