- Kannada News Photo gallery Cricket photos IPL 2023: Glenn Maxwell and Josh Hazlewood miss Rcb's 1st Match
IPL 2023: ಮೊದಲ ಪಂದ್ಯಕ್ಕೂ ಮುನ್ನ RCB ತಂಡಕ್ಕೆ ಹಿನ್ನಡೆ..!
IPL 2023 Kannada:
Updated on: Mar 30, 2023 | 8:37 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಸೀಸನ್ 16 ಗೆ ಕ್ಷಣಗಣನೆ ಶುರುವಾಗಿದೆ. ಶುಕ್ರವಾರದಿಂದ ಆರಂಭವಾಗಲಿರುವ ಐಪಿಎಲ್ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಸಿಎಸ್ಕೆ ಮುಖಾಮುಖಿಯಾದರೆ, 2ನೇ ಪಂದ್ಯದಲ್ಲಿ ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ಸೆಣಸಲಿದೆ. ಇನ್ನು 3ನೇ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ.

ಹಾಗೆಯೇ 4ನೇ ಪಂದ್ಯದ ಮೂಲಕ ಆರ್ಸಿಬಿ ತಂಡವು ಐಪಿಎಲ್ ಅಭಿಯಾನ ಆರಂಭಿಸಲಿದ್ದು, ಏಪ್ರಿಲ್ 2 ರಂದು ನಡೆಯಲಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಆದರೆ ಈ ಆರಂಭಿಕ ಪಂದ್ಯಕ್ಕೆ ತಂಡದ ಸ್ಟಾರ್ ಆಟಗಾರರಾದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಜೋಶ್ ಹ್ಯಾಝಲ್ವುಡ್ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ಗ್ಲೆನ್ ಮ್ಯಾಕ್ಸ್ವೆಲ್ ಕಾಲಿನ ಗಾಯದ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಏಕೆಂದರೆ ಇದೇ ಗಾಯದ ಸಮಸ್ಯೆಯ ಕಾರಣ ಮ್ಯಾಕ್ಸ್ವೆಲ್ ಭಾರತದ ವಿರುದ್ಧ ಏಕದಿನ ಸರಣಿಯ 2 ಪಂದ್ಯಗಳಿಂದ ಹೊರಗುಳಿದಿದ್ದರು. ಹೀಗಾಗಿ ಏಪ್ರಿಲ್ 2 ರಂದು ನಡೆಯುವ ಪಂದ್ಯದ ವೇಳೆಯೂ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್ವುಡ್ ಇನ್ನೂ ಕೂಡ ಆರ್ಸಿಬಿ ತಂಡವನ್ನು ಕೂಡಿಕೊಂಡಿಲ್ಲ. ಮೊಣಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಹ್ಯಾಝಲ್ವುಡ್ ಇತ್ತೀಚೆಗೆ ಮುಕ್ತಾಯಗೊಂಡಿದ್ದ ಭಾರತದ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾದರೂ ಆಸೀಸ್ ವೇಗಿ ಭಾರತಕ್ಕೆ ಆಗಮಿಸಿಲ್ಲ.

ಕೆಲ ವರದಿಗಳ ಪ್ರಕಾರ, ಜೋಶ್ ಹ್ಯಾಝಲ್ವುಡ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನು ಕೆಲ ವಾರಗಳು ತೆಗೆದುಕೊಳ್ಳಲಿದೆ. ಸದ್ಯ ವೈದ್ಯರ ಸೂಚನೆ ಮೇರೆಗೆ ವಿಶ್ರಾಂತಿಯನ್ನು ಮುಂದುವರೆಸಿದ್ದಾರೆ. ಇದೇ ಕಾರಣದಿಂದಾಗಿ ಹ್ಯಾಝಲ್ವುಡ್ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಅಂದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಜೋಶ್ ಹ್ಯಾಝಲ್ವುಡ್ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ. ಹಾಗೆಯೇ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಈ ಪಂದ್ಯದಲ್ಲಿ ಆಡುವುದು ಅನುಮಾನ.

ಮತ್ತೊಂದೆಡೆ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಆಡುತ್ತಿರುವ ಶ್ರೀಲಂಕಾ ತಂಡದ ವನಿಂದು ಹಸರಂಗ ಕೂಡ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಏಕದಿನ ಸರಣಿ ಬಳಿಕ ಶ್ರೀಲಂಕಾ ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯಗಳನ್ನು ಕೂಡ ಆಡಬೇಕಿದೆ. ಹೀಗಾಗಿ ವನಿಂದು ಹಸರಂಗ ಕೂಡ ಆರಂಭಿಕ ಅಲಭ್ಯರಾಗುವ ಸಾಧ್ಯತೆಯಿದೆ.

ಹಾಗೆಯೇ ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟಿದಾರ್ ಸಹ ಪಾದದ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಪಾಟಿದಾರ್ ಸಹ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ.

ಅಂದರೆ ಆರ್ಸಿಬಿ ತಂಡದ ಮೊದಲ ಪಂದ್ಯಕ್ಕೆ ನಾಲ್ವರು ಸ್ಟಾರ್ ಆಟಗಾರರ ಸೇವೆಯನ್ನು ಕಳೆದುಕೊಳ್ಳಲಿದೆ. ಈ ನಾಲ್ವರು ಕೂಡ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರಾಗಿದ್ದರು ಎಂಬುದು ವಿಶೇಷ. ಹೀಗಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆಯಂತು ಕಂಡು ಬರಲಿದೆ.

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ಮೈಕೆಲ್ ಬ್ರೇಸ್ವೆಲ್.



















