IPL 2022: ಕ್ರಿಕೆಟ್ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಈ ಮಾತು ಎಷ್ಟು ನಿಜ ಎಂಬುದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಣ ಪಂದ್ಯ ಸಾಕ್ಷಿ. ಏಕೆಂದರೆ ಈ ಪಂದ್ಯದಲ್ಲಿ ಶಿವಂ ದುಬೆ ಹಿಡಿಯದ ಕ್ಯಾಚ್ವೊಂದು ಇಡೀ ಪಂದ್ಯದ ಚಿತ್ರಣ ಬದಲಿಸಿತು ಎಂದರೆ ತಪ್ಪಾಗಲಾರದು. ಸಿಎಸ್ಕೆ ತಂಡದ 8ನೇ ಓವರ್ನಲ್ಲಿ ಕೇವಲ 48 ರನ್‌ಗಳಿಗೆ ಗುಜರಾತ್ ತಂಡವು ಅಗ್ರ ಕ್ರಮಾಂಕದ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಡೇವಿಡ್ ಮಿಲ್ಲರ್ ಇಡೀ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದರು. ಅಂತಿಮವಾಗಿ ಕೇವಲ 51 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿ ಅಮೋಘ ಹಾಗೂ ಸ್ಫೋಟಕ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ಒಂದು ಎಸೆತ ಬಾಕಿ ಇರುವಂತೆ ಜಯ ತಂದುಕೊಟ್ಟರು. ಆದರೆ ಮಿಲ್ಲರ್ ಸಿಎಸ್ಕೆ ಪಾಲಿನ ಕಿಲ್ಲರ್ ಆಗುವ ಮೊದಲು ಶಿವಂ ದುಬೆ ಕ್ಯಾಚ್ ಹಿಡಿಯಲು ಹಿಂದೇಟು ಹಾಕಿದ್ದರು ಎಂಬುದೇ ಸತ್ಯ.
ಗುಜರಾತ್ ಟೈಟನ್ಸ್ ತಂಡಕ್ಕೆ ಕೊನೆಯ 24 ಎಸೆತಗಳಲ್ಲಿ 52 ರನ್‌ಗಳ ಅಗತ್ಯವಿತ್ತು. ಈ ವೇಳೆ 17 ನೇ ಓವರ್ ಎಸೆದ ಡ್ವೇನ್ ಬ್ರಾವೋ ಅವರ ಮೊದಲ ಎರಡು ಎಸೆತಗಳಲ್ಲಿ ಕೇವಲ 2 ರನ್ ಬಂದವು. ಆದರೆ ಮೂರನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಭರ್ಜರಿಯಾಗಿ ಬಾರಿಸಿದ್ದರು. ಚೆಂಡು ಗಾಳಿಯಲ್ಲಿ ಡೀಪ್ ಮಿಡ್‌ವಿಕೆಟ್ ಕಡೆಗೆ ಸಾಗಿತು. ಬೌಂಡರಿ ಲೈನ್ನಿಂದ ಓಡಿ ಬಂದ ಶಿವಂ ದುಬೆಗೆ ಸುಲಭವಾಗಿ ಕ್ಯಾಚ್ ಹಿಡಿಯಬಹುದಿತ್ತು. ಆದರೆ ಕ್ಯಾಚ್ ಹಿಡಿಯುವ ಅವಕಾಶವಿದ್ದರೂ ದುಬೆ ಅದನ್ನು ಹಿಡಿಯುವ ಯಾವುದೇ ಪ್ರಯತ್ನ ಮಾಡಿರಲಿಲ್ಲ. ಅಲ್ಲದೆ ಚೆಂಡು ಮೈದಾನಕ್ಕೆ ಬಿದ್ದ ಬಳಿಕ ಎಸೆದರು. ಇತ್ತ ಬೌಲಿಂಗ್ ಮಾಡುತ್ತಿದ್ದ ಬ್ರಾವೊ ನಿರಾಸೆ ವ್ಯಕ್ತಪಡಿಸಿದರು. ಮತ್ತೊಂದೆಡೆ ಬೌಂಡರಿ ಲೈನ್ನಲ್ಲೇ ಫೀಲ್ಡಿಂಗ್ನಲ್ಲಿ ಸಿಎಸ್ಕೆ ನಾಯಕ ರವೀಂದ್ರ ಜಡೇಜಾ ಆಕ್ರೋಶ ವ್ಯಕ್ತಪಡಿಸುವುದು ಕೂಡ ಕಂಡು ಬಂತು.
ಆದರೆ ರಿಪ್ಲೇನಲ್ಲಿ ಶಿವಂ ದುಬೆ ಸುಲಭ ಕ್ಯಾಚ್ ಹಿಡಿಯಲು ಹಿಂದೇಟು ಹಾಕಿರುವುದು ಸ್ಪಷ್ಟವಾಗಿತ್ತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಅನೇಕರು ದುಬೆ ಅವರ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸುಲಭವಾಗಿ ಕ್ಯಾಚ್ ಹಿಡಿಯುವ ಅವಕಾಶವಿದ್ದರೂ ಶಿವಂ ದುಬೆ ಹಿಂದೇಟು ಹಾಕಿರುವುದು ಸ್ಪಷ್ಟ. ಇದಕ್ಕೇನು ಕಾರಣ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.
— James Tyler (@JamesTyler_99) April 17, 2022
ಒಟ್ಟಿನಲ್ಲಿ ಕೊನೆಯ ಹಂತದಲ್ಲಿ ಸಿಕ್ಕ ಜೀವದಾನದಿಂದಾಗಿ ಡೇವಿಡ್ ಮಿಲ್ಲರ್ ಭರ್ಜರಿ ಬ್ಯಾಟಿಂಗ್ ಮುಂದುವರೆಸಿ ಗುಜರಾತ್ ಟೈಟನ್ಸ್ ತಂಡಕ್ಕೆ 3 ವಿಕೆಟ್ಗಳ ಜಯ ತಂದುಕೊಟ್ಟಿದ್ದಾರೆ.
CSK ಗೆ 5ನೇ ಸೋಲು:
ಚೆನ್ನೈ ನೀಡಿದ 170 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ನೀರಸ ಆರಂಭ ಪಡೆಯಿತು. ಗುಜರಾತ್ ತಂಡದ ಬ್ಯಾಟಿಂಗ್ ಅಸ್ತ್ರವಾಗಿದ್ದ ಶುಭ್ಮನ್ ಗಿಲ್(0) ಮೊದಲ ಬಾಲ್‌ನಲ್ಲೇ ಔಟಾದರೆ, ವಿಜಯ್ ಶಂಕರ್(0) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಇವರ ಬೆನ್ನಲ್ಲೇ ಅಭಿನವ್ ಮನೋಹರ್(12), ಮ್ಯಾಥ್ಯೂ ವೇಡ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ವೃದ್ಧಿಮಾನ್ ಸಾಹ(11) ಹಾಗೂ ರಾಹುಲ್ ತೆವಾಟಿಯಾ(6) ತಂಡಕ್ಕೆ ಆಸರೆಯಾಗಲಿಲ್ಲ. ಪರಿಣಾಮ ಗುಜರಾತ್ 87ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಸಂದರ್ಭದಲ್ಲಿ ಮಿಲ್ಲರ್ (ಅಜೇಯ 94) ಮತ್ತು ಹಂಗಾಮಿ ನಾಯಕ ರಶೀದ್ ಖಾನ್ (40) ಸ್ಫೋಟಕ 70 ರನ್‌ಗಳನ್ನು ಸೇರಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ರಶೀದ್ ಔಟಾದ ನಂತರ ಕೊನೆಯ ಓವರ್‌ಗಳಲ್ಲಿ ಒತ್ತಡ ಮೆಟ್ಟಿನಿಂತ ಮಿಲ್ಲರ್ ಏಕಾಂಗಿಯಾಗಿ ತಂಡವನ್ನು ದಡ ಸೇರಿಸಿದರು. ಹೀಗಾಗಿ 19.5 ಓವರ್ನಲ್ಲಿ ಗುಜರಾತ್ ಟೈಟನ್ಸ್ 7 ವಿಕೆಟ್ ನಷ್ಟಕ್ಕೆ 170 ರನ್ ಸಿಡಿಸಿ 3 ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