IPL 2022: ಆರ್ಸಿಬಿ ಅಭಿಮಾನಿಗಳಿಗೆ ಕಹಿ ಸುದ್ದಿ: ಈ ಬಾರಿ ಬೆಂಗಳೂರಿನಲ್ಲಿ ಹರಾಜೂ ಇಲ್ಲ, ಪಂದ್ಯವೂ ಇಲ್ಲ
Indian Premier League: ಐಪಿಎಲ್ 2022ಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಇದೀಗ ತನ್ನ ಪ್ಲಾನ್ ಬಿ ಅನ್ನು ಪ್ರಯೋಗಿಸಲು ತಯಾರಾಗಿದೆ. ಇದರಿಂದ ಆರ್ಸಿಬಿ ಅಭಿಮಾನಿಗಳಿಗಂತು ಸಾಕಷ್ಟು ನಿರಾಸೆ ಉಂಟಾಗುವುದು ಖಚಿತ. ಹಾಗಾದ್ರೆ ಬಿಸಿಸಿಐ ರೂಪಿಸಿರುವ ಪ್ಲಾನ್ ಬಿಯಲ್ಲಿ ಏನಿದೆ?.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಗೆ ಕೇವಲ ಭಾರತ ಮಾತ್ರವಲ್ಲದೆ ಕ್ರಿಕೆಟ್ ಲೋಕದ ಇತರೆ ದೇಶ ಕೂಡ ಕಾದು ಕುಳಿತಿದೆ. ಯಾಕಂದ್ರೆ ಐಪಿಎಲ್ 2022 (BCCI) ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದೆ. ಒಟ್ಟು 10 ತಂಡಗಳು ಒಂದು ಟ್ರೋಫಿಗೆ ಕಾದಾಡಲಿದ್ದು, ಹೆಚ್ಚಿನ ಆಟಗಾರರು ಹೊಸ ಫ್ರಾಂಚೈಸಿ ಸೇರಲಿದ್ದಾರೆ. ಆದರೆ, ಈ ಎಲ್ಲ ಸಂಭ್ರಮಕ್ಕೆ ಇದೀಗ ಮತ್ತೆ ಕೊರೊನಾ ವಕ್ಕರಿಸಿದೆ. ಟೂರ್ನಿ ಆರಂಭಕ್ಕೂ ಮುನ್ನ ನಡೆಯಬೇಕಿರುವ ಮೆಗಾ ಹರಾಜು ಕಾರ್ಯಕ್ರಮಕ್ಕೇ ಅಡೆತಡೆಗಳು ಆಗುತ್ತಿದೆ. ಇದೇ ಕಾರಣಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದೀಗ ತನ್ನ ಪ್ಲಾನ್ ಬಿ ಅನ್ನು ಪ್ರಯೋಗಿಸಲು ತಯಾರಾಗಿದೆ. ಇದರಿಂದ ಆರ್ಸಿಬಿ (RCB) ಅಭಿಮಾನಿಗಳಿಗಂತು ಸಾಕಷ್ಟು ನಿರಾಸೆ ಉಂಟಾಗುವುದು ಖಚಿತ. ಹಾಗಾದ್ರೆ ಬಿಸಿಸಿಐ ರೂಪಿಸಿರುವ ಪ್ಲಾನ್ ಬಿಯಲ್ಲಿ ಏನಿದೆ?.
ಮೊನ್ನೆಯಷ್ಟೆ ಬಿಸಿಸಿಐ ಮುಂದಿನ ತಿಂಗಳು ಫೆಬ್ರವರಿ 12-13ರಂದು ಆಟಗಾರರ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಿತ್ತು. ಆದರೀಗ ಮೆಗಾ ಆಕ್ಷನ್ ಬೆಂಗಳೂರಿನಿಂದ ಸ್ಥಳಾಂತರ ಮತ್ತು ದಿನಾಂಕ ಬದಲಾವಣೆಯ ಆಗುವುದು ಖಚಿತವಾಗಿದೆ. ಬೆಂಗಳೂರು ಸಹಿತ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿಢೀರ್ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ, ಹೊಸ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇದರನ್ವಯ ನೈಟ್ ಕಫ್ರ್ಯೂ ವೀಕೆಂಡ್ ಲಾಕ್‌ಡೌನ್ ಸಹಿತ ಹಲವು ನಿರ್ಬಂಧಗಳು ಜಾರಿಯಾಗಿದ್ದು, ಹೆಚ್ಚಿನ ಜನರನ್ನು ಸೇರಿಸಿ ಹರಾಜು ಪ್ರಕ್ರಿಯೆಯನ್ನು ಆಯೋಜಿಸ ಸಾಧ್ಯವಿಲ್ಲದ ಕಾರಣ ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ.
