IPL 2022 ರಲ್ಲಿ ಮುಂಬೈ ಇಂಡಿಯನ್ಸ್ ಸತತ ಸೋಲುಗಳಿಂದ ಕಂಗೆಟ್ಟಿದೆ. ಈ ಸೋಲುಗಳಿಗೆ ತಂಡದ ದುರ್ಬಲ ಬೌಲಿಂಗ್ ಪ್ರಮುಖ ಕಾರಣ. ಕಳೆದ ಕೆಲವು ಸೀಸನ್‌ಗಳವರೆಗೆ ಅತ್ಯುತ್ತಮ ಬೌಲಿಂಗ್ ಲೈನಪ್ ಹೊಂದಿದ್ದ ಈ ತಂಡವು ಈ ಬಾರಿ ಪರಿಣಾಮಕಾರಿಯಾಗಿಲ್ಲ. ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ , ಯಾವುದೇ ಬೌಲರ್ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಅದರಲ್ಲೂ ತಂಡದ ವಿದೇಶಿ ಬೌಲರ್‌ಗಳು ಸಂಪೂರ್ಣ ವಿಫಲರಾಗಿದ್ದಾರೆ. ಇದರ ಬೆನ್ನಲ್ಲೇ ತಂಡದಲ್ಲಿರುವ ವೇಗದ ಬೌಲರ್ ಟೈಮಲ್ ಮಿಲ್ಸ್ ಗಾಯದ ಸುದ್ದಿಯೊಂದು ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಆದರೆ ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ಖುದ್ದು ಇಂಗ್ಲೆಂಡ್ ವೇಗಿ ಮಿಲ್ಸ್ ಇದೆಲ್ಲಾ ಸುಳ್ಳು ಸುದ್ದಿ, ವದಂತಿಯನ್ನು ಹರಡಬೇಡಿ ಎಂದಿರುವುದು ವಿಶೇಷ.
ಮುಂಬೈ ಇಂಡಿಯನ್ಸ್ ಉಳಿದ ಬೌಲರ್‌ಗಳಂತೆ, ಎಡಗೈ ವೇಗಿ ಟೈಮಲ್ ಮಿಲ್ಸ್ ಈ ಸೀಸನ್ನಲ್ಲಿ ಉತ್ತಮ ಆರಂಭವನ್ನು ಪಡೆದಿಲ್ಲ ಮತ್ತು ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಇದರ ಹೊರತಾಗಿಯೂ ಮುಂಬೈಗೆ ಉಳಿದವರಿಗಿಂತ ಮಿಲ್ಸ್ ಉತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಇದರ ನಡುವೆ ಮಿಲ್ಸ್ ಗಾಯಗೊಂಡಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಆತಂಕಕ್ಕೆ ಕಾರಣವಾಗಿತ್ತು.
ಇತ್ತೀಚೆಗೆ ಟ್ವಿಟರ್ ಬಳಕೆದಾರರು ಮಿಲ್ಸ್ ಅವರ ಫಿಟ್ನೆಸ್ ಬಗ್ಗೆ ಪೋಸ್ಟ್ ಮಾಡಿದ್ದರು. ವರದಿಗಳ ಪ್ರಕಾರ ಟೈಮಲ್ ಮಿಲ್ಸ್ ಗಾಯಗೊಂಡಿದ್ದಾರೆ ಮತ್ತು ಐಪಿಎಲ್ 2022 ರ ಉಳಿದ ಪಂದ್ಯಗಳಿಂದ ಹೊರಗುಳಿಯಬಹುದು ಎಂದು ಬರೆದಿದ್ದರು. ಬುಧವಾರ, ಏಪ್ರಿಲ್ 20 ರಂದು, ಮಿಲ್ಸ್ ಈ ವದಂತಿಗೆ ಪ್ರತಿಕ್ರಿಯಿಸಿದ್ದಾರೆ, ” ನೀವು ಯಾರು ಅಥವಾ ನೀವು ಈ ಮಾಹಿತಿಯನ್ನು ಎಲ್ಲಿ ಪಡೆದುಕೊಂಡಿದ್ದೀರಿ ಎಂದು ನನಗೆ ಸಂಪೂರ್ಣವಾಗಿ ತಿಳಿದಿಲ್ಲ, ಆದರೆ ನೀವು ಸುಳ್ಳು ಹೇಳುತ್ತಿದ್ದೀರಿ. ನಾನು ತುಂಬಾ ಚೆನ್ನಾಗಿದ್ದೇನೆ. ದಯವಿಟ್ಟು ಈ ಪೋಸ್ಟ್ ಅನ್ನು ತೆಗೆದುಹಾಕಿ ಎಂದಿದ್ದಾರೆ. ಈ ಮೂಲಕ ಅವರ ಫಿಟ್ನೆಸ್ ಬಗ್ಗೆ ಎದ್ದಿರುವ ಆತಂಕವನ್ನು ದೂರ ಮಾಡಿದ್ದಾರೆ.
ಈ ಬಾರಿ ಮುಂಬೈ ಈ ಇಂಗ್ಲೆಂಡ್ ವೇಗಿ 1.5 ಕೋಟಿ ರೂಪಾಯಿಗೆ ಖರೀದಿಸಿದೆ. ಮಿಲ್ಸ್‌ಗೆ ಆರಂಭವು ಉತ್ತಮವಾಗಿತ್ತು, ಆದರೆ ನಂತರ ಅವರು ಉತ್ತಮ ಬೌಲಿಂಗ್ ಲಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. 29ರ ಹರೆಯದ ಬೌಲರ್ ಸೀಸನ್ನಲ್ಲಿ ಮೊದಲ 3 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದರು. ಆದರೆ ನಂತರದ ಎರಡು ಪಂದ್ಯಗಳಲ್ಲಿ ಅವರು ದುಬಾರಿಯಾಗಿದ್ದರು. ಈ ಬಾರಿ ಆಡಿರುವ 5 ಪಂದ್ಯಗಳಲ್ಲಿ ಕೇವಲ 6 ವಿಕೆಟ್‌ಗಳನ್ನು ಪಡೆದಿದ್ದರೂ 11.17 ರ ಎಕಾನಮಿ ರೇಟ್ನಲ್ಲಿ ರನ್ ನೀಡಿದ್ದಾರೆ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