ವಿರಾಟ್ ಕೊಹ್ಲಿ ಯಾವಾಗ ಶತಕ ಬಾರಿಸುತ್ತಾರೆ ಎಂಬ ಪ್ರಶ್ನೆ ಈಗ ಹಳೆಯದಾಗಿದೆ. ಇದೀಗ ಅವರಿಂದ ಒಂದು ಉತ್ತಮ ಇನ್ನಿಂಗ್ಸ್‌ಗಾಗಿ ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಟೀಮ್ ಇಂಡಿಯಾ ಮತ್ತು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ತೊರೆದ ನಂತರವೂ ಬ್ಯಾಟ್ಸ್‌ಮನ್ ಆಗಿ ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಕೊಹ್ಲಿ ಗೋಲ್ಡನ್ ಡಕ್ನೊಂದಿಗೆ ಮರಳಿದ್ದರು. ಅಂದರೆ ಮೊದಲ ಎಸೆತದಲ್ಲಿಯೇ ಖಾತೆ ತೆರೆಯದೆ ಔಟಾಗಿದ್ದರು. ವಿರಾಟ್ ಕೊಹ್ಲಿಯ ಈ ಕಳಪೆ ಪ್ರದರ್ಶನದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳುವಂತೆ ಕೊಹ್ಲಿಗೆ ಸಲಹೆ ನೀಡಿದ್ದಾರೆ.
ಬಯೋ ಬಬಲ್‌ಗೆ ಸಂಬಂಧಿಸಿದ ನಿರ್ಬಂಧಗಳ ನಡುವೆ, ನಾವು ಆಟಗಾರರನ್ನು ನೋಡಿಕೊಳ್ಳುವುದರ ಜೊತೆಗೆ ಅವರ ಮನಸ್ಥಿತಿಯನ್ನೂ ಕೂಡ ಗಮನಿಸಿಕೊಳ್ಳಬೇಕು. ಸದ್ಯ ಕೊಹ್ಲಿಗೆ ಇನ್ನೂ 6-7 ವರ್ಷಗಳ ಕ್ರಿಕೆಟ್ ಉಳಿದಿದ್ದು, ಕ್ರಿಕೆಟ್ ಆಡಲು ಕೊಹ್ಲಿಗೆ ಹೆಚ್ಚು ಒತ್ತು ನೀಡದಂತೆ ಟೀಮ್ ಇಂಡಿಯಾ ನೋಡಿಕೊಳ್ಳಬೇಕು. ವಿಶೇಷವಾಗಿ ಬಯೋ-ಬಬಲ್-ಸಂಬಂಧಿತ ಆಯಾಸ ಉಂಟು ಮಾಡುವ ಸಂದರ್ಭಗಳಲ್ಲಿ ಹೆಚ್ಚಿನ ಕಾಳಜಿವಹಿಸಿಕೊಳ್ಳಬೇಕು ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ನಾನು ಕೋಚ್ ಆಗಿದ್ದಾಗ ಬಯೋಬಬಲ್ ಮೊದಲ ಬಾರಿಗೆ ಪ್ರಾರಂಭವಾಯಿತು. ಆಗ ಆಟಗಾರರ ಬಗ್ಗೆ ಸಹಾನುಭೂತಿ ಇರಬೇಕು ಎಂದು ಹೇಳಿದ್ದೆ. ನೀವು ಒತ್ತಾಯಿಸಿದರೆ, ಆಟಗಾರನು ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಬಿಟ್ಟುಕೊಡುವ ನಡುವೆ ಬಹಳ ಸಣ್ಣ ವ್ಯತ್ಯಾಸವಿದೆ. ಅದಕ್ಕಾಗಿಯೇ ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಿಳುವಳಿಕೆಯನ್ನು ತೋರಿಸಬೇಕು ಎಂದು ತಿಳಿಸಿದ್ದೆ ಎಂದು ಇದೇ ವೇಳೆ ರವಿಶಾಸ್ತ್ರಿ ಹೇಳಿದರು.
