ಈ ಬಾರಿಯ ಐಪಿಎಲ್ನಲ್ಲಿ ಸತತವಾಗಿ 8 ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ ತಂಡವು ಮೊದಲ ಗೆಲುವನ್ನು ಎದುರು ನೋಡುತ್ತಿದೆ. ಇದರ ಬೆನ್ನಲ್ಲೇ ತಂಡಕ್ಕೆ ಯುವ ಸ್ಪಿನ್ನರ್ ಎಂಟ್ರಿ ಕೊಟ್ಟಿರುವುದು ವಿಶೇಷ. ಹೌದು, ಮುಂಬೈ ತಂಡದಲ್ಲಿ ಮಧ್ಯಪ್ರದೇಶದ ಕುಮಾರ್ ಕಾರ್ತಿಕೇಯ ಸಿಂಗ್ ಅವರಿಗೆ ಸ್ಥಾನ ನೀಡಲಾಗಿದೆ. ಮುಂಬೈ ಇಂಡಿಯನ್ಸ್ ತಂಡವು 24 ವರ್ಷದ ಕಾರ್ತಿಕೇಯ ಸಿಂಗ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿರುವುದಾಗಿ ಶುಕ್ರವಾರ ಪ್ರಕಟಿಸಿದೆ. ತಂಡದಲ್ಲಿದ್ದ ಅರ್ಷದ್ ಖಾನ್ ಗಾಯಗೊಂಡಿದ್ದು, ಹೀಗಾಗಿ ಬದಲಿ ಆಟಗಾರನಾಗಿ ಕುಮಾರ್ ಕಾರ್ತಿಕೇಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.
ಈ ಬಾರಿಯ ಐಪಿಎಲ್ನಲ್ಲಿ ಕಾರ್ತಿಕೇಯ ಮುಂಬೈ ತಂಡ ನೆಟ್ ಬೌಲರ್ ಆಗಿದ್ದರು. ನೆಟ್ಸ್‌ನಲ್ಲಿ ತಮ್ಮ ಬೌಲಿಂಗ್‌ನಿಂದ ಮ್ಯಾನೇಜ್ಮೆಂಟ್ನ ಗಮನ ಸೆಳೆದಿದ್ದಾರೆ. ಈ ಕಾರಣದಿಂದಾಗಿ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಕಾರ್ತಿಕೇಯ ಈ ಹಿಂದೆ ತಮ್ಮ ಬೌಲಿಂಗ್ ಅನ್ನು ಸಾಕಷ್ಟು ಸುಧಾರಿಸಿದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ ಕುಮಾರ್ ಕಾರ್ತಿಕೇಯ ಸಿಂಗ್ ಮಧ್ಯಪ್ರದೇಶ ಪರ 9 ಪ್ರಥಮ ದರ್ಜೆ ಪಂದ್ಯಗಳಲ್ಲಿ 35 ವಿಕೆಟ್, 19 ಲಿಸ್ಟ್ ಎ ಪಂದ್ಯಗಳಲ್ಲಿ 18 ಮತ್ತು 8 ಟಿ20 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ. ಇದೀಗ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡವು ಮುಂದಿನ ಪಂದ್ಯದಲ್ಲಿ ಕಾರ್ತಿಕೇಯರನ್ನು ಕಣಕ್ಕಿಳಿಸಲಿದೆಯಾ ಕಾದು ನೋಡಬೇಕಿದೆ.
ಸತತ ಸೋಲು-ರೋಹಿತ್ ಶರ್ಮಾ ಭಾವುಕ ಸಂದೇಶ:
ಈ ಬಾರಿ ನಾವು ನಮ್ಮ ಉತ್ತಮ ಪ್ರದರ್ಶನ ನೀಡಿಲ್ಲ. ಅನೇಕರು ಇಂತಹದೊಂದು ಕೆಟ್ಟ ಅನುಭವದೊಂದಿಗೆ ಈ ಹಂತದ ಮೂಲಕ ಹೋಗಿದ್ದಾರೆ. ಆದರೆ ನಾನು ಈ ತಂಡವನ್ನು ಪ್ರೀತಿಸುತ್ತೇನೆ. ಹಾಗೆಯೇ ಇಲ್ಲಿಯವರೆಗೆ ಈ ತಂಡದ ಬಗ್ಗೆ ನಂಬಿಕೆ ಮತ್ತು ಅಚಲ ನಿಷ್ಠೆಯನ್ನು ತೋರಿದ ನಮ್ಮ ಹಿತೈಷಿಗಳನ್ನು ನಾನು ಪ್ರಶಂಸಿಸಲು ಬಯಸುತ್ತೇನೆ ಎಂದು ರೋಹಿತ್ ಶರ್ಮಾ ಬರೆದುಕೊಂಡಿದ್ದಾರೆ. ಈ ಮೂಲಕ ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಪ್ರಶಂಸಿದ್ದಾರೆ.
ಇದೀಗ ರೋಹಿತ್ ಶರ್ಮಾ ಅವರ ಈ ಪೋಸ್ಟ್ ವೈರಲ್ ಆಗಿದ್ದು, ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ ಮುಂದಿನ ಸೀಸನ್ನಲ್ಲಿ ನಾವು ಕಂಬ್ಯಾಕ್ ಮಾಡಲಿದ್ದೇವೆ ಎಂದು ಪ್ರತಿಕ್ರಿಯಿಸಿ ರೋಹಿತ್ ಶರ್ಮಾರನ್ನು ಅನೇಕ ಅಭಿಮಾನಿಗಳು ಸಮಾಧಾನಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯವನ್ನು ಏಪ್ರಿಲ್ 30 ರಂದು ಆಡಲಿದ್ದು, ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ರಾಜಸ್ಥಾನ್ ರಾಯಲ್ಸ್ ವಿರುದ್ದ ಆಡಲಿದೆ.
ಮುಂಬೈ ಇಂಡಿಯನ್ಸ್ (MI):
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ರಾಹುಲ್ ಬುಮ್ರಾ, ಹೃತಿಕ್ ಶೋಕೀನ್ , ಕುಮಾರ್ ಕಾರ್ತಿಕೇಯ, ಟೈಮಲ್ ಮಿಲ್ಸ್, ಜೋಫ್ರಾ ಆರ್ಚರ್, ಫ್ಯಾಬಿಯನ್ ಅಲೆನ್, ಡೇನಿಯಲ್ ಸ್ಯಾಮ್ಸ್, ಅನ್ಮೋಲ್ಪ್ರೀತ್ ಸಿಂಗ್, ಟಿಮ್ ಡೇವಿಡ್, ರಿಲೆ ಮೆರೆಡಿತ್.
ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್