IPL 2022: ಐಪಿಎಲ್ಗೆ ದಿನಗಣನೆ ಶುರು: RCB ನಾಯಕ ಯಾರು, ವಿರಾಟ್ ಕೊಹ್ಲಿ ಮತ್ತೆ ನಾಯಕರಾಗುತ್ತಾರಾ?
IPL 2022 Rcb Team: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್.
IPL 2022 ರ ಆರಂಭಕ್ಕೆ ಇನ್ನು ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದೆ . ಮಾರ್ಚ್ 26 ರಿಂದ ಐಪಿಎಲ್ ಪಂದ್ಯಗಳು ಪ್ರಾರಂಭವಾಗಲಿವೆ. ಆದರೆ 10 ತಂಡಗಳಲ್ಲಿ ಒಂದು ತಂಡವು ಇನ್ನೂ ನಾಯಕ ಯಾರೆಂದು ಘೋಷಿಸಿಲ್ಲ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇನ್ನೂ ಕೂಡ ನಾಯಕನನನ್ನು ಆಯ್ಕೆ ಮಾಡಿಲ್ಲ. ಐಪಿಎಲ್ 2021 ರ ನಂತರ ವಿರಾಟ್ ಕೊಹ್ಲಿ ನಾಯಕತ್ವವನ್ನು ತೊರೆದಿದ್ದಾರೆ. ಇದರ ನಂತರ, ಐಪಿಎಲ್ 2022 ಹರಾಜಿನ ನಂತರ ಹೊಸ ಸಾರಥಿಯನ್ನು ಘೋಷಿಸಲಾಗುತ್ತದೆ ಎನ್ನಲಾಗಿತ್ತು. ಆದರೀಗ ಹರಾಜು ಮುಗಿದು ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾದರೂ ಆರ್‌ಸಿಬಿ ಮಾತ್ರ ಕ್ಯಾಪ್ಟನ್ ಯಾರೆಂಬುದನ್ನು ಇನ್ನೂ ಕೂಡ ನಿರ್ಧರಿಸಿಲ್ಲ.
ಆರ್‌ಸಿಬಿ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿತ್ತು. ಅದೇ ಸಮಯದಲ್ಲಿ, ಹರಾಜಿನಲ್ಲಿ ದಿನೇಶ್ ಕಾರ್ತಿಕ್, ಫಾಫ್ ಡು ಪ್ಲೆಸಿಸ್ ಅವರಂತಹ ಹಿರಿಯ ಆಟಗಾರರನ್ನು ಖರೀದಿಸಿದ್ದಾರೆ. ಇವರಲ್ಲಿ ಮ್ಯಾಕ್ಸ್‌ವೆಲ್, ಕಾರ್ತಿಕ್ ಮತ್ತು ಡು ಪ್ಲೆಸಿಸ್ ನಾಯಕತ್ವದ ಸ್ಪರ್ಧಿಗಳು. ಮ್ಯಾಕ್ಸ್‌ವೆಲ್ ಮತ್ತು ಡು ಪ್ಲೆಸಿಸ್ ವಿದೇಶಿ ಆಟಗಾರರಾಗಿದ್ದರೂ, ಅವರಲ್ಲಿ ಯಾರಾದರೂ ನಾಯಕರಾದರೆ, ತಂಡದ ಸಂಯೋಜನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ದಿನೇಶ್ ಕಾರ್ತಿಕ್ ಮುಖ್ಯಸ್ಥರಾಗಲು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಏಕೆಂದರೆ ಡಿಕೆ ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು. ಹಾಗೆಯೇ ಈ ಹಿಂದೆ ಆರ್‌ಸಿಬಿ ಪರ ಕೂಡ ಆಡಿದ್ದರು.
