15ನೇ ಆವೃತ್ತಿಯ ಐಪಿಎಲ್ನಲ್ಲಿಂದು ಡಬಲ್ ಧಮಾಕ. ಒಟ್ಟು ಎರಡು ಪಂದ್ಯಗಳನ್ನು ಆಯೋಜಿಸಲಾಗಿದ್ದು, ಮಧ್ಯಾಹ್ನ 3.30ಕ್ಕೆ ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಶುರುವಾಗಲಿರುವ ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ (KKR vs GT) ತಂಡವನ್ನು ಎದುರಿಸಲಿದೆ. ಈಗಾಗಲೇ ಹ್ಯಾಟ್ರಿಕ್ ಸೋಲು ಅನುಭವಿಸಿರುವ ಕೆಕೆಆರ್ ಗೆಲುವಿನ ಲಯಕ್ಕೆ ಮರಳಲೇ ಬೇಕಾದ ಒತ್ತಡದಲ್ಲಿದ್ದರೆ ಇತ್ತ ಜಿಟಿ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಸಂಜೆ 7.30ಕ್ಕೆ ಬ್ರಬೌರ್ನ್ ಕ್ರೀಡಾಂಗಣದಲ್ಲಿ ಜರುಗಲಿರುವ ದ್ವಿತೀಯ ಪಂದ್ಯದಲ್ಲಿ ಪಾಫ್ ಡುಪ್ಲೆಸಿಸ್ (Faf Duplessis) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ (RCB vs SRH) ತಂಡ ಮುಖಾಮುಖಿ ಆಗಲಿದೆ. ಉಭಯ ತಂಡಗಳು ಗೆಲುವಿನ ಲಯದಲ್ಲಿರುವ ಕಾರಣ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಆರ್‌ಸಿಬಿ vs ಎಸ್ಆರ್ಹೆಚ್:
ಆಡಿದ ಏಳು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದಿರುವ ಆರ್‌ಸಿಬಿ ಮೇಲ್ನೋಟಕ್ಕೆ ಬಲಿಷ್ಠವಾಗಿ ಗೋಚರಿಸುತ್ತಿದೆ. ಆರ್‌ಸಿಬಿ ನಾಯಕ ಫಾ ಡು ಪ್ಲೆಸಿಸ್ ಮರಳಿ ಫಾರ್ಮ್ ಕಂಡುಕೊಂಡಿರುವುದು ಸಂತಸದ ಸಂಗತಿ. ದಿನೇಶ್ ಕಾರ್ತಿಕ್ ಈಗಾಗಲೆ ತಂಡದಲ್ಲಿ ಫಿನಿಷರ್-ಹಿಟ್ಟರ್ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುತ್ತ ಬರುತ್ತಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಸುಯಶ್ ಪ್ರಭುದೇಸಾಯಿ ಉಪಯುಕ್ತ ಕೊಡುಗೆಗಳನ್ನು ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರ ಸತತ ವೈಫಲ್ಯ ಮತ್ತು ಎಡಗೈ ಆರಂಭಕಾರ ಅನುಜ್ ರಾವತ್ ಅವರ ಅಸ್ಥಿರ ಪ್ರದರ್ಶನವಷ್ಟೇ ಚಿಂತೆಯ ಸಂಗತಿಯಾಗಿದೆ. ಜೋಶ್ ಹ್ಯಾಸಲ್‌ವುಡ್ ಸೇರ್ಪಡೆಯ ಬಳಿಕ ಆರ್‌ಸಿಬಿ ಬೌಲಿಂಗ್ ವಿಭಾಗವೂ ಬಲ ಪಡೆದಿದ್ದು, ಹರ್ಷಲ್ ಪಟೇಲ್, ಸಿರಾಜ್ ಮತ್ತು ಹಸರಂಗ ಉತ್ತಮ ಸಾಥ್ ನೀಡುತ್ತಿದ್ದಾರೆ.
ಇತ್ತ ಹೈದರಾಬಾದ್ ಮೊದಲೆರಡು ಸೋಲುಗಳ ಬಳಿಕ ದಿಢೀರ್ ಚೇತರಿಕೆ ಕಂಡು ಸತತ 4 ಗೆಲುವು ಸಾಧಿಸಿದ ಅತ್ಯುತ್ಸಾಹದಲ್ಲಿದೆ. ಸದ್ಯ 5ನೇ ಸ್ಥಾನದಲ್ಲಿದ್ದು, ಟಾಪ್-4 ಯಾದಿಯನ್ನು ಅಲಂಕರಿಸುವ ಯೋಜನೆ ವಿಲಿಯಮ್ಸನ್ ಬಳಗದ್ದು. ಉಮ್ರಾನ್ ಮಲಿಕ್ ಬ್ಯಾಟರ್‌ಗಳಿಗೆ ದುಃಸ್ವಪ್ನ ಎನಿಸಿದ್ದಾರೆ. ಅನುಭವಿ ಭುವನೇಶ್ವರ್ ಮತ್ತು ಎಡಗೈ ವೇಗಿ ಟಿ. ನಟರಾಜನ್ ಜತೆಗೂಡಿ ಅವರು ಬಲಿಷ್ಠ ವೇಗದ ಬೌಲಿಂಗ್ ಪಡೆಯನ್ನು ಕಟ್ಟಿದ್ದಾರೆ. ಅಭಿಷೇಕ್ ಶರ್ಮ, ನಾಯಕ ವಿಲಿಯಮ್ಸನ್, ರಾಹುಲ್ ತ್ರಿಪಾಠಿ, ಐಡನ್ ಮಾರ್ಕ್‌ರಮ್, ನಿಕೋಲಸ್ ಪೂರನ್ ಎಲ್ಲರೂ ಮ್ಯಾಚ್ ವಿನ್ನರ್‌ಗಳೇ ಆಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಬೆಂಗಳೂರು 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಹೈದರಾಬಾದ್ 11 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.
ಸಂಭಾವ್ಯ ಪ್ಲೇಯಿಂಗ್ XI:
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್ ಮತ್ತು ಮೊಹಮ್ಮದ್ ಸಿರಾಜ್.
ಎಸ್ಆರ್ಹೆಚ್: ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್/ಶಶಾಂಕ್ ಸಿಂಗ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್, ಮಾರ್ಕೊ ಯಾನ್ಸನ್, ಟಿ ನಟರಾಜನ್ ಮತ್ತು ಉಮ್ರಾನ್ ಮಲಿಕ್.
ಕೆಕೆಆರ್ vs ಜಿಟಿ:
ಗುಜರಾತ್ ಟೈಟನ್ಸ್ ಈ ಬಾರಿಯ ಟೂರ್ನಿಯಲ್ಲಿ ಅದ್ಭುಯ ಪ್ರದರ್ಶನ ನೀಡಿಕೊಂಡು ಬರುತ್ತಿದ್ದು ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸತತ ಎರಡು ಗೆಲುವು ಸಾಧಿಸಿರುವ ಗುಜರಾತ್ ಟೈಟನ್ಸ್ ತಂಡ 6 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದ್ದು 10 ಅಂಕಗಳನ್ನು ಹೊಂದಿದೆ. ಇತ್ತ ಕೆಕೆಆರ್ ತಂಡ ಅದ್ಭುತ ಆರಂಭದ ಬಳಿಕ ಸತತವಾಗಿ ವೈಫಲ್ಯ ಅನುಭವಿಸುತ್ತಿದೆ. ಈಗಾಗಲೇ ಹ್ಯಾಟ್ರಿಕ್ ಸೋಲು ಅನುಭವಿಸಿರುವ ಕೆಕೆಆರ್ ಗೆಲುವಿನ ಲಯಕ್ಕೆ ಮರಳಲು ಕಾಯುತ್ತಿದೆ. ಬ್ಯಾಟಿಂಗ್ ಹಾಗು ಬೌಲಿಂಗ್ ಎರಡೂ ವಿಭಾಗಗಳಲ್ಲೂ ಬಲಿಷ್ಠ ನಿರ್ವಹಣೆ ತೋರುತ್ತಿರುವ ಟೈಟಾನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಪ್ಲಾನ್ನಲ್ಲಿದೆ.
Rishabb Pant: ಅಂಪೈರ್ ನೋ ಬಾಲ್ ಕೊಟ್ಟಿಲ್ಲ ಹೋಗಿ ಕೇಳೆಂದು ಕೋಚ್ ಅನ್ನೇ ಮೈದಾನಕ್ಕೆ ಅಟ್ಟಿದ ಪಂತ್