ಐಪಿಎಲ್ 2021 ಅನ್ನು ಮರುಪ್ರಾರಂಭಿಸುವ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳಿಗೆ ಖುಷಿಕೊಡುವ ವಿಚಾರಗಳು ಕೇಳಿಬರುತ್ತಿವೆ. ಇದಕ್ಕೆ ಹಲವು ಕಾರಣಗಳಿವೆ, ಇದರಲ್ಲಿ ಮೊದಲಾರ್ಧದಲ್ಲಿ ತಂಡದ ಅತ್ಯುತ್ತಮ ಪ್ರದರ್ಶನ ಮುಖ್ಯವಾಗಿದೆ. ಆದರೆ ಎರಡನೇ ಕಾರಣವು ತೀರಾ ಇತ್ತೀಚಿನದು ಮತ್ತು ಇದು ವಿರಾಟ್ ಕೊಹ್ಲಿ ತಂಡವನ್ನು ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಮುನ್ನಡೆಸುತ್ತಿದೆ. ತಂಡದಲ್ಲಿ ಸೇರಿಸಲಾದ ಕೆಲವು ಹೊಸ ಆಟಗಾರರು ಇದಕ್ಕೆ ಕಾರಣರಾಗಿದ್ದಾರೆ. ಮುಂದಿನ ತಿಂಗಳಿನಿಂದ ಯುಎಇಯಲ್ಲಿ ಮತ್ತೆ ಸೀಸನ್ ಆರಂಭವಾಗುವ ಮುನ್ನ ಆರ್‌ಸಿಬಿಯ ಕೆಲವು ವಿದೇಶಿ ಆಟಗಾರರು ತಮ್ಮ ಹೆಸರುಗಳನ್ನು ಹಿಂಪಡೆದಿದ್ದಾರೆ. ಈ ಕಾರಣದಿಂದಾಗಿ, ಬೆಂಗಳೂರು ತಂಡವು 3 ಹೊಸ ಆಟಗಾರರನ್ನು ಸೇರಿಸಿಕೊಂಡಿದೆ. ಇದರಲ್ಲಿ ಶ್ರೀಲಂಕಾದ ಇಬ್ಬರು ಕ್ರಿಕೆಟಿಗರಾದ ವಾನಿಂದು ಹಸರಂಗ. ಮತ್ತು ದುಷ್ಮಂತ ಚಮೀರಾ. ಇಬ್ಬರೂ ಆಟಗಾರರು ತಮ್ಮ ಸಾಮರ್ಥ್ಯದಿಂದ ಐಪಿಎಲ್ ಕದ ತಟ್ಟಿದ್ದಾರೆ. ಆದರೆ ಶ್ರೀಲಂಕಾ ಮಂಡಳಿಯು ಈ ಇಬ್ಬರು ಆಟಗಾರರ ಪ್ರತಿಭೆಗೆ ಪ್ರೋತ್ಸಾಹ ನೀಡುವಂತೆ ತೋರುತ್ತಿಲ್ಲ.
ಆರ್‌ಸಿಬಿ ಫ್ರಾಂಚೈಸಿ, ಲಂಕಾದ ಸ್ಪಿನ್ನರ್ ಹಸರಂಗಾ ಮತ್ತು ವೇಗದ ಬೌಲರ್ ಚಮೀರಾ ಅವರು ತಮ್ಮ ತಂಡಕ್ಕೆ ಸೇರಿರುವ ಬಗ್ಗೆ ಶನಿವಾರ ಆಗಸ್ಟ್ 21 ರಂದು ಘೋಷಿಸಿತ್ತು. ಆದರೆ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಅವರು ಇಬ್ಬರು ಆಟಗಾರರು ಐಪಿಎಲ್‌ಗೆ ಸೇರುವ ಬಗ್ಗೆ ನಮಗೇನು ತಿಳಿದಿಲ್ಲ ಮತ್ತು ಆಟಗಾರರು ಈ ಬಗ್ಗೆ ತನಗೆ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ. ಕ್ರಿಕೆಟ್ ವೆಬ್‌ಸೈಟ್ ಕ್ರಿಕ್ಬಜ್ನಲ್ಲಿ ಮಾತನಾಡುತ್ತಾ ಡಿ ಸಿಲ್ವಾ, ನನಗೆ ಗೊತ್ತಿಲ್ಲ. ನಾನು ಪರಿಶೀಲಿಸಬೇಕು. ನಾವು ಈ ತಿಂಗಳ ಅಂತ್ಯದವರೆಗೆ ಲಾಕ್‌ಡೌನ್‌ನಲ್ಲಿದ್ದೇವೆ ಎಂದು ಹೇಳಿದರು.
ನಾವು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ
ಆಟಗಾರರು ಈ ಬಗ್ಗೆ ನಮ್ಮಲ್ಲಿ ವಿಚಾರಿಸಿಲ್ಲ ಮತ್ತು ಅವರ ಕಡೆಯಿಂದ ಯಾವುದೇ ಅರ್ಜಿ ಬಂದಿಲ್ಲ ಎಂದು ಡಿ ಸಿಲ್ವಾ ಹೇಳಿದ್ದಾರೆ. ನಾವು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಏಕೆಂದರೆ ಅವರು ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (NOC) ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಆಟಗಾರರ ಆಯ್ಕೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಅಥವಾ ಅವರು ನಮ್ಮಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದಿದ್ದಾರೆ.
ಆರ್‌ಸಿಬಿಯಲ್ಲಿ 3 ಹೊಸ ಆಟಗಾರರು
ಬೆಂಗಳೂರು ತಂಡಕ್ಕೆ ಸಂಬಂಧಿಸಿದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನ 5 ಆಟಗಾರರು ಯುಎಇಯಲ್ಲಿ ನಡೆಯಲಿರುವ ಎರಡನೇ ಭಾಗಕ್ಕೆ ಬರಲು ಹಿಂದೇಟು ಹಾಕಿದ್ದಾರೆ. ಇವರಲ್ಲಿ ಆಸ್ಟ್ರೇಲಿಯಾದ ಕೇನ್ ರಿಚರ್ಡ್ಸನ್, ಡೇನಿಯಲ್ ಸ್ಯಾಮ್ಸ್, ಆಡಮ್ ಜಂಪಾ ಮತ್ತು ನ್ಯೂಜಿಲೆಂಡ್ ನ ಫಿನ್ ಅಲೆನ್ ಮತ್ತು ಸ್ಕಾಟ್ ಕುಗ್ಗಲಿಯನ್ ಸೇರಿದ್ದಾರೆ. ಅವರಿಗೆ ಬದಲಾಗಿ, ಆರ್‌ಸಿಬಿಯ ಹಸರಂಗ, ಚಮೀರಾ ಮತ್ತು ಸಿಂಗಾಪುರ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.