ಬ್ರಬೋರ್ನ್ ಸ್ಟೇಡಿಯಂನಲ್ಲಿ (IPL 2022) ನಡೆದ ಐಪಿಎಲ್ನ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್ ತಂಡವು 4 ವಿಕೆಟ್ಗಳಿಂದ ಸೋಲನುಭವಿಸಿತು. ರೋಚಕ ಹಣಾಹಣಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (Rohit Sharma) ನಾನಾ ತಂತ್ರಗಳನ್ನು ಪ್ರಯೋಗಿಸಿದರೂ ಪ್ರಯೋಜನವಾಗಿರಲಿಲ್ಲ. ಇತ್ತ ನಿರಂತರ ಬೌಲಿಂಗ್ ಬದಲಿಸಿ ಪ್ರಯೋಗಕ್ಕೆ ಮುಂದಾಗಿದ್ದ ರೋಹಿತ್ ಶರ್ಮಾ ಇದೀಗ ನಿಧಾನಗತಿಯ ಬೌಲಿಂಗ್ ದಂಡಕ್ಕೆ ಗುರಿಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಸೋಲಿನ ಬೆನ್ನಲ್ಲೇ ಇದೀಗ ರೋಹಿತ್ ಶರ್ಮಾ ನಿಧಾನಗತಿಯ ಓವರ್ ರೇಟ್ಗಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಒಟ್ಟಿನಲ್ಲಿ ಮೊದಲ ಪಂದ್ಯದ ಸೋಲಿನ ಚಿಂತೆಯಲ್ಲಿದ್ದ ನಾಯಕನಿಗೆ ಇದೀಗ ದಂಡ ಬರ ಎಳೆದಂತಾಗಿದೆ.
ಇನ್ನು ಈ ಪಂದ್ಯದಲ್ಲಿ ಒಂದು ಹಂತದಲ್ಲಿ 72 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದರೆ ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ವಿಕೆಟ್ಗಳ ಜಯ ಸಾಧಿಸಿದ್ದು ವಿಶೇಷ. ಈ ಗೆಲುವಿನ ರೂವಾರಿಗಳು ಅಕ್ಷರ್ ಪಟೇಲ್ ಹಾಗೂ ಲಲಿತ್ ಯಾದವ್. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಐದು ವಿಕೆಟ್ ನಷ್ಟಕ್ಕೆ 177 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 13.2 ಓವರ್‌ಗಳಲ್ಲಿ 104 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಜೊತೆಯಾದ ಲಲಿತ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 6 ಓವರ್‌ಗಳಲ್ಲಿ 60 ಕ್ಕೂ ಅಧಿಕ ರನ್ಗಳಿಸಬೇಕಿದ್ದ ಸಮಯದಲ್ಲಿ ಒತ್ತಡವನ್ನು ನಿಭಾಯಿಸಿಕೊಂಡ ಈ ಜೋಡಿ ರನ್ಗಳಿಸುತ್ತಾ ಹೋದರು. ಅದರಲ್ಲೂ ಡೇನಿಯಲ್ ಸ್ಯಾಮ್ಸ್ ಎಸೆದ 18ನೇ ಓವರ್ನಲ್ಲಿ 24 ರನ್ ಬಾರಿಸುವ ಮೂಲಕ ಈ ಜೋಡಿ ಅಬ್ಬರಿಸಿದರು. ಅಂತಿಮ 2 ಓವರ್ನಲ್ಲಿ ಕೇವಲ 3 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ಫೋರ್ ಬಾರಿಸುವ ಮೂಲಕ ಅಕ್ಷರ್ ಪಟೇಲ್ ಡೆಲ್ಲಿ ತಂಡಕ್ಕೆ 4 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು. ಡೆಲ್ಲಿ ಪರ ಅಜೇಯರಾಗಿ ಉಳಿದ ಲಲಿತ್ ಯಾದವ್ (48) ಮತ್ತು ಅಕ್ಷರ್ ಪಟೇಲ್ (38, 17 ಎಸೆತ) ಏಳನೇ ವಿಕೆಟ್‌ಗೆ 30 ಎಸೆತಗಳಲ್ಲಿ 75 ರನ್‌ಗಳ ಜೊತೆಯಾಟವಾಡುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡರು.
ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಅಬ್ಬರಿಸಿದ್ದರು. ಮೊದಲ ವಿಕೆಟ್‌ಗೆ 67 ರನ್‌ಗಳ ಜೊತೆಯಾಟವಾಡಿದ ಹಿಟ್ಮ್ಯಾನ್-ಕಿಶನ್ ಜೋಡಿ ತಂಡಕ್ಕೆಉತ್ತಮ ಆರಂಭ ಒದಗಿಸಿದ್ದರು. ಈ ವೇಳೆ ರೋಹಿತ್ ಶರ್ಮಾ (41) ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಬಂದ ಅನ್ಮೋಲ್ ಪ್ರೀತ್ ಸಿಂಗ್ (8) ಹಾಗೂ ತಿಲಕ್ ವರ್ಮಾ (22), ಕೀರನ್ ಪೊಲಾರ್ಡ್ (3) ಬೇಗನೆ ವಿಕೆಟ್ ಒಪ್ಪಿಸಿದ್ದರು. ಆದರೆ ಮತ್ತೊಂದೆಡೆ ಅಬ್ಬರಿಸುವ ಮೂಲಕ ಇಶಾನ್ ಕಿಶನ್ ಮುಂಬೈ ತಂಡಕ್ಕೆ ಆಸರೆಯಾಗಿ ನಿಂತರು.
ಅದರಂತೆ ಸಿಕ್ಸ್ ಫೋರ್ಗಳ ಸುರಿಮಳೆಗೈಯ್ಯುತ್ತಾ ಕಿಶನ್ ಅರ್ಧಶತಕ ಪೂರೈಸಿದ್ದರು. ಅಲ್ಲದೆ 48 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 81 ರನ್ಗಳಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ಕ್ಕೆ ತಂದು ನಿಲ್ಲಿಸಿದ್ದರು. ಇದಾಗ್ಯೂ ಲಲಿತ್ ಯಾದವ್ (48) ಮತ್ತು ಅಕ್ಷರ್ ಪಟೇಲ್ (38) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು 4 ವಿಕೆಟ್ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು