IPL 2022: ಐಪಿಎಲ್ 2022ಕ್ಕೆ ಪ್ಲಾನ್ ಬಿ ರೂಪಿಸಲು ಮುಂದಾದ ಬಿಸಿಸಿಐ: ಏನಿದೆ ಈ ಹೊಸ ಪ್ಲಾನ್ನಲ್ಲಿ?
IPL Auction: ಫೆಬ್ರವರಿ 12 ಮತ್ತು 13 ರಂದು ಎರಡು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಐಪಿಎಲ್ 2021 ಮೆಗಾ ಆಕ್ಷನ್ ಜರುಗಲಿದೆ ಎಂದು ವರದಿಯಾಗಿದೆ. ಹೀಗಿರುವಾಗ ಮುಂಬರುವ 15ನೇ ಆವೃತ್ತಿಯ ಐಪಿಎಲ್‌ಗೆ ಪ್ಲಾನ್-ಬಿ ಕುರಿತು ಚರ್ಚಿಸಲು ಮುಂದಿನ ತಿಂಗಳು ಎಲ್ಲ ಫ್ರಾಂಚೈಸಿಗಳೊಂದಿಗೆ ಬಿಸಿಸಿಐ ಸಭೆ ನಡೆಸಲು ನಿರ್ಧರಿಸಿದೆ.
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಸಲುವಾಗಿ ನಡೆಯಬೇಕಿರುವ ದೊಡ್ಡ ಮಟ್ಟದ ಐಪಿಎಲ್ (IPL) ಆಟಗಾರರ ಹರಾಜು ಪ್ರಕ್ರಿಯೆಗೆ ಈಗಾಗಲೇ ದಿನಾಂಕ ಫಿಕ್ಸ್ ಆಗಿದೆ. ಈ ನಡುವೆ ನವೆಂಬರ್ 30ರಂದು ಹಾಲಿ 8 ಫ್ರಾಂಚೈಸಿ ತಂಡಗಳು ತಮ್ಮಲ್ಲಿ ಉಳಿಸಿಕೊಂಡ ಆಟಗಾರರ ಅಂತಿಮ ಪಟ್ಟಿ ಪ್ರಕಟ ಮಾಡಿಯಾಗಿದೆ. ಈ ಮೂಲಕ ಹಲವು ಸ್ಟಾರ್ ಆಟಗಾರರು ಹರಾಜು ಪಟ್ಟಿ ಸೇರಿದ್ದಾರೆ. ಹೊಸ ತಂಡಗಳಾದ ಅಹ್ಮದಾಬಾದ್ ಮತ್ತು ಲಖನೌ ಫ್ರಾಂಚೈಸಿಗಳಿಗೆ ಮೆಗಾ ಆಕ್ಷನ್‌ಗೂ (IPL Mega Auction) ಮುನ್ನ ಹರಾಜಿಗೆ ಬಿಡುಗಡೆ ಆಗಿರುವ ಆಟಗಾರರ ಪೈಕಿ ಗರಿಷ್ಠ 3 ಆಟಗಾರರ ಜೊತೆಗೆ ಒಪ್ಪಂದ ಮಾಡಿಕೊಳ್ಳುವಂತೆ ಬಿಸಿಸಿಐ ಡಿ.26ರವರೆಗೆ ಗಡುವು ನೀಡಿದೆ. ಹೀಗಿರುವಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಐಪಿಎಲ್ನ ಎಲ್ಲ ಮಾಲಕರ ಜೊತೆ ಸಭೆ ಕರೆದಿದೆ.
