ಪ್ರಸ್ತುತ ಕ್ರಿಕೆಟ್ ಬಿಗ್ಬಾಸ್ ಬಿಸಿಸಿಐ ತನ್ನ ಮಿಲಿಯನ್ ಡಾಲರ್ ಕೂಸಾದ ಐಪಿಎಲ್ 16ನೇ ಆವೃತ್ತಿಯ ತಯಾರಿಯಲ್ಲಿ ನಿರತವಾಗಿದೆ. ಇದರ ಅಂಗವಾಗಿ ಇದೇ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ಆಯೋಜಿಸಲಾಗಿದ್ದು, ಎಲ್ಲ ಫ್ರಾಂಚೈಸಿಗಳು ಇದಕ್ಕಾಗಿ ಸಿದ್ಧತೆ ನಡೆಸುತ್ತಿವೆ. ಈಗಾಗಲೇ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೀಗಿರುವಾಗ ಐಪಿಎಲ್ 2023 ಟೂರ್ನಿಯಲ್ಲಿ ಬಿಸಿಸಿಐ (BCCI) ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಇದರ ಅಂಗವಾಗಿ ಐಪಿಎಲ್ ಮುಂದಿನ ಸೀಸನ್ನಿಂದ ಇಂಪ್ಯಾಕ್ಟ್ ಪ್ಲೇಯರ್ ಎಂಬ ನಿಯಮವನ್ನು ಅಳವಡಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಲಾರಂಭಿಸಿದೆ. ಬಿಸಿಸಿಐನ ಈ ನಿರ್ಧಾರದಿಂದ ಐಪಿಎಲ್ ಫ್ರಾಂಚೈಸಿಗಳು ಹಾಗೂ ಅಭಿಮಾನಿಗಳು ಸಾಕಷ್ಟು ಸಂತಸಗೊಂಡಿದ್ದರು. ಆದರೀಗ ತಾನು ಜಾರಿಗೆ ತರುವ ನಿಯಮದಲ್ಲಿ ಬಿಸಿಸಿಐ ಕೊಂಚ ಬದಲಾವಣೆ ಮಾಡಲು ಮುಂದಾಗಿದೆ. ಇದು ಐಪಿಎಲ್ ಫ್ರಾಂಚೈಸಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈ ವರ್ಷದ ಐಪಿಎಲ್ನಿಂದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಪರಿಚಯಿಸಲಾಗುವುದು ಎಂದು ಬಿಸಿಸಿಐ ಕೆಲವು ದಿನಗಳ ಹಿಂದೆ ಘೋಷಿಸಿತ್ತು. ಇದರ ಅಡಿಯಲ್ಲಿ, ತಂಡಗಳು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಪಂದ್ಯದ ಸಮಯದಲ್ಲಿ ಯಾವುದೇ ಆಟಗಾರನನ್ನು ಬದಲಾಯಿಸುವ ಅವಕಾಶ ಪಡೆಯಲಿವೆ. ನಿಯಮದ ಪ್ರಕಾರ ತಂಡಗಳು ತಾವು ಘೋಷಿಸಿರುವ ತಂಡದಲ್ಲಿ ಒಬ್ಬ ಬೌಲರ್ ಬದಲಿಗೆ ಒಬ್ಬ ಬ್ಯಾಟ್ಸ್‌ಮನ್ ಅಥವಾ ಬ್ಯಾಟ್ಸ್‌ಮನ್ ಬದಲಿಗೆ ಬೌಲರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಬಿಸಿಸಿಐ, ಇತ್ತೀಚಿಗೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಈ ನಿಯಮವನ್ನು ಅಳವಡಿಸಿಕೊಂಡಿತ್ತು. ಅಲ್ಲಿ ಸಿಕ್ಕ ಯಶಸ್ಸಿನ ನಂತರ ಈ ನಿಯಮವನ್ನು ಐಪಿಎಲ್‌ನಲ್ಲೂ ಸೇರಿಸಲು ನಿರ್ಧರಿಸಿದೆ.
ಭಾರತೀಯ ಆಟಗಾರರು ಮಾತ್ರ ಬದಲಿಯಾಗಿ ಬರಬಹುದು
ಬಿಸಿಸಿಐನ ಈ ನಿರ್ಧಾರ ಐಪಿಎಲ್ ಫ್ರಾಂಚೈಸಿಗಳಿಗೆ ಇನ್ನಿಲ್ಲದ ಸಂತೋಷ ಉಂಟುಮಾಡಿತ್ತು. ಏಕೆಂದರೆ ಈ ನಿಯಮದಡಿಯಲ್ಲಿ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಆಟಗಾರನನ್ನು ಬದಲಿಸಿ ಪಂದ್ಯವನ್ನು ಗೆದ್ದುಕೊಳ್ಳುವ ಅವಕಾಶ ಫ್ರಾಂಚೈಸಿಗಳಿಗೆ ಸಿಕ್ಕಿತ್ತು. ಆದರೀಗ ಈ ನಿಯಮದಲ್ಲಿ ಬಿಸಿಸಿಐ ಕೊಂಚ ಬದಲಾವಣೆ ತರಲು ಮುಂದಾಗಿದೆ. ಇದರಡಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಕೇವಲ ಭಾರತೀಯ ಆಟಗಾರರಿಗೆ ಮಾತ್ರ ಅನ್ವಯವಾಗುವಂತೆ ಬದಲಾವಣೆ ಮಾಡಲು ಬಿಸಿಸಿಐ ನಿರ್ಧಾರ ಮಾಡಿದೆ. ಅಂದರೆ, ಈ ನಿಯಮದಡಿಯಲ್ಲಿ ಕೇವಲ ಭಾರತೀಯ ಆಟಗಾರರು ಮಾತ್ರ ಬದಲಿ ಆಟಗಾರರಿಗೆ ತಂಡಕ್ಕೆ ಸೇರಿಕೊಳ್ಳಬಹುದಾಗಿದೆ. ಬಿಸಿಸಿಐನ ಈ ಚಿಂತನೆಯ ಪ್ರಕಾರ ಈ ನಿಯಮ ವಿದೇಶಿ ಆಟಗಾರರಿಗೆ ಅನ್ವಯವಾಗುವುದಿಲ್ಲ.
ತಂಡಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ
ಬಿಸಿಸಿಐ, ಈ ನಿಯಮದ ಬಳಕೆಯ ಷರತ್ತುಗಳನ್ನು ಇನ್ನೂ ಔಪಚಾರಿಕವಾಗಿ ಘೋಷಿಸದಿದ್ದರೂ, ಈಗ ಹೊರಬಿದ್ದಿರುವ ಬಲ್ಲ ಮೂಲಗಳ ಪ್ರಕಾರ, ಈ ನಿಯಮವನ್ನು ಬಳಸಿಕೊಳ್ಳಲಿರುವ ತಂಡಗಳು ಪಂದ್ಯ ಆರಂಭಕ್ಕೂ ಮುನ್ನವೇ ತನ್ನ ತಂಡದ 12 ಸದಸ್ಯರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಇದರಲ್ಲಿ 12ನೇ ಆಟಗಾರನಾಗಿ ಅಥವಾ ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ಆಟಗಾರ ಭಾರತೀಯನೇ ಆಗಿರಬೇಕು ಎಂದು ವರದಿಯಾಗಿದೆ. ಅಲ್ಲದೆ ಫ್ರಾಂಚೈಸಿಗಳು ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ವಿದೇಶಿ ಆಟಗಾರನ ಜಾಗದಲ್ಲಿ ವಿದೇಶಿ ಆಟಗಾರನನ್ನು ಕರೆಯುವಂತಿಲ್ಲ. ಹಾಗೆಯೇ ಭಾರತೀಯ ಆಟಗಾರನ ಜಾಗದಲ್ಲಿ ವಿದೇಶಿ ಆಟಗಾರನನ್ನು ಸೇರಿಸಿಕೊಳ್ಳುವಂತಿಲ್ಲ.
ಹಾಗೆಯೇ ಒಂದು ತಂಡ ತಾನು ಆಡುವ ಪ್ಲೇಯಿಂಗ್ ಇಲೆವೆನ್ನಲ್ಲಿ ಕೇವಲ ಮೂವರು ವಿದೇಶಿ ಆಟಗಾರರಿಗೆ ಸ್ಥಾನ ನೀಡಿದ್ದು, ಆ ಬಳಿಕ 4ನೇ ವಿದೇಶಿ ಆಟಗಾರನನ್ನು 12ನೇ ಆಟಗಾರನಾಗಿ ತಂಡದಲ್ಲಿ ಆಯ್ಕೆ ಮಾಡಿಕೊಂಡು, ಆ ನಂತರ ಆತನನ್ನು ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿಯಲ್ಲಿ ತಂಡಕ್ಕೆ ಸೇರಿಸಿಕೊಳ್ಳಬಹುದೇ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಹೊರಬಿದ್ದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಿದೇಶಿ ಆಟಗಾರರಿಗೆ ಏಕೆ ಈ ನಿಯಮ ಅನ್ವಯಿಸುವುದಿಲ್ಲ?
ಬಿಸಿಸಿಐನ ಈ ನಿರ್ಧಾರಕ್ಕೆ ದೊಡ್ಡ ಕಾರಣವೆಂದರೆ, ಐಪಿಎಲ್‌ನ ಆರಂಭದಿಂದಲೂ ಕೇವಲ 4 ವಿದೇಶಿ ಆಟಗಾರರಿಗೆ ತಂಡದಲ್ಲಿ ಆಡುವ ಅವಕಾಶ ನೀಡಬೇಕೆಂಬ ನಿಯಮ ಜಾರಿ ಇದೆ. ಇದರಡಿಯಲ್ಲಿ ಯಾವುದೇ ತಂಡವು 4 ಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಆಡುವ ಹನ್ನೊಂದರಲ್ಲಿ ಸೇರಿಸುವಂತಿಲ್ಲ. ಒಂದು ವೇಳೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ವಿದೇಶಿ ಆಟಗಾರರಿಗೂ ಅನ್ವಯವಾಗುವಂತ್ತಾದರೆ, ಈಗಾಗಲೇ ತಂಡದಲ್ಲಿ 4 ವಿದೇಶಿ ಆಟಗಾರರು ಆಯ್ಕೆಯಾಗಿದ್ದು, ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿಯಲ್ಲಿ ಮತ್ತೊಬ್ಬ ವಿದೇಶಿ ಆಟಗಾರ ತಂಡಕ್ಕೆ ಎಂಟ್ರಿಕೊಟ್ಟರೆ, ಒಂದು ತಂಡದಲ್ಲಿ ಐವರು ವಿದೇಶಿ ಆಟಗಾರರು ಆಡಿದ್ದಂತ್ತಾಗುತ್ತದೆ. ಆದ್ದರಿಂದ ಈ ನಿಯಮವನ್ನು ಎಂದಿನಂತೆ ಮುಂದುವರೆಸಿಕೊಂಡು ಹೋಗುವ ಸಲುವಾಗಿಯೇ ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮ ವಿದೇಶಿ ಆಟಗಾರರಿಗೆ ಅನ್ವಯಿಸುವುದಿಲ್ಲ ಎಂಬ ಷರತ್ತನ್ನು ಬಿಸಿಸಿಐ ವಿಧಿಸಲು ಮುಂದಾಗಿದೆ.
ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:16 am, Fri, 9 December 22