IPL 2022: RCB ಪರ ಸಿರಾಜ್​ ಒಬ್ಬರೇ 500 ರನ್​, ಕೊಹ್ಲಿ, ಮ್ಯಾಕ್ಸಿಗೂ ಸಾಧ್ಯವಾಗಿಲ್ಲ..!

| Updated By: ಝಾಹಿರ್ ಯೂಸುಫ್

Updated on: May 28, 2022 | 10:34 AM

IPL 2022 RR vs RCB: ಈ ಸಾಧಾರಣ ಸವಾಲು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಅಬ್ಬರಿಸಿದ್ದರು. ಪವರ್​ಪ್ಲೇನಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಈ ಜೋಡಿ 6 ಓವರ್​ಗಳಲ್ಲಿ 67 ರನ್ ಚಚ್ಚಿದ್ದರು.

IPL 2022: RCB ಪರ ಸಿರಾಜ್​ ಒಬ್ಬರೇ 500 ರನ್​, ಕೊಹ್ಲಿ, ಮ್ಯಾಕ್ಸಿಗೂ ಸಾಧ್ಯವಾಗಿಲ್ಲ..!
Mohammad Siraj- Virat Kohli
Follow us on

IPL 2022 ರಲ್ಲಿ ಹೊಸ ತಂಡ, ಹೊಸ ನಾಯಕನೊಂದಿಗೆ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಿರೀಕ್ಷೆಗಳು ಈ ಬಾರಿ ಹುಸಿಯಾಗಿದೆ. ಬಲಿಷ್ಠ ಪಡೆ ಎಂಬ ಟ್ಯಾಗ್​ ಲೈನ್​ನೊಂದಿಗೆ ಕಾಣಿಸಿಕೊಂಡ ಆರ್​ಸಿಬಿ ತಂಡವು ನಿರ್ಣಾಯಕ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ 6 ವರ್ಷಗಳ ಬಳಿಕ ಮತ್ತೆ ಫೈನಲ್ ಆಡುವ ಅವಕಾಶವನ್ನು ಕೈತಪ್ಪಿಸಿಕೊಂಡಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ 2ನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಆರ್‌ಸಿಬಿ ತಂಡವು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಆರಂಭದಲ್ಲೇ ವಿರಾಟ್ ಕೊಹ್ಲಿ (7) ಔಟಾದರೆ, ಇತ್ತ 27 ಎಸೆತಗಳಲ್ಲಿ 25 ರನ್​ ಬಾರಿಸಿ ಡುಪ್ಲೆಸಿಸ್​ ಸಹ ವಿಕೆಟ್ ಒಪ್ಪಿಸಿದರು. ಇನ್ನು ರಜತ್ ಪಾಟಿದಾರ್ (58) ಅವರ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿತು.

ಈ ಸಾಧಾರಣ ಸವಾಲು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಅಬ್ಬರಿಸಿದ್ದರು. ಪವರ್​ಪ್ಲೇನಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಈ ಜೋಡಿ 6 ಓವರ್​ಗಳಲ್ಲಿ 67 ರನ್ ಚಚ್ಚಿದ್ದರು. ಅದರಲ್ಲೂ ಸಿರಾಜ್ ಅವರ ಎರಡು ಓವರ್​ಗಳಲ್ಲಿ ಆರ್​ಆರ್​ ಬ್ಯಾಟ್ಸ್​ಮನ್​ಗಳು ಕಲೆಹಾಕಿದ್ದು ಬರೋಬ್ಬರಿ 31 ರನ್​ಗಳು. ಈ ಮೂಲಕ ಉತ್ತಮ ಆರಂಭ ಪಡೆದ ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ಶತಕದ ನೆರವಿನಿಂದ 18.1 ಓವರ್‌ಗಳಲ್ಲೇ 158 ರನ್​ಗಳನ್ನು ಚೇಸ್​ ಮಾಡಿ ಫೈನಲ್ ಪ್ರವೇಶಿಸಿತು.

ಇದರೊಂದಿಗೆ ಆರ್​ಸಿಬಿ ತಂಡದ ಐಪಿಎಲ್ ಸೀಸನ್ 15 ಅಭಿಯಾನ ಕೂಡ ಅಂತ್ಯಗೊಂಡಿದೆ. ಈ ಬಾರಿ 16 ಪಂದ್ಯಗಳನ್ನು ಆಡಿದ ಆರ್​ಸಿಬಿ ಪರ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಬೌಲರ್​ ಎಂದರೆ ಮೊಹಮ್ಮದ್ ಸಿರಾಜ್. ಏಕೆಂದರೆ ಸಿರಾಜ್ ಈ ಬಾರಿ 15 ಮ್ಯಾಚ್​ ಆಡಿದ್ದಾರೆ. ಈ ವೇಳೆ ಬೌಲಿಂಗ್​ನಲ್ಲಿ ನೀಡಿದ್ದು ಬರೋಬ್ಬರಿ 514 ರನ್​ಗಳು. ಇದು ಸಿರಾಜ್ ಅವರ ಕೆರಿಯರ್​ನಲ್ಲೇ ಅತ್ಯಂತ ಕಳಪೆ ದಾಖಲೆಯಾಗಿದೆ.

