Updated on: Dec 08, 2022 | 8:31 PM
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಡಿಸೆಂಬರ್ 23 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರ ಬೆನ್ನಲ್ಲೇ ಐಪಿಎಲ್ 2023 ಆರಂಭ ದಿನಾಂಕ ಪ್ರಕಟಗೊಳ್ಳಲಿದೆ.
ಐಪಿಎಲ್ ಆಡಳಿತ ಮಂಡಳಿಯ ಮೂಲಗಳ ಮಾಹಿತಿ ಪ್ರಕಾರ, ಈ ಬಾರಿಯ ಐಪಿಎಲ್ ಮಾರ್ಚ್ 31 ಅಥವಾ ಏಪ್ರಿಲ್ 1 ರಿಂದ ಶುರುವಾಗಲಿದೆ. ಈಗಾಗಲೇ ದಿನಾಂಕ ಫಿಕ್ಸ್ ಮಾಡಲಾಗಿದ್ದು, ಇದಾಗ್ಯೂ ಡೇಟ್ ಫೈನಲ್ ಮಾಡಲು IPL ಗವರ್ನರ್ ಕೌನ್ಸಿಲ್ ಸಭೆಯನ್ನು ಕರೆಯಲಾಗುತ್ತಿದೆ ಎಂದಿದ್ದಾರೆ.
ಮುಂದಿನ ವರ್ಷ ಐಸಿಸಿ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್ ಪಂದ್ಯ ಕೂಡ ನಡೆಯಲಿದೆ. ನಿಯಮಗಳ ಪ್ರಕಾರ ಆಟಗಾರರು WTC ಫೈನಲ್‌ಗೆ ಏಳು ದಿನಗಳ ಮೊದಲು ಯಾವುದೇ ಲೀಗ್‌ನಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದಿನಾಂಕವನ್ನು ಕೂಡ ನಾವು ಗಣನೆಗೆ ತೆಗೆದುಕೊಳ್ಳಬೇಕು. ಹಾಗಾಗಿ WTC ಫೈನಲ್ ಪಂದ್ಯದ ದಿನಾಂಕದ ಖಚಿತತೆಯ ಬೆನ್ನಲ್ಲೇ ಐಪಿಎಲ್ ದಿನಾಂಕವನ್ನು ಪ್ರಕಟಿಸಲಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಮಾಹಿತಿ ಪ್ರಕಾರ, ಮಾರ್ಚ್ 31 ಅಥವಾ ಏಪ್ರಿಲ್ 1 ರಿಂದ ಐಪಿಎಲ್ ಸೀಸನ್ 16 ಶುರುವಾಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಮಾರ್ಚ್ 22 ರಂದು ಟೀಮ್ ಇಂಡಿಯಾದ ಎಲ್ಲಾ ಸರಣಿಗಳು ಕೂಡ ಮುಕ್ತಾಯಗೊಳ್ಳಲಿದೆ. ಅಂದರೆ ಭಾರತೀಯ ಆಟಗಾರರು ಒಂದು ವಾರದ ವಿಶ್ರಾಂತಿಯ ಬಳಿಕ ಐಪಿಎಲ್ನಲ್ಲಿ ಕಾಣಿಸಿಕೊಳ್ಳಬಹುದು.
ಇನ್ನು ಮಾರ್ಚ್ ಅಂತ್ಯ ಅಥವಾ ಏಪ್ರಿಲ್ 1 ರಿಂದ ಐಪಿಎಲ್ ಶುರುವಾದರೆ ಜೂನ್ ಮೊದಲ ವಾರದಲ್ಲಿ ಟೂರ್ನಿ ಮುಗಿಯುವ ಸಾಧ್ಯತೆಯಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ಜೂನ್ನಲ್ಲಿ ನಡೆಸಲು ಐಸಿಸಿಗೆ ಬಿಸಿಸಿಐ ಮನವಿ ಮಾಡಬಹುದು.
ಅದರಂತೆ ಏಪ್ರಿಲ್-ಮೇ ತಿಂಗಳಲ್ಲಿ ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್ ನಡೆಯಲಿದೆ ಎಂದೇ ಹೇಳಬಹುದು. ಈ ಬಾರಿ ಭಾರತದಲ್ಲಿ ಟೂರ್ನಿ ನಡೆಯಲಿದ್ದು, ಹೀಗಾಗಿ ಸ್ಟೇಡಿಯಂಗೆ ತೆರಳಿ ಪಂದ್ಯವನ್ನು ವೀಕ್ಷಿಸುವ ಅವಕಾಶ ಆಯಾ ಫ್ರಾಂಚೈಸಿಗಳ ಹೋಮ್ ಗ್ರೌಂಡ್ನಲ್ಲೂ ಇರಲಿರುವುದು ವಿಶೇಷ.