ಐಪಿಎಲ್ ಸೀಸನ್ 15 ಗಾಗಿ (IPL 2022) 9 ತಂಡಗಳು ಈಗಾಗಲೇ ನಾಯಕರುಗಳನ್ನು ಘೋಷಿಸಿದೆ. ಇದಾಗ್ಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇನ್ನೂ ಕೂಡ ತನ್ನ ನಾಯಕನ ಆಯ್ಕೆ ಮಾಡಿಲ್ಲ. ಇತ್ತ ಐಪಿಎಲ್ (Ipl 2022 Schedule) ದಿನಾಂಕ ಘೋಷಣೆಯಾಗಿ, ಪ್ರತಿ ತಂಡಗಳು ಅಭ್ಯಾಸ ಶಿಬಿರದ ಸಿದ್ದತೆಯಲ್ಲಿದ್ದರೂ ಆರ್‌ಸಿಬಿ (IPL 2022 RCB Captain) ಮಾತ್ರ ಇನ್ನೂ ಯಾಕೆ ನಾಯಕನನ್ನು ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಸದ್ಯ ಸಿಗುತ್ತಿರುವ ಉತ್ತರ, ಯಾರನ್ನು ನಾಯಕರನ್ನಾಗಿ ಮಾಡಬೇಕೆಂಬ ಗೊಂದಲ. ಏಕೆಂದರೆ ಆರ್‌ಸಿಬಿ ಫ್ರಾಂಚೈಸಿಯ ಹಿಟ್ ಲೀಸ್ಟ್ನಲ್ಲಿ ಮೂವರು ಆಟಗಾರರ ಹೆಸರಿದೆ. ಅದರಂತೆ ಇಬ್ಬರು ವಿದೇಶಿ ಆಟಗಾರರು ಹಾಗೂ ಒಬ್ಬ ಭಾರತೀಯ ಆಟಗಾರರ ಆರ್‌ಸಿಬಿ ಕ್ಯಾಪ್ಟನ್ ಪಟ್ಟಿಯಲ್ಲಿದ್ದಾರೆ. ಈ ಮೂವರು ಈಗಾಗಲೇ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಚರ್ಚೆ ಮುಂದುವರೆದಿದೆ.
ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ (Faf du Plessis) ಮುಂಚೂಣಿಯಲ್ಲಿದ್ದಾರೆ. ಇದಾಗ್ಯೂ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಕೂಡ ಈ ಪಟ್ಟಿಯಲ್ಲಿದ್ದಾರೆ. ಇಲ್ಲಿ ಮ್ಯಾಕ್ಸ್ವೆಲ್ ಅವರನ್ನು ಆರ್‌ಸಿಬಿ ಈ ಬಾರಿ ಕಡಿಮೆ ಮೊತ್ತಕ್ಕೆ ರಿಟೈನ್ ಮಾಡಿಕೊಂಡಿತ್ತು ಎಂಬುದು ಉಲ್ಲೇಖಾರ್ಹ. ಇನ್ನು ತಮಿಳುನಾಡು ಹಾಗೂ ಕೆಕೆಆರ್ ತಂಡವನ್ನು ಮುನ್ನಡೆಸಿದ ದಿನೇಶ್ ಕಾರ್ತಿಕ್ (Dinesh Karthik) ಕೂಡ ಈ ಪಟ್ಟಿಯಲ್ಲಿದ್ದಾರೆ.
ಇಲ್ಲಿ ಮೂವರು ಕೂಡ ಅನುಭವಿ ನಾಯಕರುಗಳೇ ಎಂದೇ ಹೇಳಬಹುದು. ಅದರಲ್ಲೂ ವಿದೇಶಿ ಆಟಗಾರರನ್ನು ನಾಯಕರಾಗಿ ಆಯ್ಕೆ ಮಾಡಿದರೆ ಸಮಸ್ಯೆ ಎದುರಿಸಬಹುದೇ ಎಂಬ ಪ್ರಶ್ನೆಗಳು ಆರ್‌ಸಿಬಿ ಫ್ರಾಂಚೈಸಿ ಮುಂದಿದೆ. ಏಕೆಂದರೆ ಫಾಫ್ ಡುಪ್ಲೆಸಿಸ್ ಆರ್‌ಸಿಬಿ ತಂಡಕ್ಕೆ ಹೊಸ ಆಟಗಾರ. ಇನ್ನು ಗ್ಲೆನ್ ಮ್ಯಾಕ್ಸ್ವೆಲ್ ಅವರಿಗೆ ನಾಯಕತ್ವ ನೀಡಿ ಅವರ ಮೇಲೆ ಒತ್ತಡ ಹಾಕುವುದರಿಂದ ಫಾರ್ಮ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿಯೇ ತಂಡದ ಹೊಸ ನಾಯಕನ ಆಯ್ಕೆ ಬಗ್ಗೆ ಎಚ್ಚರವಹಿಸಲು ಆರ್‌ಸಿಬಿ ಮುಂದಾಗಿದೆ.
“ಆರ್‌ಸಿಬಿ ಮುಂದೆ ಸಾಕಷ್ಟು ಆಯ್ಕೆಗಳಿವೆ. ಎಲ್ಲರೂ ಸಮರ್ಥ ನಾಯಕರು. ದಿನೇಶ್ ಕಾರ್ತಿಕ್ಗೆ ವಿರಾಟ್ ಕೊಹ್ಲಿ ತುಂಬಾ ಹತ್ತಿರದಿಂದ ಗೊತ್ತು. ಹಾಗೆಯೇ ಈ ಹಿಂದೆ ಆರ್‌ಸಿಬಿ ಪರ ಆಡಿದ್ದರು. ಇನ್ನು ಗ್ಲೆನ್ ಮ್ಯಾಕ್ಸ್ವೆಲ್ ಈಗ ಒಂದು ವರ್ಷದಿಂದ ನಮ್ಮೊಂದಿಗೆ ಇದ್ದಾರೆ. ಹಾಗೆಯೇ ಫಾಫ್ ದಕ್ಷಿಣ ಆಫ್ರಿಕಾದ ಅದ್ಭುತ ನಾಯಕರಾಗಿದ್ದರು. ಆದರೆ ನಮಗೆ ಯಾರು ಉತ್ತಮ ಎಂಬುದನ್ನು ನಾವು ನಿರ್ಧರಿಸಬೇಕು. ಹೀಗಾಗಿ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ವಿಳಂಬವಾಗಿದೆ ಎಂದು ಆರ್‌ಸಿಬಿ ಮೂಲಗಳು ತಿಳಿಸಿವೆ.
ಈ ಬಗ್ಗೆ ಆರ್‌ಸಿಬಿ ಮಾಲೀಕರು, ಕೋಚ್ ಸಂಜಯ್ ಬಂಗಾರ್ ಹಾಗೂ ನಿರ್ದೇಶಕ ಮೈಕ್ ಹೆಸನ್ ಅವರು ನಡೆಸಿದ್ದು, ಶ್ರೀಘ್ರದಲ್ಲೇ ತಂಡದ ಹೊಸ ಸಾರಥಿಯನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಆರ್ಸಿಬಿಯ ವಿಳಂಬ ಇದೀಗ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಯಾರು ಎಂಬ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(IPL 2022: Why is RCB Taking Their Time in Announcing New Captain?)