16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಮೊದಲ ಪಂದ್ಯದಲ್ಲಿ ಎರಡು ಚಾಂಪಿಯನ್ ತಂಡಗಳಾದ ಗುಜರಾತ್ ಹಾಗೂ ಚೆನ್ನೈ ಮುಖಾಮುಖಿಯಾಗುತ್ತಿವೆ. ಐಪಿಎಲ್‌ನಲ್ಲಿ ಇದುವರೆಗೆ 15 ಸೀಸನ್ಗಳು ನಡೆದಿವೆ. ಆದರೆ ಇನ್ನೂ ಕೆಲವು ತಂಡಗಳಿಗೆ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಮುಂಬೈ ಇಂಡಿಯನ್ಸ್ ಐದು ಬಾರಿ, ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದ್ದರೆ, ಈ ನಾಲ್ಕು ತಂಡಗಳಿಗೆ ಒಂದೇ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಅಂತಹ 4 ತಂಡಗಳು ಯಾವುವು ಎಂಬ ವಿವರ ಇಲ್ಲಿದೆ.
ಲಕ್ನೋ ಸೂಪರ್ ಜೈಂಟ್ಸ್: ಕಳೆದ ಆವೃತ್ತಿಯಲ್ಲಿ ಐಪಿಎಲ್ಗೆ ಎಂಟ್ರಿಕೊಟ್ಟಿರುವ ಲಕ್ನೋ ತಂಡ ಮೊದಲ ಆವೃತ್ತಿಯಲ್ಲೇ ಉತ್ತಮ ಪ್ರದರ್ಶನ ನೀಡಿತ್ತು. ಆದರೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಆವೃತ್ತಿಯಲ್ಲಿ ಲಕ್ನೋ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಪ್ರತಿ ಬಾರಿಯೂ ಈ ಸಲ ಕಪ್ ನಮ್ಮದೆ ಎನ್ನುತ್ತಾ ಐಪಿಎಲ್ ರಣಾಂಗಣಕ್ಕೆ ಕಾಲಿಡುವ ಆರ್ಸಿಬಿ ಕೂಡ ಒಮ್ಮೆಯೂ ಕಪ್ ಗೆದ್ದಿಲ್ಲ. ತಂಡದಲ್ಲಿ ಬಿಗ್ ಗೇಮ್ ಫಿನಿಶರ್ಗಳೇ ಇದ್ದರೂ ಒಮ್ಮೆಯೂ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್: ಮೊದಲ ಸೀಸನ್ನಿಂದಲೂ ಐಪಿಎಲ್ ಆಡುತ್ತಿರುವ ಈ ತಂಡಕ್ಕೆ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಕೆಲವು ಬಾರಿ ಪ್ರಶಸ್ತಿ ಗೆಲ್ಲುವ ಸುತ್ತಿಗೆ ಬಂದು ಸೋಲುಂಡಿರುವ ಈ ತಂಡಕ್ಕೆ ಈ ಬಾರಿ ಉತ್ತಮ ಅವಕಾಶವಿದೆ. ಏಕೆಂದರೆ, ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಈ ತಂಡದ ನಾಯಕತ್ವವನ್ನು ವಾರ್ನರ್ಗೆ ವಹಿಸಲಾಗಿದೆ. ಡೇವಿಡ್ ವಾರ್ನರ್ 2016ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಚಾಂಪಿಯನ್ ಮಾಡಿದ್ದರು. ಹೀಗಾಗಿ ವಾರ್ನರ್ ನಾಯಕತ್ವದಲ್ಲಾದರೂ ಡೆಲ್ಲಿ ಚಾಂಪಿಯನ್ ಆಗುತ್ತಾ ಕಾದು ನೋಡಬೇಕಿದೆ.
ಪಂಜಾಬ್ ಕಿಂಗ್ಸ್: ಐಪಿಎಲ್‌ನಲ್ಲಿ ಕಪ್ ಗೆಲ್ಲಲು ನಾನಾ ಕಸರತ್ತು ಮಾಡಿರುವ ಪಂಜಾಬ್ ಕಿಂಗ್ ಅತಿ ಹೆಚ್ಚು ಬಾರಿ ನಾಯಕರನ್ನು ಬದಲಿಸಿರುವ ತಂಡ ಎಂಬ ಕುಖ್ಯಾತಿ ಪಡೆದುಕೊಂಡಿದೆ. ಆದರೂ ಕೂಡ ಈ ತಂಡಕ್ಕೆ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಡಲು ಸಾಧ್ಯವಾಗಿಲ್ಲ.
Published On - 10:50 am, Thu, 30 March 23