ನಾಯಕತ್ವದಲ್ಲಿ ಕಾರ್ತಿಕ್ ಉತ್ತಮ ದಾಖಲೆ: ದಿನೇಶ್ ಕಾರ್ತಿಕ್ ನಾಯಕತ್ವದಲ್ಲಿ, KKR 2018 ರಲ್ಲಿ ಪ್ಲೇಆಫ್ ತಲುಪಿತ್ತು. ಹಾಗೆಯೇ ದೇಶೀಯ ಕ್ರಿಕೆಟ್‌ನಲ್ಲಿ, ತಮಿಳುನಾಡು ತಂಡವು ಅವರ ನಾಯಕತ್ವದಲ್ಲಿ ಬಹಳ ಯಶಸ್ವಿಯಾಗಿದೆ. ಹೀಗಾಗಿ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಬಹುದು. ಇನ್ನು ಕ್ಯಾಪ್ಟನ್ ಪಟ್ಟಕ್ಕೆ ಡು ಪ್ಲೆಸಿಸ್ ಕೂಡ ಪ್ರಬಲ ಸ್ಪರ್ಧಿ. ಅವರು ವಿಶ್ವದ ವಿವಿಧ ಲೀಗ್‌ಗಳಲ್ಲಿ ನಾಯಕರಾಗಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿ ಸಾಕಷ್ಟು ಯಶಸ್ಸನ್ನು ಗಳಿಸಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಬಗ್ಗೆ ಹೇಳುವುದಾದರೆ, ಅವರ ಫಾರ್ಮ್ ನಾಯಕತ್ವ ಸಿಗಲು ಅಡ್ಡಿಯಾಗಬಹುದು. ಏಕೆಂದರೆ ಮ್ಯಾಕ್ಸಿ 2013 ರಿಂದ ಐಪಿಎಲ್‌ನ ಭಾಗವಾಗಿದ್ದಾರೆ. ಆದರೆ ಒಂದು ಅಥವಾ ಎರಡು ಸೀಸನ್‌ಗಳನ್ನು ಹೊರತುಪಡಿಸಿ ಉಳಿದ ಸೀಸನ್ಗಳಿಂದ ಅತ್ಯುತ್ತಮ ಎನಿಸುಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ.
ಕೊಹ್ಲಿ ಮತ್ತೆ ನಾಯಕರಾಗುತ್ತಾರಾ? ವಿರಾಟ್ ಕೊಹ್ಲಿ ಮತ್ತೆ ನಾಯಕರಾಗುವ ಸಾಧ್ಯತೆಯೂ ಇದೆ. ಈ ನಡುವೆ, ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕೊಹ್ಲಿಗೆ ಮತ್ತೊಮ್ಮೆ ನಾಯಕತ್ವ ವಹಿಸುವಂತೆ ಮನವಿ ಮಾಡಬಹುದು ಎಂದು ಹೇಳಲಾಗಿದೆ. ಆದರೆ, ಕೊಹ್ಲಿ ನಾಯಕರಾಗುವ ಸಾಧ್ಯತೆ ತೀರಾ ಕಡಿಮೆ. ಕೆಲಸದ ಹೊರೆ ನಿರ್ವಹಣೆಯಿಂದಾಗಿ ಅವರು ಕ್ಯಾಪ್ಟನ್ ಜವಾಬ್ದಾರಿಯಿಂದ ಬೇರ್ಪಟ್ಟಿದ್ದರು. ಇದೀಗ ಕೊಹ್ಲಿ ಯಾವುದೇ ತಂಡದ ನಾಯಕತ್ವ ಹೊಂದಿಲ್ಲ. ಹೀಗಾಗಿ ಮತ್ತೊಮ್ಮೆ ಆರ್‌ಸಿಬಿ ಅವರ ಮನವೊಲಿಸಿದರೆ ಕಿಂಗ್ ಕೊಹ್ಲಿಯೇ ಆರ್‌ಸಿಬಿ ತಂಡವನ್ನು ಮುನ್ನಡೆಸಬಹುದು.
RCB ಹೊಸ ತಂಡ ಹೀಗಿದೆ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್ ಪ್ರಭುದೇಸಾಯ್, ಚಾಮಾ ಮಿಲಿಂದ್, ಅನೀಶ್ವರ್ ಗೌತಮ್, ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ಲವ್ನೀತ್ ಸಿಸೋಡಿಯಾ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(IPL 2022 RCB captain who will lead Virat kohli team in upcoming season)