ಇದನ್ನೂ ಓದಿ
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಇನ್ನು ಈ ವೇಳೆ ಬರೋಬ್ಬರಿ ಸಿರಾಜ್​ ಹೊಡೆಸಿಕೊಂಡ ಸಿಕ್ಸ್​ಗಳ ಸಂಖ್ಯೆ 31. ಅಂದರೆ ಐಪಿಎಲ್ ಇತಿಹಾಸದಲ್ಲೇ ಒಂದೇ ಸೀಸನ್​ನಲ್ಲಿ ಅತೀ ಹೆಚ್ಚು ಸಿಕ್ಸ್ ಹೊಡೆಸಿಕೊಂಡ ಬೌಲರ್​ ಎಂಬ ಕೆಟ್ಟ ದಾಖಲೆ ಇದೀಗ ಸಿರಾಜ್ ಪಾಲಾಗಿದೆ. ಇದಕ್ಕೂ ಮುನ್ನ 2018 ರಲ್ಲಿ ಸಿಎಸ್​ಕೆ ತಂಡದ ಡ್ವೇನ್ ಬ್ರಾವೊ 29 ಸಿಕ್ಸ್ ಹೊಡೆಸಿಕೊಂಡಿದ್ದು ಹೀನಾಯ ದಾಖಲೆಯಾಗಿತ್ತು. ಇದೀಗ ಸಿರಾಜ್ 31 ಸಿಕ್ಸ್ ಚಚ್ಚಿಸಿಕೊಳ್ಳುವ ಮೂಲಕ ಐಪಿಎಲ್​ನ ಅತ್ಯಂತ ಕೆಟ್ಟ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ 30 ಸಿಕ್ಸ್​​ ಹೊಡೆಸಿಕೊಂಡಿರುವ ಆರ್​ಸಿಬಿ ತಂಡದ ಸ್ಪಿನ್ನರ್ ವನಿಂದು ಹಸರಂಗ 2ನೇ ಸ್ಥಾನದಲ್ಲಿರುವುದು ಮತ್ತೊಂದು ವಿಶೇಷ.

ಒಟ್ಟಿನಲ್ಲಿ ಈ ಬಾರಿಯ ಐಪಿಎಲ್​ನಲ್ಲಿ 51 ಓವರ್​ ಬೌಲಿಂಗ್ ಮಾಡಿದ್ದ ಸಿರಾಜ್ 514 ರನ್​ ನೀಡುವ ಮೂಲಕ ಆರ್​ಸಿಬಿ ಪರ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಇತ್ತ ಸಿರಾಜ್ ಒಬ್ಬರೇ 500 ಕ್ಕೂ ಅಧಿಕ ರನ್​ ನೀಡಿದರೂ, ಆರ್​ಸಿಬಿ ಪರ ಯಾವುದೇ ಬ್ಯಾಟ್ಸ್​ಮನ್ 500 ರನ್​ಗಳ ಗಡಿದಾಟಿಲ್ಲ ಎಂಬುದು ವಿಶೇಷ.

ಅಂದರೆ ಈ ಸಲ ಆರ್​ಸಿಬಿ ಪರ ಅತೀ ಹೆಚ್ಚು ರನ್​ ಕಲೆಹಾಕಿದ್ದು ನಾಯಕ ಫಾಫ್ ಡುಪ್ಲೆಸಿಸ್. ಫಾಫ್ ಡಿ ಈ ಬಾರಿ 468 ರನ್​ಗಳಿಸಿದ್ದಾರೆ. ಆರ್​ಸಿಬಿ ನಾಯಕನನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್​ಮನ್ 400 ರನ್​ಗಳ ಗಡಿದಾಟಿಲ್ಲ. ಈ ಬಾರಿ ವಿರಾಟ್ ಕೊಹ್ಲಿ 341 ರನ್​ ಕಲೆಹಾಕಿದರೆ, ಗ್ಲೆನ್ ಮ್ಯಾಕ್ಸ್​ವೆಲ್ 301 ರನ್​ ಮಾತ್ರ ಗಳಿಸಿದ್ದಾರೆ. ಇನ್ನು 500 ರನ್​ಗಳ ಗಡಿದಾಟಿದ್ದು ಮೊಹಮ್ಮದ್ ಸಿರಾಜ್ ಮಾತ್ರ. ಆದರೆ ಅದು ಬೌಲಿಂಗ್ ಮೂಲಕ ಎಂಬುದಷ್ಟೇ ವ್ಯತ್ಯಾಸ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.