
16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭಕ್ಕೆ ಇನ್ನೊಂದೆ ದಿನ ಬಾಕಿ ಉಳಿದಿದೆ. ಮಾ. 31 ರಿಂದ ಆರಂಭವಾಗುವ ಈ ಮಿಲಿಯಾನ್ ಡಾಲರ್ ಟೂರ್ನಿ, ಬರೋಬ್ಬರಿ 2 ತಿಂಗಳ ಕಾಲ ಇಡೀ ಕ್ರಿಕೆಟ್ ಜಗತ್ತನ್ನು ಕ್ರಿಕೆಟ್ ಸಾಗರದಲ್ಲಿ ಮುಳುಗಲಿದೆ. ಇಷ್ಟು ಸಾಲದೆಂಬಂತೆ ಈ ಟೂರ್ನಿಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವ ಸಲುಬಾಗಿ ಬಿಸಿಸಿಐ (BCCI) ಹಲವು ಹೊಸ ನಿಮಯಗಳನ್ನು ಜಾರಿಗೆ ತಂದಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Gujarat Titans vs Chennai Super Kings) ನಡುವಿನ ಪಂದ್ಯದಿಂದ ಈ ಕೆಲವು ಹೊಸ ನಿಯಮಗಳು ಜಾರಿಯಾಗಲಿವೆ. ಅದರಲ್ಲಿ ಪ್ರಮುಖ ನಿಯಮವೆಂದರೆ ಇಂಪ್ಯಾಕ್ಟ್ ಪ್ಲೇಯರ್ (Impact Player). ಈ ನಿಯಮವನ್ನು ಈ ವರ್ಷ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಸಿಸಿಐ ಪ್ರಯೋಗಿಸಿ ಯಶಸ್ಸು ಕಂಡಿತ್ತು. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಈ ನಿಯಮವನನ್ನು ಜಾರಿಗೆ ತರಲಾಗಿದೆ.
ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಉಭಯ ತಂಡಗಳು ತಮ್ಮ ತಂಡದಲ್ಲಿನ ಒಬ್ಬ ಆಟಗಾರನನ್ನು ಬದಲಿಸುವ ಅವಕಾಶ ಪಡೆಯುವುದಾಗಿದೆ. ನಿಯಮದ ಪ್ರಕಾರ ತಂಡಗಳು ತಾವು ಘೋಷಿಸಿರುವ ತಂಡದಲ್ಲಿ ಒಬ್ಬ ಬೌಲರ್ ಬದಲಿಗೆ ಒಬ್ಬ ಬ್ಯಾಟ್ಸ್‌ಮನ್ ಅಥವಾ ಬ್ಯಾಟ್ಸ್‌ಮನ್ ಬದಲಿಗೆ ಬೌಲರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಈ ನಿಯಮ ಭಾರತಕ್ಕೆ ಹೊಸದಾಗಿದ್ದರೂ ಕ್ರಿಕೆಟ್ ಲೋಕದಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಈ ಹಿಂದೆ ಬಿಗ್ಬ್ಯಾಶ್ ಟಿ20 ಲೀಗ್ನಲ್ಲಿ ಕೂಡ ಇದನ್ನು ಅಳವಡಿಸಲಾಗಿತ್ತು. ಈ ಆಯ್ಕೆಯ ಮೂಲಕ ಎರಡೂ ತಂಡಗಳು ತಮ್ಮ ತಂತ್ರ ಮತ್ತು ಅವಶ್ಯಕತೆಗೆ ಅನುಗುಣವಾಗಿ ಪಂದ್ಯದ ಮಧ್ಯೆ ಆಟಗಾರನನ್ನು ಬದಲಿಬಹುದಾಗಿದೆ. ಹಾಗಂತ ಈ ನಿಯಮವನ್ನು ಬಳಸಲೇಬೇಕೆಂದಿಲ್ಲ. ಈ ಆಯ್ಕೆಯನ್ನು ಪ್ರಯೋಗಿಸುವುದು ತಂಡಕ್ಕೆ ಬಿಟ್ಟ ವಿಷಯ.
IPL 2023: ಐಪಿಎಲ್ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು
ಈ ನಿಯಮದಡಿಯಲ್ಲಿ ಪ್ರತಿ ತಂಡದ ನಾಯಕರು ಟಾಸ್ ವೇಳೆ ತಮ್ಮ ತಂಡದ ಆಡುವ ಇಲೆವೆನ್ ಬಳಗವನ್ನು ಹೆಸರಿಸುವಾಗಲೇ ಹೆಚ್ಚುವರಿಯಾಗಿ ಇನ್ನು ನಾಲ್ಕು ಆಟಗಾರರ ಹೆಸರನ್ನು ನೀಡಿರಬೇಕು. ಪಂದ್ಯ ಆರಂಭವಾದ ಬಳಿಕ 14 ಓವರ್ಗಳ ಒಳಗೆ ಈ ನಿಯಮದಡಿಯಲ್ಲಿ ಒಬ್ಬ ಆಟಗಾರನನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಬಹುದಾಗಿದೆ. ಒಂದು ವೇಳೆ ಒಬ್ಬ ಆಟಗಾರ ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡ ಸೇರಿಕೊಂಡರೆ ಆತನ ಬದಲು ಮತ್ತೊಬ್ಬ ಆಟಗಾರ ತಂಡವನ್ನು ತೊರೆಯಬೇಕಾಗುತ್ತದೆ. ಅಲ್ಲದೆ ಪಂದ್ಯದ ನಡುವೆ ಈ ನಿಯಮವನ್ನು ಬಳಸಿಕೊಳ್ಳುವ ಮೊದಲು ತಂಡದ ನಾಯಕ ಅಂಪೈರ್ ಬಳಿ ಈ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ.
ಒಂದು ತಂಡ ತಾನು ಆಡುವ ಪ್ಲೇಯಿಂಗ್ ಇಲೆವೆನ್ನಲ್ಲಿ ಕೇವಲ ಮೂವರು ವಿದೇಶಿ ಆಟಗಾರರಿಗೆ ಸ್ಥಾನ ನೀಡಿದ್ದು, ಆ ಬಳಿಕ ಬೇಕಿದ್ದರೆ ವಿದೇಶಿ ಆಟಗಾರನನ್ನು ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿಯಲ್ಲಿ ತಂಡಕ್ಕೆ ಸೇರಿಸಿಕೊಳ್ಳಬಹುದು. ಆದರೆ ಈಗಾಗಲೇ ತಂಡದಲ್ಲಿ 4 ವಿದೇಶಿ ಆಟಗಾರರು ಆಡುತ್ತಿದ್ದು, ಮತ್ತೊಬ್ಬ ವಿದೇಶಿ ಆಟಗಾರನನ್ನು ಈ ನಿಯಮದಡಿಯಲ್ಲಿ ಸೇರಿಸಿಕೊಳ್ಳುವಂತಿಲ್ಲ. ಬಿಸಿಸಿಐನ ಈ ನಿರ್ಧಾರಕ್ಕೆ ದೊಡ್ಡ ಕಾರಣವೆಂದರೆ, ಐಪಿಎಲ್‌ನ ಆರಂಭದಿಂದಲೂ ಕೇವಲ 4 ವಿದೇಶಿ ಆಟಗಾರರಿಗೆ ತಂಡದಲ್ಲಿ ಆಡುವ ಅವಕಾಶ ನೀಡಬೇಕೆಂಬ ನಿಯಮ ಜಾರಿ ಇದೆ. ಇದರಡಿಯಲ್ಲಿ ಯಾವುದೇ ತಂಡವು 4 ಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸುವಂತಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Thu, 30 March 23