ಹೌದು, ಮುಂಬರುವ 15ನೇ ಆವೃತ್ತಿಯ ಐಪಿಎಲ್‌ಗೆ ಪ್ಲಾನ್-ಬಿ ಕುರಿತು ಚರ್ಚಿಸಲು ಮುಂದಿನ ತಿಂಗಳು ಎಲ್ಲ ಫ್ರಾಂಚೈಸಿಗಳೊಂದಿಗೆ ಬಿಸಿಸಿಐ ಸಭೆ ನಡೆಸಲು ನಿರ್ಧರಿಸಿದೆ. ಭಾರತದಲ್ಲಿ ಓಮಿಕ್ರಾನ್ ಪ್ರಕರಣ ಹೆಚ್ಚುತ್ತಿರುವುದರಿಂದ ಬಿಸಿಸಿಐ ಆತಂಕಕ್ಕೆ ಒಳಗಾಗಿದ್ದು, ಏಪ್ರಿಲ್-ಮೇ ತಿಂಗಳಲ್ಲಿ ಇದರ ಪರಿಣಾಮದ ಬಗ್ಗೆ ಚರ್ಚಿಸಲು ಮುಂದಾಗಿದೆ. ಆಯ್ದ ಎರಡು ತಾಣಗಳಲ್ಲಿ ಲೀಗ್ ಪಂದ್ಯಗಳನ್ನು ನಡೆಸಿ ನಾಕೌಟ್ ಹಂತದ ಪಂದ್ಯಗಳನ್ನು ಇನ್ನೊಂದು ತಾಣದಲ್ಲಿ ನಡೆಸುವ ಸಾಧ‍್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮುಂದಿನ ತಿಂಗಳು ಅಂತಿಮ ನಿರ್ಧಾರವಾಗಲಿದೆ. ಮುಂಬಯಿ ಮತ್ತು ಪುಣೆ ಅಥವಾ ಗುಜರಾತ್‌ನಲ್ಲಿ ಐಪಿಎಲ್ ಪಂದ್ಯಾವಳಿಯನ್ನು ಆಯೋಜಿಸಲು ಬಿಸಿಸಿಐ ಯೋಚಿಸುತ್ತಿದೆ ಎಂದು ವರದಿಯಾಗಿದೆ.
ಲಖನೌ ಮತ್ತು ಅಹಮದಾಬಾದ್ ಸೇರ್ಪಡೆಯೊಂದಿಗೆ ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಹಿಂದಿನ 8 ತಂಡಗಳು ಗರಿಷ್ಠ 4 ಆಟಗಾರರನ್ನು ಉಳಿಸಿಕೊಂಡಿದ್ದರೆ, 2 ಹೊಸ ತಂಡಗಳಿಗೆ ಹರಾಜಿಗೆ ಮುನ್ನವೇ ಗರಿಷ್ಠ 3 ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಎಲ್ಲಾ 8 ತಂಡಗಳು ಈಗಾಗಲೇ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್, ಡೇವಿಡ್ ವಾರ್ನರ್, ರಶೀದ್ ಖಾನ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಜಾನಿ ಬೈರ್‌ಸ್ಟೋವ್, ಫಾಫ್ ಡು’ಪಲ್ಎಸಿಸ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಸ್ಟಾರ್ ಆಟಗಾರರ ದಂಡೇ ಇದೆ. ಅಂದಹಾಗೆ ಈ ಸ್ಟಾರ್‌ಗಳಲ್ಲಿ 6 ಆಟಗಾರರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಅವಕಾಶ ಹೊಸ ತಂಡಗಳಿಗಿದೆ.
ಇನ್ನು ಐಪಿಎಲ್‌ನಲ್ಲಿ ಇದುವೇ ಕೊನೇ ಮೆಗಾ ಹರಾಜು ಪ್ರಕ್ರಿಯೆ ಆಗುವ ಸಾಧ್ಯತೆಗಳಿವೆ. ಯಾಕೆಂದರೆ, ಹೆಚ್ಚಿನ ಐಪಿಎಲ್ ತಂಡಗಳು ತಮ್ಮ ಪ್ರಮುಖ ಆಟಗಾರರನ್ನು ಪ್ರತಿ 3 ವರ್ಷಕ್ಕೊಮ್ಮೆ ಹರಾಜಿಗೆ ಬಿಟ್ಟುಕೊಡುವ ಪದ್ಧತಿಯ ಬಗ್ಗೆ ಅಸಮಾಧಾನ ಹೊಂದಿವೆ. ಮೆಗಾ ಹರಾಜಿಗೆ ಬಹುತೇಕ ಆಟಗಾರರನ್ನು ಬಿಟ್ಟುಕೊಡುವುದರಿಂದ ತಂಡದ ಸಮತೋಲನ ಮತ್ತು ಯೋಜನೆಗಳಿಗೆ ಭಾರಿ ಹೊಡೆತಗಳು ಬೀಳುತ್ತವೆ.
(IPL 2022 edition could face a major roadblock in the form of Omicron BCCI thinking about Plan B)