ಫೆ. 12 ಮತ್ತು 13ನೇ ತಾರೀಕಿನಂದು ಬೆಂಗಳೂರು ನಗರದ ಹೋಟೆಲ್ ಒಂದರಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿತ್ತು. ಹಾಗೂ ಈ ಕುರಿತಾಗಿ ಎಲ್ಲಾ ಫ್ರಾಂಚೈಸಿಗಳಿಗೂ ಸೂಚನೆಯನ್ನು ನೀಡಿದ್ದ ಬಿಸಿಸಿಐ ಫೆಬ್ರವರಿ 11ರ ಸಂಜೆಯಂದೇ ಸಂಬಂಧಪಟ್ಟ ಎಲ್ಲಾ ಫ್ರಾಂಚೈಸಿಗಳ ಮಾಲೀಕರು ಕೂಡ ಬೆಂಗಳೂರು ನಗರವನ್ನು ತಲುಪಿರಬೇಕು ಎಂದು ಆದೇಶವನ್ನು ಹೊರಡಿಸಿತ್ತು. ಹೀಗೆ ಇಷ್ಟೆಲ್ಲಾ ಯೋಜನೆಯನ್ನು ಮಾಡಿಕೊಂಡಿದ್ದ ಬಿಸಿಸಿಐಗೆ ಬೆಂಗಳೂರಿನ ಪರಿಸ್ಥಿತಿ ಕೈ ಕೊಟ್ಟಿದೆ.
ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮುಂಬರುವ ದಿನಗಳಲ್ಲಿ ಲಾಕ್ ಡೌನ್ ನಿಯಮವನ್ನು ಜಾರಿಗೆ ತರಬಹುದು. ಹೀಗಾಗಿ ಈಗಲೇ ಹೋಟೆಲ್ ಬುಕಿಂಗ್ ಮಾಡುವ ಬದಲು ಇನ್ನೊಂದಷ್ಟು ದಿನಗಳ ಕಾಲ ಕಾದು ಪರಿಸ್ಥಿತಿ ಯಾವ ರೀತಿ ಇರಲಿದೆ ಎಂಬುದನ್ನು ತಿಳಿದ ನಂತರ ತೀರ್ಮಾನವನ್ನು ಕೈಗೊಳ್ಳಲಾಗುವುದು. ಅಷ್ಟೇ ಅಲ್ಲದೇ ಬೆಂಗಳೂರಿನಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಬೇರೆ ಯಾವುದಾದರೊಂದು ನಗರದಲ್ಲಿ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸಲಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು. ಐಪಿಎಲ್ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಈಗಾಗಲೆ ಕೋಲ್ಕತ್ತಾ, ಕೊಚ್ಚಿ ಮತ್ತು ಮುಂಬೈಯನ್ನು ಮೀಸಲು ತಾಣಗಳಾಗಿ ಹೆಸರಿಸಿದೆ.
ಪ್ಲಾನ್ ಬಿ ಏನು?:
ಈ ಬೆಳವಣಿಗೆಯನ್ನೆಲ್ಲ ಗಮನಿಸಿ ಇದೀಗ ಬಿಸಿಸಿಐ ಪ್ಲಾನ್ ಬಿ ಅನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರ ಪ್ರಕಾರ ಮೆಗಾ ಹರಾಜು ಪ್ರಕ್ರಿಯೆಯನ್ನು ಇನ್ನೊಂದಿಷ್ಟು ಸಮಯ ಮುಂದಕ್ಕೆ ಹಾಕಲು ನಿರ್ಧಾರ ಮಾಡಿದೆಯಂತೆ. ಅಷ್ಟೇ ಅಲ್ಲದೆ ಐಪಿಎಲ್ 2022ರ ಸಂಪೂರ್ಣ ಎಲ್ಲ ಪಂದ್ಯಗಳನ್ನು ಮುಂಬೈನಲ್ಲಿ ಆಯೋಜಿಸಲಿದೆ ಎಂದು ಹೇಳಲಾಗಿದೆ. ಹೀಗಾಗಿ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಮತ್ತು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದು ಬಹುತೇಕ ಅನುಮಾನವಾಗಿದೆ. ಜೊತೆಗೆ ಐಪಿಎಲ್ 2022 ಅನ್ನು ಯುಎಇನಲ್ಲಿ ನಡೆಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎನ್ನುತ್ತಿವೆ ಮೂಲಗಳು.