RR vs RCB Qualifier 2: ಕ್ವಾಲಿಫೈಯರ್ ಪಂದ್ಯದಲ್ಲಿ ಕೈಕೊಡುವ ಕೊಹ್ಲಿ..!

| Updated By: ಝಾಹಿರ್ ಯೂಸುಫ್

Updated on: May 27, 2022 | 6:33 PM

IPL 2022 Qualifier 2: ಈ ಬಾರಿಯ ಐಪಿಎಲ್​ ಸೀಸನ್​ನಲ್ಲಿ ಆರ್​ಸಿಬಿ ಆರಂಭಿಕರು ಕೇವಲ ಒಂದು ಬಾರಿ ಮಾತ್ರ 100 ರನ್​ಗಳ ಜೊತೆಯಾಟವಾಡಿದ್ದಾರೆ. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಕೂಡ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ವಿಫಲರಾಗಿದ್ದರು.

RR vs RCB Qualifier 2: ಕ್ವಾಲಿಫೈಯರ್ ಪಂದ್ಯದಲ್ಲಿ ಕೈಕೊಡುವ ಕೊಹ್ಲಿ..!
virat kohli
Follow us on

ಐಪಿಎಲ್​ನ ನಿರ್ಣಾಯಕ ಪಂದ್ಯದಲ್ಲಿ ಆರ್​ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಗುಜರಾತ್ ಟೈಟಾನ್ಸ್ ವಿರುದ್ದ ಫೈನಲ್ ಪಂದ್ಯವಾಡಲಿದೆ. ಆದರೆ ಈ ಪಂದ್ಯದಲ್ಲಿ ಗೆಲ್ಲಬೇಕಿದ್ದರೆ ಆರ್​ಸಿಬಿ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಬೇಕಿದೆ. ಅದರಲ್ಲೂ ಆರಂಭಿಕರು ಮಿಂಚಲೇಬೇಕು. ಏಕೆಂದರೆ ಈ ಬಾರಿಯ ಐಪಿಎಲ್​ ಸೀಸನ್​ನಲ್ಲಿ ಆರ್​ಸಿಬಿ ಆರಂಭಿಕರು ಕೇವಲ ಒಂದು ಬಾರಿ ಮಾತ್ರ 100 ರನ್​ಗಳ ಜೊತೆಯಾಟವಾಡಿದ್ದಾರೆ. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಕೂಡ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಆದರೆ ನಿರ್ಣಾಯಕ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ವಿಫಲರಾಗುತ್ತಿರುವುದು ಇದೇ ಮೊದಲೇನಲ್ಲ. ಅದರಲ್ಲೂ ವಿರಾಟ್ ಕೊಹ್ಲಿ 2 ಬಾರಿ ಕ್ವಾಲಿಫೈಯರ್ 2 ಪಂದ್ಯವಾಡಿದ್ದಾರೆ. ಈ ವೇಳೆ ಕೂಡ ಒತ್ತಡವನ್ನು ಮೀರಿ ಬ್ಯಾಟ್​​ ಬೀಸಲು ಸಾಧ್ಯವಾಗಿರಲಿಲ್ಲ.

IPL 2011 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ಕ್ವಾಲಿಫೈಯರ್ 2 ತಲುಪಿತು. 27 ಮೇ 2011 ರಂದು, ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 4 ವಿಕೆಟ್‌ಗೆ 185 ರನ್ ಗಳಿಸಿತು. ಈ ಪಂದ್ಯದಲ್ಲಿ ಆರ್​ಸಿಬಿ ಬೃಹತ್ ಮೊತ್ತ ಪೇರಿಸಿದರೂ, ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಕೊಹ್ಲಿ 12 ಎಸೆತಗಳಲ್ಲಿ ಕೇವಲ 8 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈ ಪಂದ್ಯವನ್ನು ಆರ್‌ಸಿಬಿ 43 ರನ್‌ಗಳಿಂದ ಗೆದ್ದುಕೊಂಡಿತು.
ಜಾಹೀರಾತು

ಇನ್ನು 2015 ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಕ್ವಾಲಿಫೈಯರ್ 2 ಪಂದ್ಯವಾಡಿತು. 22 ಮೇ 2015 ರಂದು ನಡೆದ ಈ ಪಂದ್ಯದಲ್ಲಿ RCB ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 8 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈ ಕ್ವಾಲಿಫೈಯರ್-2 ಪಂದ್ಯದಲ್ಲೂ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದ್ದರು. ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಕೊಹ್ಲಿ 9 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ಔಟಾಗಿದ್ದರು. ಅಂದು ಆರ್​ಸಿಬಿ ತಂಡದ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದಾಗಿ ಫೈನಲ್ ಅವಕಾಶ ಕೈತಪ್ಪಿತು.

ಇದನ್ನೂ ಓದಿ
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಇದೀಗ ಮೂರನೇ ಬಾರಿಗೆ ಕ್ವಾಲಿಫೈಯರ್ 2 ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್​ನಲ್ಲಿಲ್ಲ. ಇತ್ತ ಆರ್​ಸಿಬಿ ತಂಡದ ಇಬ್ಬರು ಆರಂಭಿಕರು ಸತತವಾಗಿ ವಿಫಲರಾಗುತ್ತಿದ್ದಾರೆ. ಇದಾಗ್ಯೂ ಕಳೆದ ಪಂದ್ಯದಲ್ಲಿ ರಜತ್ ಪಾಟಿದಾರ್ ತಂಡಕ್ಕೆ ಆಸರೆಯಾಗಿದ್ದರು. ಆದರೆ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ರಾಜಸ್ಥಾನ್ ರಾಯಲ್ಸ್ ವಿರುದ್ದ ಗೆಲ್ಲಬೇಕಿದ್ರೆ ಆರ್​ಸಿಬಿ ಬೃಹತ್ ಮೊತ್ತವನ್ನು ಪೇರಿಸಲೇಬೇಕು. ಇತ್ತ 15 ಪಂದ್ಯಗಳಲ್ಲಿ 334 ರನ್ ಗಳಿಸಿರುವ ವಿರಾಟ್ ಕೊಹ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಅಬ್ಬರಿಸಲಿದ್ದಾರಾ ಕಾದು ನೋಡಬೇಕಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:33 pm, Fri, 27 May 22