ಐಪಿಎಲ್ 2022 (IPL 2022) ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭವಿಷ್ಯ ಇಂದು ನಿರ್ಧಾರವಾಗಲಿದೆ. ಪ್ಲೇ ಆಫ್ ಸುತ್ತಿಗೆ ಈಗಾಗಲೇ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್, ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡಗಳು ಅಧಿಕೃತವಾಗಿ ಆಯ್ಕೆಯಾಗಿದೆ. ಉಳಿದಿರುವ ಒಂದು ಸ್ಥಾನಕ್ಕಾಗಿ ಇದೀಗ ಆರ್ಸಿಬಿ (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ನಾಲ್ಕನೇ ಸ್ಥಾನಕ್ಕೆ ಕ್ವಾಲಿಫೈ ಆಗುವ ತಂಡ ಯಾವುದು ಎಂಬುದಕ್ಕೆ ಇಂದೇ ಉತ್ತರ ಕೂಡ ಸಿಗಲಿದೆ. ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (MI vs DC) ತಂಡ ಮುಖಾಮುಖಿ ಆಗಲಿದ್ದು, ಇದರಲ್ಲಿ ರೋಹಿತ್ ಪಡೆ ಗೆದ್ದರೆ ಆರ್ಸಿಬಿ ಪ್ಲೇ ಆಫ್ಗೆ ತಲುಪಲಿದೆ. ರಿಷಭ್ ಪಂತ್ ಪಡೆ ಗೆದ್ದರೆ ನಾಲ್ಕನೇ ಸ್ಥಾನಕ್ಕೇರಲಿದೆ.
ಲೀಗ್ ಹಂತದ ತನ್ನೆಲ್ಲಾ ಪಂದ್ಯಗಳನ್ನು ಆಡಿ ಮುಗಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇತ್ತ 13 ಪಂದ್ಯಗಳನ್ನಾಡಿ 7 ಪಂದ್ಯಗಳಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ 14 ಅಂಕಗಳನ್ನು ಪಡೆದುಕೊಂಡಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಗೆದ್ದರೆ 16 ಅಂಕದೊಂದಿಗೆ ಪ್ಲೇಆಫ್ ಪ್ರವೇಶಿಸಲಿದೆ. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್ ರನ್ ರೇಟ್ ಹೆಚ್ಚಿರುವ ಕಾರಣ ಡೆಲ್ಲಿ ಇಂದಿನ ಪಂದ್ಯದಲ್ಲಿ ಎಷ್ಟೇ ಅಂತರದಲ್ಲಿ ಗೆದ್ದರೂ ಯಶಸ್ವಿಯಾಗಿ ಪ್ಲೇಆಫ್ ಪ್ರವೇಶಿಸಲಿದೆ. ಹೀಗಾಗಿ ಆರ್ಸಿಬಿ ಫ್ಯಾನ್ಸ್ ಮುಂಬೈ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ನಾವು ಉತ್ತಮ ಪ್ರದರ್ಶನ ತೋರುತ್ತೇವೆ: ರಿಕಿ ಪಾಂಟಿಂಗ್
“ಮುಂಬೈ ಇಂಡಿಯನ್ಸ್ ವಿರುದ್ಧದ ಶನಿವಾರದ ಪಂದ್ಯದಲ್ಲಿ ನಮ್ಮ ತಂಡ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡಲಿದೆ ಎಂಬ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ. ತಂಡದ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಕಳೆದೆರಡೂ ಪಂದ್ಯಗಳನ್ನು ಜಯಿಸಿದ್ದು, ಮೊದಲ ಸಲ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿದ್ದೇವೆ. ಮುಂಬೈ ವಿರುದ್ಧ ಗೆಲುವಲ್ಲದೇ ಬೇರೆ ಯೋಜನೆಯೇ ಇಲ್ಲ. ನಮ್ಮ ಪಾಲಿಗೆ ಇದು ಸಾಕಷ್ಟು ಏರಿಳಿತಗಳನ್ನು ಕಂಡ ಋತು. ಆದರೂ ನಾವು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಸರಿಯಾದ ಹೊತ್ತಿನಲ್ಲಿ ಮೇಲ್ಮುಖವಾಗಿ ಸಾಗುತ್ತಿದ್ದೇವೆ,” ಎಂದು ಡೆಲ್ಲಿ ತಂಡದ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ.
IPL 2022: ಐಪಿಎಲ್ 15ನೇ ಆವೃತಿಯ ಆಟಗಾರರು ಕ್ಯಾಮರಾ ಕಣ್ಣಿಗೆ ಸೆರೆಯಾದ ದೃಶ್ಯಗಳು
ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ಬ್ಯಾಟರ್‌ಗಳನ್ನೇ ಹೊಂದಿದ್ದರೂ ಅಸ್ಥಿರ ನಿರ್ವಹಣೆ ತೋರುತ್ತಾ ಬಂದಿರುವುದರಿಂದ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಪಂತ್ ಪಡೆಯ ಆಟ ಹೇಗಿರಲಿದೆ ಎಂಬುದನ್ನು ನೋಡಬೇಕಿದೆ. ಡೇವಿಡ್ ವಾರ್ನರ್ (427), ಮಿಚೆಲ್ ಮಾರ್ಷ್ (251), ರೊವ್ಮನ್ ಪೊವೆಲ್ (207) ವಿದೇಶಿ ಬ್ಯಾಟರ್‌ಗಳನ್ನೇ ಡೆಲ್ಲಿ ಹೆಚ್ಚಾಗಿ ನೆಚ್ಚಿಕೊಂಡಿದೆ. ಶಾರ್ದೂಲ್ ಠಾಕೂರ್ ದುಬಾರಿಯಾಗುತ್ತಿದ್ದರೂ ವಿಕೆಟ್ ಕಬಳಿಸುತ್ತಿರುವುದು ಡೆಲ್ಲಿಗೆ ಪಾಸಿಟಿವ್ ಆಗಿದೆ. ಮಹತ್ವದ ಪಂದ್ಯದಲ್ಲಿ ರಿಷಭ್ ಪಂತ್ ದೊಡ್ಡದಾಗಿ ಬ್ಯಾಟ್ ಬೀಸಿರುವ ಉದಾಹರಣೆ ಅನೇಕ ಇವೆ.
ಇತ್ತ ಮುಂಬೈಗೆ ಈ ಪಂದ್ಯದಲ್ಲಿ ಸೋತರೂ ಗೆದ್ದರೂ ಯಾವುದೇ ಬದಲಾವಣೆ ಆಗುವುದಿಲ್ಲ. ಆದರೆ, ಅರ್ಜುನ್ ತೆಂಡೂಲ್ಕರ್ಗೆ ಅವಕಾಶ ನೀಡ್ತಾರ ಎಂಬುದೇ ಕುತೂಹಲ. 2021ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಸೇರಿರುವ ಅರ್ಜುನ್ ತೆಂಡುಲ್ಕರ್, ಈವರೆಗೂ 27 ಪಂದ್ಯಗಳಿಂದ ಬೆಂಚ್ ಕಾದಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಅರ್ಜುನ್ ತೆಂಡುಲ್ಕರ್ ಮುಂಬೈ ತಂಡದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಹೆಚ್ಚಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಮುಂಬೈ ಇಂಡಿಯನ್ಸ್ ತಂಡದ ಟ್ವಿಟರ್ ಖಾತೆಯಲ್ಲಿ ಅರ್ಜುನ್ ತೆಂಡುಲ್ಕರ್ ಬೌಲಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋ ಒಂದನ್ನ ಶೇರ್ ಮಾಡಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.