ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ (IPL 2021) 14ನ ಉಳಿದ ಪಂದ್ಯಗಳಿಗೆ ಯುಎಇನಲ್ಲಿ ವೇದಿಕೆ ಸಿದ್ದವಾಗಿದೆ. ಕೊರೋನಾ ಕಾರಣದಿಂದ ಮೊಟಕುಗೊಂಡಿದ್ದ ಐಪಿಎಲ್ನ ಉಳಿದ 31 ಪಂದ್ಯಗಳನ್ನು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15ರವರೆಗೆ ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಆಗಸ್ಟ್ನಲ್ಲೇ ದುಬೈನತ್ತ ಪ್ರಯಾಣ ಬೆಳೆಸಲು ಯೋಜನೆ ಹಾಕಿಕೊಂಡಿದೆ. ಅದರಂತೆ ಸುರೇಶ್ ರೈನಾ (Suresh Raina) ಕೂಡ ಐಪಿಎಲ್ ಆರಂಭಕ್ಕೂ ಒಂದು ತಿಂಗಳು ಮುಂಚಿತವಾಗಿ ಯುಎಇಗೆ ತೆರಳಿ ಅಭ್ಯಾಸ ನಡೆಸುವ ಇರಾದೆಯಲ್ಲಿದ್ದಾರೆ. ಈ ಬಗ್ಗೆ ಮಾತನಾಡಿರುವ ರೈನಾ, ಮರಳುಗಾಡಿನ ಮೈದಾನದಲ್ಲಿ ಈ ಬಾರಿ ನಾವು ಕಪ್ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಐಪಿಎಲ್‌ನಲ್ಲಿ ನಾವು 3 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದೇವೆ. ಪ್ರಸ್ತುತ ಟೂರ್ನಿಯಲ್ಲಿ ನಮ್ಮ ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಮೊಯೀನ್ ಅಲಿ , ಸ್ಯಾಮ್ ಕರ್ರನ್, ಡ್ವೇನ್ ಬ್ರಾವೋ, ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಅವರು ಅತ್ಯುತ್ತವಾಗಿ ಆಡಿದ್ದಾರೆ. ಈ ಪ್ರದರ್ಶನನ್ನು ಯುಎಇನಲ್ಲೂ ಮುಂದುವರೆಯಲಿದ್ದು, ಆ ಮೂಲಕ ಮಹೇಂದ್ರ ಸಿಂಗ್ ಧೋನಿ (Dhoni) ಅವರಿಗೆ ನಮ್ಮ ತಂಡ ಕಪ್ ಗೆದ್ದು ಕೊಡಲಿದೆ ಎಂದಿದ್ದಾರೆ ಸುರೇಶ್ ರೈನಾ.
ರೈನಾ ಅವರ ಈ ಹೇಳಿಕೆ ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಸಿಎಸ್ಕೆ ನಾಯಕ ಧೋನಿಗಾಗಿ ಟ್ರೋಫಿ ಗೆಲ್ಲಲಿದ್ದೇವೆ ಎಂದಿರುವುದು ಇದೀಗ ಇದು ಕೂಲ್ ಕ್ಯಾಪ್ಟನ್ನ ಕೊನೆಯ ಐಪಿಎಲ್ ಟೂರ್ನಿಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಹಿಂದೆ 2021ರ ಐಪಿಎಲ್ ಬಳಿಕ ಹೊರಗುಳಿಯುವುದಾಗಿ ಧೋನಿ (MS Dhoni) ತಿಳಿಸಿದ್ದರು. ಇದಾಗ್ಯೂ ಸಿಎಸ್ಕೆ ಫ್ರಾಂಚೈಸಿ ಇನ್ನೆರಡು ವರ್ಷ ಎಂಎಸ್ಡಿ ತಂಡದಲ್ಲೇ ಇರಲಿದ್ದಾರೆ ಎಂಬ ಹೇಳಿಕೆ ನೀಡಿದ್ದರು.
ಅಷ್ಟೇ ಅಲ್ಲದೆ ಈ ಹಿಂದೆ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಆಡದೇ ಇದ್ದರೆ, ತಾನು ಕೂಡ ಐಪಿಎಲ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಸುರೇಶ್ ರೈನಾ ಅಚ್ಚರಿಯ ಹೇಳಿಕೆ ನೀಡಿದ್ದರು. ಇದೀಗ ಮತ್ತೊಮ್ಮೆ ಯುಎಇನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿ ಮೂಲಕ ಧೋನಿಗಾಗಿ ಕಪ್ ಗೆಲ್ಲಲಿದ್ದೇವೆ ಎನ್ನುವ ಮೂಲಕ ರೈನಾ, ಇದು ಮಹೇಂದ್ರ ಸಿಂಗ್ ಧೋನಿಯ (Mahendra singh Dhoni) ಅವರ ಕೊನೆಯ ಐಪಿಎಲ್ ಎಂಬ ಸುಳಿವು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಐಪಿಎಲ್ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಧೋನಿ ನಾಯಕತ್ವದಲ್ಲಿ ಸಿಎಸ್ಕೆ ತಂಡವು ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. 2010 ರಲ್ಲಿ ಮೊದಲ ಬಾರಿ ಟ್ರೋಫಿ ಗೆದ್ದ ಸಿಎಸ್ಕೆ, ಆ ಬಳಿಕ 2011 ರಲ್ಲೂ ಚಾಂಪಿಯನ್ ಪಟ್ಟವನ್ನು ಕಾಯ್ದಿರಿಸಿಕೊಂಡಿತು. ಇದಾದ ಬಳಿಕ 3 ಬಾರಿ ಫೈನಲ್ ಪ್ರವೇಶಿಸಿದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆ ಬಳಿಕ 2018 ರಲ್ಲಿ ಮತ್ತೊಮ್ಮೆ ಟ್ರೋಫಿಗೆ ಮುತ್ತಿಕ್ಕುವ ಮೂಲಕ ಮೂರನೇ ಬಾರಿ ಚಾಂಪಿಯನ್ಪಟ್ಟ ಅಲಂಕರಿಸಿಕೊಂಡಿತು.
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!
( we can win IPL again for MS Dhoni: Suresh Raina)