ಐಪಿಎಲ್ ಸೀಸನ್ 15 ನ (IPL 2022) ಮೊದಲ ಪಂದ್ಯದಲ್ಲೇ ಕೆಲ ದಾಖಲೆಗಳು ನಿರ್ಮಾಣವಾಗಿದೆ. ಕೆಕೆಆರ್ ವಿರುದ್ದ ನಡೆದ ಈ ಪಂದ್ಯದಲ್ಲಿ ನಾಯಕನಾಗಿ ರವೀಂದ್ರ ಜಡೇಜಾ (Ravindra Jadeja) ಹೊಸ ಇತಿಹಾಸ ನಿರ್ಮಿಸಿದರೆ, ರನೌಟ್ ಆಗುವ ಮೂಲಕ ಅಂಬಾಟಿ ರಾಯುಡು (Ambati Rayudu) ಕಳಪೆ ದಾಖಲೆಯತ್ತ ದಾಪುಗಾಲಿಟ್ಟಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 28 ರನ್ಗಳಿಸುವಷ್ಟರಲ್ಲಿ ಸಿಎಸ್ಕೆ ತಂಡದ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಹಾಗೂ ಡೆವೊನ್ ಕಾನ್ವೆ ವಿಕೆಟ್ ಒಪ್ಪಿಸಿದ್ದರು. ಇದಾಗ್ಯೂ ಒಂದಷ್ಟು ಹೊತ್ತು ಅಬ್ಬರಿಸಿ ರಾಬಿನ್ ಉತ್ತಪ್ಪ (28) ಸ್ಟಂಪ್ ಔಟ್ ಆಗಿ ಹೊರನಡೆದಿದ್ದರು.
ಈ ವೇಳೆ ಜೊತೆಯಾದ ಸಿಎಸ್ಕೆ ತಂಡದ ಅನುಭವಿ ಆಟಗಾರರಾದ ಅಂಬಾಟಿ ರಾಯುಡು ಹಾಗೂ ರವೀಂದ್ರ ಜಡೇಜಾ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದ್ದರು. ಆದರೆ ತಂಡದ ಮೊತ್ತ 52 ರನ್ ಆಗಿದ್ದ ವೇಳೆ ಅಂಬಾಟಿ ರಾಯುಡು ರನೌಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ದರು. ಜಡೇಜಾ ನೀಡಿದ ರನ್ ಕರೆಯನ್ನು ಏಕಾಏಕಿ ಸ್ವೀಕರಿಸಿ ಓಡಲು ಮುಂದಾದ ರಾಯುಡು ಅವರನ್ನು ಜಡೇಜಾ ತಡೆದಿದ್ದರು. ಇತ್ತ ಅದಾಗಲೇ ಚೆಂಡನ್ನು ಗಮನಿಸದೇ ಕ್ರೀಸ್ ಬಿಟ್ಟಿದ್ದ ರಾಯುಡು ಹಿಂತಿರುಗುವಷ್ಟರಲ್ಲಿ ಸುನಿಲ್ ನರೈನ್ ರನೌಟ್ ಮಾಡಿದ್ದರು. ಇದರೊಂದಿಗೆ 15 ರನ್ಗಳಿಸಿದ್ದ ರಾಯುಡು ಪೆವಿಲಿಯನ್ ಕಡೆ ಭಾರದ ಹೆಜ್ಜೆಹಾಕಿದರು.
ಹೀಗೆ ಔಟ್ ಆಗುವ ಮೂಲಕ ಐಪಿಎಲ್ನಲ್ಲಿ ಅತೀ ಹೆಚ್ಚು ರನೌಟ್ ಆದ ಆಟಗಾರರ ಪಟ್ಟಿಯಲ್ಲಿ ಇದೀಗ ಅಂಬಾಟಿ ರಾಯುಡು 2ನೇ ಸ್ಥಾನ ಪಡೆದಿದ್ದಾರೆ. ಅದು ಕೂಡ ಮತ್ತೋರ್ವ ಸಿಎಸ್ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ರೈನಾ ಐಪಿಎಲ್ನಲ್ಲಿ 15 ಬಾರಿ ರನೌಟ್ ಆಗಿ ಕಳಪೆ ದಾಖಲೆ ಬರೆದಿದ್ದಾರೆ. ಇದೀಗ ಅಂಬಾಟಿ ರಾಯುಡು ಕೂಡ 15 ಬಾರಿ ರನೌಟ್ ಆಗುವ ಮೂಲಕ ರೈನಾ ಜೊತೆ 2ನೇ ಸ್ಥಾನ ಹಂಚಿಕೊಂಡಿದ್ದಾರೆ.
ವಿಶೇಷ ಎಂದರೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೂ ಇಬ್ಬರು ಆಟಗಾರರಿದ್ದಾರೆ. ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ ರನೌಟ್ ಆದ ಕಳಪೆ ದಾಖಲೆ ಶಿಖರ್ ಧವನ್ ಹಾಗೂ ಗೌತಮ್ ಗಂಭೀರ್ ಹೆಸರಿನಲ್ಲಿದೆ. ಈ ಇಬ್ಬರು ಆಟಗಾರರು ಐಪಿಎಲ್ನಲ್ಲಿ 16 ಬಾರಿ ರನೌಟ್ ಆಗಿದ್ದಾರೆ. ಇದೀಗ 15 ಬಾರಿ ರನೌಟ್ ಆಗುವ ಮೂಲಕ ಅಂಬಾಟಿ ರಾಯುಡು ಕೂಡ ಕಳಪೆ ದಾಖಲೆಯಲ್ಲಿ ಅಗ್ರಸ್ಥಾನದತ್ತ ಮುಖ ಮಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ:
ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಎನ್ ಜಗದೀಶನ್, ಹರಿ ನಿಶಾಂತ್, ಸುಭ್ರಂಶು ಸೇನಾಪತಿ , ರಾಜವರ್ಧನ್ ಹಂಗರ್ಗೇಕರ್, ಭಗತ್ ವರ್ಮಾ, ಪ್ರಶಾಂತ್ ಸೋಲಂಕಿ, ಕ್ರಿಸ್ ಜೋರ್ಡನ್, ಡ್ವೈನ್ ಪ್ರಿಟೋರಿಯಸ್, ಡೆವೊನ್ ಕಾನ್ವೇ, ಆಡಮ್ ಮಿಲ್ನೆ, ಮಿಚೆಲ್ ಸ್ಯಾಂಟ್ನರ್.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು