Shubman Gill, IPL 2023: ಮುಂಬೈ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಶುಭ್​ಮನ್ ಗಿಲ್..!

| Updated By: ಪೃಥ್ವಿಶಂಕರ

Updated on: May 26, 2023 | 9:46 PM

Shubman Gill Century: ಮುಂಬೈ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಆರಂಭಿಕ ಶುಭ್​ಮನ್ ಗಿಲ್ ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. ಈ ಆವೃತ್ತಿಯಲ್ಲಿ ಇದು ಗಿಲ್ ಅವರ ಮೂರನೇ ಶತಕವಾಗಿದೆ.

Shubman Gill, IPL 2023: ಮುಂಬೈ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಶುಭ್​ಮನ್ ಗಿಲ್..!
ಶುಭ್​ಮನ್ ಗಿಲ್
Follow us on

ಮುಂಬೈ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ (Gujarat Titans vs Mumbai Indians) ಆರಂಭಿಕ ಶುಭ್​ಮನ್ ಗಿಲ್ (Shubman Gill) ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. ಈ ಆವೃತ್ತಿಯಲ್ಲಿ ಇದು ಗಿಲ್ ಅವರ ಮೂರನೇ ಶತಕವಾಗಿದೆ. ಗಿಲ್ ಅವರ ಈ ಶತಕದ ಇನ್ನಿಂಗ್ಸ್‌ನಲ್ಲಿ ಮುಂಬೈ ಆಟಗಾರರು ಮಾಡಿದ ಕಳಪೆ ಫೀಲ್ಡಿಂಗ್​ನ ಕೊಡುಗೆಯೂ ಇದೆ. ಈ ಪಂದ್ಯದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 3 ಜೀವದಾನಗಳನ್ನು ಮುಂಬೈ ಆಟಗಾರರು ಗಿಲ್​ಗೆ ನೀಡಿದರು. ಇದರ ಲಾಭ ಪಡೆದುಕೊಂಡ ಗಿಲ್ ದಾಖಲೆಯ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್​ಗೆ ಗಿಲ್ ಬ್ಯಾಟಿಂಗ್ ಉತ್ತಮ ರನ್ ಕಲೆಹಾಕುವಲ್ಲಿ ನೆರವಾಗಿದೆ. ಈ ಆವೃತ್ತಿಯಲ್ಲಿ ಈಗಾಗಲೇ 700ಕ್ಕೂ ಹೆಚ್ಚು ರನ್ ಗಳಿಸಿರುವ ಗಿಲ್ ಈ ಪಂದ್ಯದಲ್ಲೂ ಅಮೋಘ ಆರಂಭ ಮಾಡಿ ಪವರ್ ಪ್ಲೇನಲ್ಲಿ ರನ್ ಮಳೆ ಸುರಿಸತೊಡಗಿದರು.

ಕ್ಯಾಚ್ ಬಿಟ್ಟು ಕೆಟ್ಟ ಮುಂಬೈ

ಆದರೆ ಗುಜರಾತ್ ಇನ್ನಿಂಗ್ಸ್​ಗೆ ತಿರುವು ಸಿಕ್ಕಿದ್ದೆ ಪವರ್ ಪ್ಲೇಯ ಕೊನೆಯ ಓವರ್​ನಲ್ಲಿ. ಆರನೇ ಓವರ್‌ ಬೌಲಿಂಗ್ ಮಾಡಲು ಬಂದ ಕ್ರಿಸ್ ಜೋರ್ಡಾನ್ಗೆ ಗಿಲ್ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಅಲ್ಲದೆ ಇದೇ ಓವರ್​ನಲ್ಲಿ ಟಿಮ್ ಡೇವಿಡ್ ಕ್ಯಾಚ್ ಕೈಚೆಲ್ಲಿ ಗಿಲ್​​ಗೆ ಜೀವದಾನವನ್ನು ನೀಡಿದರು. ಇಲ್ಲಿಂದ ಗಿಲ್ ಸ್ಫೋಟಕ ಬ್ಯಾಟಿಂಗ್ ಮಾಡಲು ಆರಂಭಿಸಿದರು. ಆ ನಂತರ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಗಿಲ್, ಅರ್ಧಶತಕದ ನಂತರ ಮತ್ತಷ್ಟು ಉಗ್ರರೂಪ ತಾಳಿದರು.

GT vs MI Live Score IPL 2023: 60 ಎಸೆತಗಳಲ್ಲಿ 129 ರನ್ ಸಿಡಿಸಿ ಗಿಲ್ ಔಟ್

129 ರನ್​ಗೆ ಇನ್ನಿಂಗ್ಸ್ ಅಂತ್ಯ

ಹೀಗಾಗಿ 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಗಿಲ್ ಆನಂತರ ಕೇವಲ 17 ಎಸೆತಗಳಲ್ಲಿ ಇನ್ನುಳಿದ 50 ರನ್​ಗಳನ್ನು ಪೂರೈಸಿದರು. ಅಂದರೆ ಕೇವಲ 49 ಎಸೆತಗಳಲ್ಲಿ ಗಿಲ್ ತಮ್ಮ ಶತಕ ಪೂರೈಸಿದರು. ಇದರಲ್ಲಿ 7 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್​ಗಳು ಸೇರಿದ್ದವು. ವಾಸ್ತವವಾಗಿ ಹೇಳಬೇಕೆಂದರೆ ಈ ಆವೃತ್ತಿಗೂ ಮೊದಲು ಐಪಿಎಲ್‌ನಲ್ಲಿ ಗಿಲ್ ಒಂದೇ ಒಂದು ಶತಕವನ್ನು ಬಾರಿಸಿರಲಿಲ್ಲ. ಆದರೆ ಈಗ ಅವರು ಒಂದೇ ಸೀಸನ್​ನಲ್ಲಿ 3 ಶತಕಗಳನ್ನು ಬಾರಿಸಿದ ದಾಖಲೆ ಬರೆದಿದ್ದಾರೆ.

ವಿಶೇಷವೆಂದರೆ ಕಳೆದ 4 ಪಂದ್ಯಗಳಲ್ಲಿ ಗಿಲ್ ಸಿಡಿಸಿದ ಮೂರನೇ ಶತಕ ಇದಾಗಿದೆ. ಗಿಲ್ ಅವರ ಈ ಶತಕದ ಆಧಾರದ ಮೇಲೆ ಗುಜರಾತ್ 15 ಓವರ್‌ಗಳಲ್ಲಿ 170 ರನ್‌ಗಳ ಗಡಿ ಕೂಡ ದಾಟಿದೆ. ಗಿಲ್ ಅಂತಿಮವಾಗಿ ಟಿಮ್ ಡೇವಿಡ್​ಗೆ ಕ್ಯಾಚಿತ್ತು ಔಟಾಗಿದ್ದಾರೆ. ತಮ್ಮ ಇನ್ನಿಂಗ್ಸ್​ನಲ್ಲಿ 60 ಎಸೆತಗಳನ್ನು ಎದುರಿಸಿದ ಗಿಲ್ 7 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್​ನೊಂದಿಗೆ 129 ರನ್ ಬಾರಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:17 pm, Fri, 26 May 23