ನಾನು ವಿರಾಟ್ ಕೊಹ್ಲಿಯ ಬಗ್ಗೆ ನೇರವಾಗಿ ಮಾತನಾಡುತ್ತೇನೆ. ವಿರಾಟ್ ಕೊಹ್ಲಿ ಕೆಟ್ಟ ಫಾರ್ಮ್ನಲ್ಲಿದ್ದಾರೆ. ಈ ಸಮಯದಲ್ಲಿ ಯಾರಿಗಾದರೂ ವಿಶ್ರಾಂತಿ ಬೇಕಿದ್ದರೆ ಅದು ಕೊಹ್ಲಿಗೆ ಮಾತ್ರ. 2 ತಿಂಗಳಾಗಲಿ ಅಥವಾ ಒಂದೂವರೆ ತಿಂಗಳಾಗಲಿ, ಇಂಗ್ಲೆಂಡ್ ಪ್ರವಾಸದ ಮೊದಲು ಅಥವಾ ನಂತರ ಆದರೆ ಅವರಿಗೆ ವಿಶ್ರಾಂತಿ ನೀಡಬೇಕು. ಏಕೆಂದರೆ ಕೊಹ್ಲಿ ಅವರಲ್ಲಿ ಇನ್ನೂ 6-7 ವರ್ಷಗಳ ಕ್ರಿಕೆಟ್ ಉಳಿದಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಅವರನ್ನು ಕಳೆದುಕೊಳ್ಳುತ್ತೇವೆ ಎಂದು ಯಾರೂ ಬಯಸುವುದಿಲ್ಲ. ಈ ಹಂತವನ್ನು ಹಾದುಹೋಗುವವನು ಅವರು ಮಾತ್ರವಲ್ಲ. ನೀವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರಿ ತಿಳಿಸಿದರು.
ರವಿಶಾಸ್ತ್ರಿ ಸಲಹೆಗೆ ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಕೊಹ್ಲಿ ತಮ್ಮ ಬ್ಯಾಟಿಂಗ್ ಸುಧಾರಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಕೊಹ್ಲಿ ವಿರಾಮದಿಂದ ಹಿಂತಿರುಗಿದಾಗ ತಂಡದಲ್ಲಿ ಅವರ ಸ್ಥಾನ ಉಳಿಯಲಿದೆ ಎಂದು ಭಾರತ ಕ್ರಿಕೆಟ್ ತಂಡ ನಿರ್ಧರಿಸಬೇಕು ಎಂದು ಪೀಟರ್ಸನ್ ಹೇಳಿದ್ದಾರೆ.
6 ತಿಂಗಳ ನಂತರ ನಾನು ಕ್ರಿಕೆಟ್‌ಗೆ ಮರಳುತ್ತೇನೆ ಎಂದು ಕೊಹ್ಲಿ ಈಗ ಹೇಳಬೇಕು. ಪ್ರೇಕ್ಷಕರು ಮತ್ತೊಮ್ಮೆ ಪೂರ್ಣ ಸಾಮರ್ಥ್ಯದೊಂದಿಗೆ ಕ್ರೀಡಾಂಗಣಕ್ಕೆ ಹಿಂತಿರುಗಿದಾಗ, ಮುಂದಿನ 12, 24 ಅಥವಾ 36 ತಿಂಗಳುಗಳವರೆಗೆ ತಂಡದಲ್ಲಿ ಸ್ಥಾನ ಪಡೆಯುವ ಭರವಸೆಯನ್ನು ಆಯ್ಕೆ ಸಮಿತಿ ನೀಡಬೇಕು. ಈ ಮೂಲಕ ಅವರು ಉತ್ತಮವಾಗಿ ಕಂಬ್ಯಾಕ್ ಮಾಡಬಹುದು ಎಂದು ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟರು.
ಕೊಹ್ಲಿ ಬ್ಯಾಟ್ ಸೈಲೆಂಟ್:
ಐಪಿಎಲ್ 2022ಕ್ಕೂ ಮುನ್ನ ಕೊಹ್ಲಿ ಆರ್‌ಸಿಬಿ ನಾಯಕತ್ವ ತೊರೆದಿದ್ದರು. ಆಗ ಅವರು ಬ್ಯಾಟ್ಸ್ ಮನ್ ಆಗಿ ಅದ್ಭುತ ಪ್ರದರ್ಶನ ನೀಡುವ ಭರವಸೆಯನ್ನು ಎಲ್ಲರೂ ವ್ಯಕ್ತಪಡಿಸಿದ್ದರು. ಆದರೆ ಈ ಸೀಸನ್ನಲ್ಲಿ ಅವರು 7 ಪಂದ್ಯಗಳಲ್ಲಿ 19.83 ಸರಾಸರಿಯಲ್ಲಿ 119 ರನ್ ಗಳಿಸಿದ್ದಾರೆ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