IPL 2023 Auction: ಐಪಿಎಲ್ ಸೀಸನ್ 16 ಮಿನಿ ಹರಾಜಿನಲ್ಲಿ ಭಾರೀ ಮೊತ್ತದ ನಿರೀಕ್ಷೆಯಲ್ಲಿದ್ದ ತಮಿಳುನಾಡಿನ ಯುವ ಬ್ಯಾಟ್ಸ್ಮನ್ ನಾರಾಯಣ್ ಜಗದೀಸನ್ (Narayan Jagadeesan) 90 ಲಕ್ಷ ರೂ.ಗೆ ಹರಾಜಾಗಿದ್ದಾರೆ. ಭಾರೀ ನಿರೀಕ್ಷೆಗೆ ಕಾರಣವಾಗಿದ್ದ ಜಗದೀಸನ್ ಬಿಡ್ಡಿಂಗ್ನಲ್ಲಿ ಯಾವುದೇ ಪೈಪೋಟಿ ಕಂಡು ಬಂದಿರಲಿಲ್ಲ. ಮೂಲ ಬೆಲೆ 20 ಲಕ್ಷ ರೂ.ನೊಂದಿಗೆ ಆರಂಭವಾಗಿದ್ದ ಬಿಡ್ಡಿಂಗ್ ಅಂತಿಮವಾಗಿ 90 ಲಕ್ಷ ರೂ.ಗೆ ಬಂದು ನಿಂತಿತು. ಅಂದರೆ ನಾರಾಯಣ್ ಜಗದೀಸನ್ 90 ಲಕ್ಷ ರೂ.ಗೆ ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ.
ಕಳೆದ ಸೀಸನ್ನಲ್ಲಿ ಸಿಎಸ್ಕೆ ಪರ ಆಡಿದ್ದ ಜಗದೀಸನ್ ಈ ವರ್ಷ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಈ ವೇಳೆ ಕೇವಲ 8 ಪಂದ್ಯಗಳಲ್ಲಿ 830 ರನ್ ಗಳಿಸಿದ್ದರು. ಇದರಲ್ಲಿ 5 ಭರ್ಜರಿ ಶತಕಗಳು ಒಳಗೊಂಡಿತ್ತು. ಅದರಲ್ಲೂ 5 ಪಂದ್ಯಗಳಲ್ಲಿ 114*, 107, 168, 128 ಮತ್ತು 277 ಬಾರಿಸುವ ಮೂಲಕ ಸತತ ಐದು ಶತಕ ಸಿಡಿಸಿದ ದಾಖಲೆ ಬರೆದಿದ್ದರು. ಹೀಗಾಗಿಯೇ ನಾರಾಯಣ್ ಜಗದೀಸನ್ ಕೋಟಿ ಮೊತ್ತಕ್ಕೆ ಹರಾಜಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 90 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತ ನೀಡಲು ಯಾವುದೇ ಫ್ರಾಂಚೈಸಿ ಮುಂದಾಗಲಿಲ್ಲ. ಅಂದರಂತೆ ಅಂತಿಮ ಬಿಡ್ ಗೆದ್ದ ಕೆಕೆಆರ್ ಪರ ಜಗದೀಸನ್ ಈ ಬಾರಿ ಐಪಿಎಲ್ ಆಡಲಿದ್ದಾರೆ.
ಮತ್ತೊಂದೆಡೆ 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ. ನೀಡುವ ಮೂಲಕ ತಮ್ಮದಾಗಿಸಿಕೊಂಡಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ದಾಖಲೆ ಸ್ಯಾಮ್ ಪಾಲಾಗಿದೆ. ಹಾಗೆಯೇ ಅಚ್ಚರಿ ಎಂಬಂತೆ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್, ಬ್ಯಾಟರ್ ನಿಕೋಲಸ್ ಪೂರನ್ ಅವರನ್ನು ಲಕ್ನೋ ಸೂಪರ್ ಜೇಂಟ್ಸ್ ಫ್ರಾಂಚೈಸಿ ಬರೋಬ್ಬರಿ 16 ಕೋಟಿಗೆ ಖರೀದಿ ಮಾಡಿದೆ.
ಇನ್ನು ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಸಿಎಸ್ಕೆ ತಂಡವು ದಾಖಲೆಯ 16.25 ಕೋಟಿ ಮೊತ್ತಕ್ಕೆ ಖರೀದಿಸಿದರೆ, ಆಸ್ಟ್ರೇಲಿಯಾದ ಯುವ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 17.5 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದೆ.
Published On - 5:41 pm, Fri, 23 December 22