ಐಪಿಎಲ್ ಸೀಸನ್ 16 ಮಿನಿ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಇವರಲ್ಲಿ 714 ಭಾರತೀಯ ಹಾಗೂ 277 ವಿದೇಶಿ ಆಟಗಾರರಿದ್ದಾರೆ. ಆದರೆ ಇವರಲ್ಲಿ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ.
ಅದರಲ್ಲೂ ಕೆಲ ಸ್ಟಾರ್ ಆಟಗಾರರು ಕಳಪೆ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಅವರ ಖರೀದಿಗೆ ಫ್ರಾಂಚೈಸಿಗಳು ಮುಂದಾಗುವುದಿಲ್ಲ ಎಂದೇ ಹೇಳಬಹುದು. ಅಂತಹ ಐವರು ಆಟಗಾರರ ಪಟ್ಟಿ ಹೀಗಿದೆ....
ಜೇಸನ್ ರಾಯ್: ಇಂಗ್ಲೆಂಡ್ನ ಸ್ಟಾರ್ ಆರಂಭಿಕ ಆಟಗಾರ ಜೇಸನ್ ರಾಯ್ ಈ ಬಾರಿಯ ಐಪಿಎಲ್ನಲ್ಲಿ 1.5 ಕೋಟಿ ಮೂಲ ಬೆಲೆ ಘೋಷಿಸಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ಟಿ10 ಲೀಗ್ನಲ್ಲಿ ಅವರ ಪ್ರದರ್ಶನ ಅತ್ಯಂತ ಕಳಪೆ ಮಟ್ಟದಲ್ಲಿತ್ತು. ಟಿ10 ಲೀಗ್ನಲ್ಲಿ ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜೇಸನ್ ರಾಯ್ ಕಲೆಹಾಕಿದ್ದು ಕೇವಲ 84 ರನ್ಗಳು ಮಾತ್ರ. ಅತ್ತ ಕಳಪೆ ಫಾರ್ಮ್ ಕಾರಣ ಇಂಗ್ಲೆಂಡ್ ತಂಡದಿಂದ ಕೂಡ ಹೊರಬಿದ್ದಿದ್ದಾರೆ. ಹೀಗಾಗಿ ಜೇಸನ್ ರಾಯ್ ಅವರನ್ನು ಐಪಿಎಲ್ ಫ್ರಾಂಚೈಸಿಗಳು ನಿರ್ಲಕ್ಷಿಸುವ ಸಾಧ್ಯತೆ ಹೆಚ್ಚಿದೆ.
ಚಮಿಕಾ ಕರುಣರತ್ನೆ: ಶ್ರೀಲಂಕಾ ಆಟಗಾರ ಚಮಿಕಾ ಕರುಣರತ್ನೆ ಈ ಬಾರಿಯ ಐಪಿಎಲ್ ಹರಾಜಿಗಾಗಿ 50 ಲಕ್ಷ ರೂ. ಮೂಲಬೆಲೆ ಘೋಷಿಸಿದ್ದಾರೆ. ಆದರೆ ಅಬುಧಾಬಿ ಟಿ10 ಲೀಗ್ನಲ್ಲಿ ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ್ದ ಕರುಣರತ್ನೆ 7 ಪಂದ್ಯಗಳಲ್ಲಿ 8.1 ಓವರ್ ಬೌಲಿಂಗ್ ಮಾಡಿ 11.75 ರ ಸರಾಸರಿಯಲ್ಲಿ ರನ್ ನೀಡಿದ್ದರು. ಅಲ್ಲದೆ ಪಡೆದಿದ್ದು ಕೇವಲ 3 ವಿಕೆಟ್ ಮಾತ್ರ. ಹೀಗಾಗಿ ಚಮಿಕಾ ಅವರ ಖರೀದಿಗೂ ಫ್ರಾಂಚೈಸಿಗಳು ಆಸಕ್ತಿ ತೋರುವುದು ಅನುಮಾನ.
ಕೆನ್ನರ್ ಲೂಯಿಸ್: ವೆಸ್ಟ್ ಇಂಡೀಸ್ ದಾಂಡಿಗ ಕೆನ್ನರ್ ಲೂಯಿಸ್ ಈ ಬಾರಿಯ ಟಿ10 ಲೀಗ್ನಲ್ಲಿ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ ಕಲೆಹಾಕಿದ್ದು ಕೇವಲ 41 ರನ್ಗಳು ಮಾತ್ರ. ಹೀಗಾಗಿ ಕೆನ್ನರ್ ಲೂಯಿಸ್ ಕೂಡ ಈ ಬಾರಿಯ ಹರಾಜಾಗುವುದು ಡೌಟ್.
ಕಾಲಿನ್ ಮನ್ರೋ: ನ್ಯೂಜಿಲೆಂಡ್ ತಂಡದ ಎಡಗೈ ದಾಂಡಿಗ ಕಾಲಿನ್ ಮನ್ರೋ ಕೂಡ ಈ ಬಾರಿಯ ಐಪಿಎಲ್ನಲ್ಲಿ ಹರಾಜಾಗುವುದು ಅನುಮಾನ. ಏಕೆಂದರೆ ಅಬುಧಾಬಿ ಟಿ10 ಲೀಗ್ನಲ್ಲಿ 7 ಪಂದ್ಯವಾಡಿದ್ದ ಮನ್ರೊ ಕಲೆಹಾಕಿದ್ದು ಕೇವಲ 78 ರನ್ ಮಾತ್ರ.
ಡೇವಿಡ್ ಮಲಾನ್: ಈ ಬಾರಿಯ ಐಪಿಎಲ್ ಹರಾಜಿಗಾಗಿ ಇಂಗ್ಲೆಂಡ್ ಆಟಗಾರ ಡೇವಿಡ್ ಮಲಾನ್ 1.5 ಕೋಟಿ ಮೂಲ ಬೆಲೆ ಘೋಷಿಸಿದ್ದಾರೆ. ಆದರೆ ಅತ್ತ ಟಿ10 ಲೀಗ್ನಲ್ಲಿ ಮಲಾನ್ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದರು. 6 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಮಲಾನ್ ಕಲೆಹಾಕಿದ್ದು ಕೇವಲ 84 ರನ್ಗಳು ಮಾತ್ರ. ಹೀಗಾಗಿ ಇಂಗ್ಲೆಂಡ್ ಆಟಗಾರ ಖರೀದಿಗೂ ಐಪಿಎಲ್ ಫ್ರಾಂಚೈಸಿಗಳು ಆಸಕ್ತಿ ತೋರುವುದಿಲ್ಲ ಎಂದೇ ಹೇಳಬಹುದು.
Published On - 10:10 pm, Thu, 8 December 22