IPL 2022 Qualifier 1: ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಬಲಿಷ್ಠ ತಂಡಗಳ ಎಂಟ್ರಿ
IPL 2022 Qualifier 1: GT vs RR:- 2008 ರಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ರಾಜಸ್ಥಾನ್ ರಾಯಲ್ಸ್ ಮತ್ತೆ ಪ್ರಶಸ್ತಿ ಮುಡಿಗೇರಿಸಿಕೊಂಡಿಲ್ಲ. ಅದರಲ್ಲೂ 2018 ರಲ್ಲಿ ಕೊನೆಯ ಬಾರಿಗೆ ಪ್ಲೇಆಫ್ ಪ್ರವೇಶಿಸಿದ್ದ ಆರ್ಆರ್ ಇದೀಗ ಬರೋಬ್ಬರಿ 4 ವರ್ಷಗಳ ಬಳಿಕ ಮತ್ತೆ ನಿರ್ಣಾಯಕ ಪಂದ್ಯಗಳ ಸುತ್ತಿಗೆ ಪ್ರವೇಶಿಸಿದೆ.
IPL 2022: ಐಪಿಎಲ್ ಸೀಸನ್ 15 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಪ್ಲೇಆಫ್ ಆಡುವ ಮೂರು ತಂಡಗಳು ಫೈನಲ್ ಆಗಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (MI vs DC) ನಡುವಣ ಪಂದ್ಯದ ಬಳಿಕ ಪ್ಲೇಆಫ್ಗೆ ಅರ್ಹತೆ ಪಡೆಯುವ ನಾಲ್ಕನೇ ತಂಡ ಯಾವುದೆಂದು ನಿರ್ಧಾರವಾಗಲಿದೆ. ಇದಾಗ್ಯೂ ನಾಲ್ಕನೇ ತಂಡದ ಎಂಟ್ರಿಯೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಬದಲಾವಣೆಯಾಗುವುದಿಲ್ಲ. ಹೀಗಾಗಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ಎರಡು ತಂಡಗಳು ಫೈನಲ್ ಆಗಿವೆ. ಅದರಂತೆ ಮೊದಲ ಕ್ವಾಲಿಫೈಯರ್ ಮುಖಾಮುಖಿಯಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಲಿದೆ.
ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ಪಾಯಿಂಟ್ ಟೇಬಲ್ನಲ್ಲಿ 3ನೇ ಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ತಂಡವು ಸಿಎಸ್ಕೆ ತಂಡವನ್ನು ಮಣಿಸಿ 18 ಪಾಯಿಂಟ್ಸ್ ಕಲೆಹಾಕಿದೆ. ಈ ಮೂಲಕ 18 ಪಾಯಿಂಟ್ಸ್ಗಳಿಸಿ 2ನೇ ಸ್ಥಾನದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ನೆಟ್ ರನ್ ರೇಟ್ ಮೂಲಕ ಹಿಂದಿಕ್ಕಿದೆ. ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್ +0.251 ನೆಟ್ ರನ್ ರೇಟ್ ಹೊಂದಿದ್ದರೆ, ರಾಜಸ್ಥಾನ್ ರಾಯಲ್ಸ್ +0.298 ನೆಟ್ ರನ್ ರೇಟ್ ಪಡೆದುಕೊಂಡಿದೆ. ಈ ಮೂಲಕ ಲಕ್ನೋಗಿಂತ 0.047 ತುಸು ಹೆಚ್ಚು ನೆಟ್ ರನ್ ರೇಟ್ ಪಡೆದು ರಾಜಸ್ಥಾನ್ ರಾಯಲ್ಸ್ ಸೇಫ್ ಝೋನ್ಗೇರಿದೆ.
ಅದರಂತೆ ಮೇ 24 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ಗೇರಲಿದೆ. ಇತ್ತ ಕೂದಳೆಲೆಯ ಅಂತರದಿಂದ ನೆಟ್ ರನ್ ರೇಟ್ನಲ್ಲಿ ಹಿಂದುಳಿಯುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು ಎಲಿಮಿನೇಟರ್ ಪಂದ್ಯವಾಡಬೇಕಾಗಿ ಬಂದಿದೆ.
ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ಲಾಭವೇನು? ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲೆರಡು ಸ್ಥಾನದಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯವಾಡುವ ಮುಖ್ಯ ಲಾಭವೆಂದರೆ ಗೆದ್ದರೆ ನೇರವಾಗಿ ಫೈನಲ್ಗೆ ಪ್ರವೇಶಿಸಬಹುದು. ಒಂದು ವೇಳೆ ಸೋತರೆ 2ನೇ ಕ್ವಾಲಿಫೈಯರ್ ಪಂದ್ಯವಾಡುವ ಅವಕಾಶ ದೊರೆಯಲಿದೆ. ಅಂದರೆ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದೊಡನೆ ಪಂದ್ಯವಾಡಬೇಕಾಗುತ್ತದೆ.
ಇಲ್ಲಿ ಮೊದಲ ಅವಕಾಶದಲ್ಲಿ ಸೋತರೂ, 2ನೇ ಕ್ವಾಲಿಫೈಯರ್ ಪಂದ್ಯದ ಮೂಲಕ ಫೈನಲ್ಗೆ ಎಂಟ್ರಿ ಕೊಡುವ ಚಾನ್ಸ್ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತಂಡಗಳಿಗೆ ಇರಲಿದೆ. ಅಂದರೆ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತಂಡಗಳಿಗೆ ಫೈನಲ್ ಪ್ರವೇಶಿಸಲು ಎರಡು ಅವಕಾಶ ಸಿಗಲಿದೆ. ಮತ್ತೊಂದೆಡೆ ಎಲಿಮಿನೇಟರ್ ಪಂದ್ಯವಾಡುವ ತಂಡಗಳಲ್ಲಿ ಸೋತ ತಂಡ ನೇರವಾಗಿ ಐಪಿಎಲ್ನಿಂದ ಹೊರಬೀಳಲಿದೆ. ಹೀಗಾಗಿಯೇ ಕೊನೆಯ ಲೀಗ್ ಪಂದ್ಯದಲ್ಲಿ ಗೆಲ್ಲುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲ ಕ್ವಾಲಿಫೈಯರ್ನಲ್ಲಿ ಅವಕಾಶ ಪಡೆದು ಸೇಫ್ ಝೋನ್ನಲ್ಲಿದೆ.
ಅಂದಹಾಗೆ 2008 ರಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ರಾಜಸ್ಥಾನ್ ರಾಯಲ್ಸ್ ಮತ್ತೆ ಪ್ರಶಸ್ತಿ ಮುಡಿಗೇರಿಸಿಕೊಂಡಿಲ್ಲ. ಅದರಲ್ಲೂ 2018 ರಲ್ಲಿ ಕೊನೆಯ ಬಾರಿಗೆ ಪ್ಲೇಆಫ್ ಪ್ರವೇಶಿಸಿದ್ದ ಆರ್ಆರ್ ಇದೀಗ ಬರೋಬ್ಬರಿ 4 ವರ್ಷಗಳ ಬಳಿಕ ಮತ್ತೆ ನಿರ್ಣಾಯಕ ಪಂದ್ಯಗಳ ಸುತ್ತಿಗೆ ಪ್ರವೇಶಿಸಿದೆ. ಈ ಮೂಲಕ ಈ ಬಾರಿ ತನ್ನ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳುವ ತವಕದಲ್ಲಿದೆ ರಾಜಸ್ಥಾನ್ ರಾಯಲ್ಸ್. ಮತ್ತೊಂದೆಡೆ ಚೊಚ್ಚಲ ಸೀಸನ್ನಲ್ಲಿ ಗುಜರಾತ್ ಟೈಟನ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆದು ಮೊದಲ ಸೀಸನ್ನಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸುವ ಇರಾದೆಯಲ್ಲಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.