ಇಡೀ ದೇಶದ ಕಣ್ಣು ಈಗ ಟಿ20 ವಿಶ್ವಕಪ್ (T20 World Cup) ಮೇಲೆ ನೆಟ್ಟಿದೆ. ಅದರಲ್ಲೂ ನವೆಂಬರ್ 10 ರಂದು ನಡೆಯುವ ಭಾರತ- ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಅಭಿಮಾನಿಗಳು ಕಾದುಕುಳಿತಿದ್ದಾರೆ. ಈ ಟೂರ್ನಮೆಂಟ್ ಮುಗಿದ ನಂತರ ಎಲ್ಲರ ಕಣ್ಣುಗಳು ಐಪಿಎಲ್ ಮೇಲೆ ಇರಲಿವೆ. ಏಕೆಂದರೆ ನವೆಂಬರ್ 15 ರೊಳಗೆ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಹಾಗೂ ತಂಡದಿಂದ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಐಪಿಎಲ್ ಮಂಡಳಿಗೆ ನೀಡಬೇಕಿದೆ. ಈಗ ಇದೆಲ್ಲವುಗಳ ನಡುವೆ ಐಪಿಎಲ್ 2023 (IPL 2023)ರ ಮಿನಿ ಹರಾಜಿನ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಕ್ರಿಕ್ಇನ್ಫೋ ವರದಿ ಪ್ರಕಾರ, ಮಿನಿ ಹರಾಜು ಭಾರತದಲ್ಲಿಯೇ ನಡೆಯಲಿದೆ. ಡಿಸೆಂಬರ್ 23 ರಂದು ಐಪಿಎಲ್ ಮಿನಿ ಹರಾಜು ನಡೆಯಲಿದ್ದು, ಕೊಚ್ಚಿಯಲ್ಲಿ (Kochi) ಈ ಮಿನಿ ಹರಾಜು ನಡೆಯಲಿದೆ.
ವಾಸ್ತವವಾಗಿ, ಈ ಮೊದಲು ಮಿನಿ ಹರಾಜನ್ನು ಇಸ್ತಾನ್‌ಬುಲ್‌ನಲ್ಲಿ ನಡೆಸಲು ಯೋಜಿಸಲಾಗಿತ್ತು ಆದರೆ ಈ ಯೋಜನೆಯನ್ನು ಈಗ ಕೈಬಿಡಲಾಗಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಫ್ರಾಂಚೈಸಿಗಳ ಪರ್ಸ್ ಬಗ್ಗೆಯೂ ಬಿಗ್ ಅಪ್ಡೇಟ್ ಹೊರಬಿದ್ದಿದ್ದು, ಮಾಧ್ಯಮ ವರದಿಗಳ ಪ್ರಕಾರ ಪ್ರತಿ ತಂಡದ ಬಳಿ ಉಳಿದಿರುವ ಪರ್ಸ್ಗೆ ಹೆಚ್ಚುವರಿಯಾಗಿ ಖರ್ಚು ಮಾಡಲು 5 ಕೋಟಿ ರೂ. ನೀಡಲಾಗುವುದು.
ಇದನ್ನೂ ಓದಿ: Ind vs Eng: ಸೆಮಿಫೈನಲ್ಗೆ ಹಿಟ್ಮ್ಯಾನ್ ಫಿಟ್; ಪಂತ್- ಕಾರ್ತಿಕ್ ಯಾರಿಗೆ ತಂಡದಲ್ಲಿ ಸ್ಥಾನ?
ನವೆಂಬರ್ 15 ಕೊನೆಯ ದಿನಾಂಕ
ಎಲ್ಲಾ 10 ಫ್ರಾಂಚೈಸಿಗಳು ಪ್ರಸ್ತುತ ಬಿಸಿಸಿಐ ನೀಡಿದ ಗಡುವಿನ ಮೇಲೆ ಕಾರ್ಯನಿರ್ವಹಿಸುತ್ತಿವೆ. ವಾಸ್ತವವಾಗಿ, ಯಾವ ಆಟಗಾರರನ್ನು ತಂಡದಲ್ಲಿ ಇರಿಸಿಕೊಳ್ಳಬೇಕು ಮತ್ತು ಯಾರನ್ನು ಬಿಡುಗಡೆ ಮಾಡಬೇಕು ಎಂಬ ಪಟ್ಟಿಯನ್ನು ನವೆಂಬರ್ 15 ರೊಳಗೆ ಫ್ರಾಂಚೈಸಿಗಳು ಮಂಡಳಿಗೆ ನೀಡಬೇಕು. ಅಂದರೆ, ಫ್ರಾಂಚೈಸಿಗಳು ತಮ್ಮ ಪಟ್ಟಿಯನ್ನು ಸಲ್ಲಿಸಲು ಕೇವಲ ಒಂದು ವಾರ ಮಾತ್ರ ಉಳಿದಿದೆ.
4 ತಂಡಗಳಲ್ಲಿ ಭಾರಿ ಗೊಂದಲ
ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ನ ಕ್ಯಾಂಪ್‌ಗಳಿಂದ ಉಳಿಸಿಕೊಂಡಿರುವ ಆಟಗಾರರ ಬಗ್ಗೆ ವರದಿಗಳು ಕೇಳಿಬರುತ್ತಿವೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಬಗ್ಗೆ ಸಾಕಷ್ಟು ಮಾತನಾಡಲಾಗುತ್ತಿದೆ. ಐಪಿಎಲ್‌ನ ಎರಡನೇ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಮಿನಿ ಹರಾಜಿಗೂ ಮುನ್ನ ರವೀಂದ್ರ ಜಡೇಜಾ ಅವರನ್ನು ತಂಡದಿಂದ ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ಮಧ್ಯೆ ಎಂಎಸ್ ಧೋನಿ ಜಡೇಜಾರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಫ್ರಾಂಚೈಸಿ ಬಳಿ ಮನವಿ ಇಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Wed, 9 November 22