ಬಾಂಗ್ಲಾದೇಶ ಪ್ರವಾಸದಲ್ಲಿರುವ ಟೀಮ್ ಇಂಡಿಯಾಕ್ಕೆ ಒಂದರ ಮೇಲೊಂದು ಆಘಾತ ಉಂಟಾಗುತ್ತಿದೆ. ಈಗಾಗಲೇ ಸರಣಿ ಸೋಲಿನ ಶಾಕ್ನಲ್ಲಿರುವ ಭಾರತಕ್ಕೆ ಗಾಯದ ಸಮಸ್ಯೆ ಕೂಡ ಬೆಂಬಿಡದೆ ಕಾಡುತ್ತಿದೆ. ರೋಹಿತ್ ಶರ್ಮಾ, ದೀಪಕ್ ಚಹರ್ ಹಾಗೂ ಕುಲ್ದೀಪ್ ಸೇನ್ ಬಾಂಗ್ಲಾ ವಿರುದ್ಧದ ತೃತೀಯ ಏಕದಿನ ಪಂದ್ಯದಿಂದ ಹೊರಬಿದ್ದಾಗಿದೆ. ಇದೀಗ ಟೆಸ್ಟ್ ಸರಣಿಯಿಂದ ಇಬ್ಬರು ಸ್ಟಾರ್ ಪ್ಲೇಯರ್ಸ್ ಔಟ್ ಆಗಿದ್ದಾರೆ.
ಇಂಜುರಿಯಿಂದಾಗಿ ಏಕದಿನ ಸರಣಿಯಿಂದ ಹೊರಬಿದ್ದಿರುವ ಮೊಹಮ್ಮದ್ ಶಮಿ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಕೂಡ ಅಲಭ್ಯರಾಗಿದ್ದಾರೆ ಎಂದು ವರದಿ ಆಗಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಮೊದಲ ಮ್ಯಾಚ್ ಡಿಸೆಂಬರ್ 14 ರಿಂದ ಆರಂಭವಾಗಲಿದೆ. ಈ ಹೊತ್ತಿಗೆ ಶಮಿ ಗುಣಮುಖರಾಗುವುದು ಅನುಮಾನ ಆಗಿದ್ದರಿಂದ ಟೆಸ್ಟ್ ಸರಣಿಯಿಂದ ಔಟಾಗಿದ್ದಾರೆ.
ಹಾಗೆಯೇ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಪಡೆದುಕೊಂಡಿರುವ ರವೀಂದ್ರ ಜಡೇಜಾ ಕೂಡ ಸಂಪೂರ್ಣ ಫಿಟ್ ಆಗಿಲ್ಲದ ಕಾರಣ ಇವರು ಕೂಡ ಬಾಂಗ್ಲಾ ವಿರುದ್ಧದ ಟೆಸ್ಟ್ಗೆ ಅಲಭ್ಯರಾಗಲಿದ್ದಾರಂತೆ. ಜಡೇಜಾ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕವಷ್ಟೇ ಆಯ್ಕೆಗೆ ಪರಿಗಣಿಸಲಾಗುತ್ತದಂತೆ.
ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಸಿಸಿ ಟಿ20 ವಿಶ್ವಕಪ್‌ನಿಂದ ಭಾರತ ತಂಡ ಸೆಮಿಫೈನಲ್‌ನಲ್ಲಿ ನಿರ್ಗಮಿಸಿ ಆಸ್ಟ್ರೇಲಿಯಾದಿಂದ ಹಿಂದಿರುಗಿದ ನಂತರ ಶಮಿ ತರಬೇತಿ ಅವಧಿಯಲ್ಲಿ ಗಾಯಗೊಂಡಿದ್ದರು. ಹೀಗಾಗಿ ಶಮಿ ಡಿಸೆಂಬರ್ 1 ರಂದು ಭಾರತ ತಂಡದೊಂದಿಗೆ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿರಲಿಲ್ಲ. ಅವರೀಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಡೇಜಾ ಹಾಗೂ ಶಮಿ ಜಾಗಕ್ಕೆ ಉತ್ತರ ಪ್ರದೇಶದ ಸೌರಭ್ ಕುಮಾರ್ ಮತ್ತು ನವ್ದೀಪ್ ಸೈನಿ ಆಯ್ಕೆ ಆಗುವ ಸಾಧ್ಯತೆ ಇದೆ. ಇವರಿಬ್ಬರೂ ಸದ್ಯ ಭಾರತ ಎ ತಂಡದ ಪರ ಬಾಂಗ್ಲಾದೇಶ ಪ್ರವಾಸದಲ್ಲಿದ್ದಾರೆ. ಸೌರಭ್ ಕಳೆದ ರಣಜಿ ಟ್ರೋಫಿಯಿಂದಲೂ ಭರ್ಜರಿ ಫಾರ್ಮ್ನಲ್ಲಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಿಂದ ನಾಯಕ ರೋಹಿತ್ ಶರ್ಮಾ, ದೀಪಕ್ ಚಹರ್ ಮತ್ತು ಕುಲ್ದೀಪ್ ಸೇನ್ ಸೇವೆಯಿಲ್ಲ. ಈಗಾಗಲೇ ಸೋಲಿನ ಆಘಾತದಲ್ಲಿ ಟೀಮ್ ಇಂಡಿಯಾಕ್ಕೆ ಸ್ವತಃ ನಾಯಕ ಸೇರಿ ಪ್ರಮುಖ ಆಟಗಾರರ ಅಲಭ್ಯತೆ ದೊಡ್ಡ ಹೊಡೆತ ನೀಡಿದೆ.
ರೋಹಿತ್ ಶರ್ಮಾ ಅವರು ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಸ್ಲಿಪ್ ವಿಭಾಗದಲ್ಲಿ ಕ್ಯಾಚ್ ತೆಗೆದುಕೊಳ್ಳುವಾಗ ಎಡಗೈ ಹೆಬ್ಬೆರಳು ಮುರಿದು ಕೊಂಡರು. ಹೀಗಾಗಿ ಇವರು ಪಂದ್ಯದ ಬಹುಪಾಲು ಪೆವಿಲಿಯನ್‌ನಲ್ಲೇ ಇದ್ದರು. ಹೆಬ್ಬೆರಳಿಗೆ ಬ್ಯಾಂಡೇಜ್ ತೊಟ್ಟು ಡಗೌಟ್‌ನಲ್ಲಿ ಕುಳಿತಿದ್ದ ರೋಹಿತ್ ಕೊನೆಯಲ್ಲಿ ಬ್ಯಾಟಿಂಗ್ಗೆ ಬಂದರು.
ಇನ್ನೂ ದೀಪಕ್ ಚಹರ್ ಅವರು ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ಪಂದ್ಯದ ಮಧ್ಯೆ ನೋವು ಜೋರಾಗಿ ಕಾಣಿಸಿಕೊಂಡ ಕಾರಣ ಇವರು ಕೇವಲ ಮೂರು ಓವರ್ಗಳನ್ನಷ್ಟೆ ಬಾಲ್ ಮಾಡಿದರು. ಕುಲ್ದೀಪ್ ಸೇನ್ ಕೂಡ ಬೆನ್ನು ನೋವಿನಿ ಗಾಯಕ್ಕೀಡಾಗಿದ್ದಾರೆ. ಹೀಗಾಗಿ ಇವರು ಕೂಡ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ.
Published On - 9:07 am, Fri, 9 December 22