- Kannada News Photo gallery Cricket photos within two days 11 cricketers trap in injury cricket news in kannada
ಕಳೆದೆರಡು ದಿನಗಳಲ್ಲಿ 11 ಕ್ರಿಕೆಟಿಗರಿಗೆ ಇಂಜುರಿ..! ಕೆಲವರು ಆಸ್ಪತ್ರೆಗೆ ದಾಖಲು
ಬೇರೆ ಬೇರೆ ದೇಶಗಳ 11 ಕ್ರಿಕೆಟಿಗರು ಇಂಜುರಿ ಸಮಸ್ಯೆಗೆ ತುತ್ತಾಗಿದ್ದು, ಇವರಲ್ಲಿ ಕೆಲವರು ಪಂದ್ಯದಿಂದ ಹೊರಗುಳಿದಿದ್ದರೆ, ಇನ್ನು ಕೆಲವರು ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗೆಯೇ ಕೆಲವರು ಚಿಕಿತ್ಸೆಗಾಗಿ ಆಸ್ಪತ್ರೆಯನ್ನೂ ಸಹ ಸೇರಿದ್ದಾರೆ.
Updated on:Dec 08, 2022 | 4:48 PM

ಪ್ರಸ್ತುತ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ತಂಡಗಳು ಕ್ರಿಕೆಟ್ ಆಡುತ್ತಿವೆ. ಮುಂದಿನ ಏಕದಿನ ವಿಶ್ವಕಪ್ ತಯಾರಿಯನ್ನು ಈಗಿನಿಂದಲೇ ಆರಂಭಿಸಿರುವ ತಂಡಗಳು ಈ ಮಹಾ ಕ್ರೀಡಾಕೂಟಕ್ಕಾಗಿ ಆಟಗಾರರನ್ನು ಸಿದ್ದಪಡಿಸುತ್ತಿವೆ. ಈ ನಡುವೆ ಕೆಲವು ತಂಡಗಳಿಗೆ ಆಟಗಾರರ ಇಂಜುರಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈ ಸಮಸ್ಯೆಗೆ ಟೀಂ ಇಂಡಿಯಾ ಕೂಡ ಸಿಲುಕಿದ್ದು, ತಂಡದ ಪ್ರಮುಖ ಆಟಗಾರರು ಇಂಜುರಿಯಿಂದಾಗಿ ತಂಡದಿಂದ ಹೊರಗಿದ್ದಾರೆ. ಈ ನಡುವೆ ಬೇರೆ ಬೇರೆ ದೇಶಗಳ 11 ಕ್ರಿಕೆಟಿಗರು ಇಂಜುರಿ ಸಮಸ್ಯೆಗೆ ತುತ್ತಾಗಿದ್ದು, ಇವರಲ್ಲಿ ಕೆಲವರು ಪಂದ್ಯದಿಂದ ಹೊರಗುಳಿದಿದ್ದರೆ, ಇನ್ನು ಕೆಲವರು ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗೆಯೇ ಕೆಲವರು ಚಿಕಿತ್ಸೆಗಾಗಿ ಆಸ್ಪತ್ರೆಯನ್ನೂ ಸಹ ಸೇರಿದ್ದಾರೆ. ಅಂತಹ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.

ಜೋಶ್ ಹ್ಯಾಜಲ್‌ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್: ವಿಂಡೀಸ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಆಸೀಸ್ ತಂಡಕ್ಕೆ ಆಟಗಾರರ ಇಂಜುರಿ ಸಮಸ್ಯೆ ಹಿನ್ನಡೆಯುಂಟು ಮಾಡಿದೆ.ಈ ತಂಡದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಗಾಯದ ಕಾರಣ ಮೊದಲ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಇದೀಗ ಅವರು ಇಡೀ ಸರಣಿಯಿಂದಲೇ ಹೊರಗುಳಿಯಲಿದ್ದಾರೆ. ಮತ್ತೊಂದೆಡೆ, ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಇಂಜುರಿಯಿಂದ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಮಿಂಡ್ಲಿ, ರೋಚ್, ಸೀಲ್ಸ್, ಮೈಯರ್ಸ್ ಮತ್ತು ಬ್ರೋನರ್: ವೆಸ್ಟ್ ಇಂಡೀಸ್ ತಂಡದಲ್ಲೂ ಆಟಗಾರರ ಇಂಜುರಿ ಪಟ್ಟಿ ಸ್ವಲ್ಪ ದೊಡ್ಡದೆ ಇದ್ದು, ಮಂಡಿರಜ್ಜು ಗಾಯಕ್ಕೆ ತುತ್ತಾಗಿರುವ ತಂಡದ ಬೌಲರ್ ಮಿಂಡ್ಲಿ ಎರಡನೇ ಟೆಸ್ಟ್ ಆಡುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಮಿಂಡ್ಲಿ ಹೊರತುಪಡಿಸಿ, ಕೆಮರ್ ರೋಚ್, ಜೇಡನ್ ಸೀಲ್ಸ್, ವೆಸ್ಟ್ ಇಂಡೀಸ್‌ನ ಕೈಲ್ ಮೈಯರ್ಸ್ ಮತ್ತು ಬ್ರೋನರ್ ಈಗಾಗಲೇ ಗಾಯಗೊಂಡಿದ್ದಾರೆ.

ಚಮೀರ ಕರುಣಾರತ್ನೆ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರಿಮಿಯರ್ ಲೀಗ್ನಲ್ಲಿ ಆಡುತ್ತಿರುವ ಕರುಣಾರತ್ನೆ ಕ್ಯಾಚ್ ಹಿಡಿಯುವ ವೇಳೆ ಮಾಡಿಕೊಂಡ ಅವಘಡದಿಂದ 4 ಹಲ್ಲುಗಳನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಶಸ್ತ್ರಚಿಕಿತ್ಸೆಗಾಗಿ ಅವರನ್ನು ಗಾಲೆಯ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯಕ್ಕೆ ಅವರು ಲಂಕಾ ಪ್ರೀಮಿಯರ್ ಲೀಗ್‌ನ ಮೊದಲ ಹಂತದ ಪಂದ್ಯಗಳಿಂದ ಹೊರಗುಳಿದಿದ್ದಾರೆ.

ರೋಹಿತ್ ಶರ್ಮಾ, ದೀಪಕ್ ಚಹಾರ್, ಕುಲದೀಪ್ ಸೇನ್: ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಈ ಮೂವರು ಭಾರತೀಯ ಆಟಗಾರರು ಗಾಯಗೊಂಡಿದ್ದಾರೆ. ರೋಹಿತ್ ಶರ್ಮಾ ಬಲಗೈ ಬೆರಳಿಗೆ ಗಾಯವಾಗಿದೆ. ದೀಪಕ್ ಚಹಾರ್ ಮಂಡಿರಜ್ಜು ಇಂಜುರಿಯಿಂದ ಬಳಲುತ್ತಿದ್ದಾರೆ, ಕುಲದೀಪ್ ಸೇನ್ ಬೆನ್ನುನೋವಿಗೆ ಒಳಗಾಗಿದ್ದಾರೆ. ಎಲ್ಲಾ ಮೂವರು ಆಟಗಾರರು ಏಕದಿನ ಸರಣಿಯ ಕೊನೆಯ ಪಂದ್ಯದಿಂದ ಹೊರಗುಳಿದಿದ್ದಾರೆ.
Published On - 4:48 pm, Thu, 8 December 22



















