IPL 2023 RCB Unbox Event Live: ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಸೀಸನ್ 16 ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು RCB Unbox ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸುತ್ತಿದೆ. ಇಂದು (ಮಾ.26) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಆರ್‌ಸಿಬಿ ತಂಡವು ತನ್ನ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಿದೆ. ಅಷ್ಟೇ ಅಲ್ಲದೆ ಆರ್‌ಸಿಬಿ ತಂಡದ ಪರ ಆಡಿದ ಶ್ರೇಷ್ಠ ಆಟಗಾರರನ್ನು ಗೌರವಿಸಲಿದೆ. ಈ ಗೌರವ ಪ್ರಶಸ್ತಿಗೆ ಆರ್‌ಸಿಬಿ ಹಾಲ್ ಆಫ್ ಫೇಮ್ ಎಂಬ ಹೆಸರಿಡಲಾಗಿದೆ. ಅದರಂತೆ ಆರ್‌ಸಿಬಿ ತಂಡದ ಮೊದಲ ಹಾಲ್ ಆಫ್ ಫೇಮ್ ಗೌರವಕ್ಕೆ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಪಾತ್ರರಾಗಿದ್ದು, ಈ ಇಬ್ಬರು ದಿಗ್ಗಜರನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.
ಈ ಗೌರವ ಪ್ರಶಸ್ತಿಯನ್ನು ಆರ್‌ಸಿಬಿ ಪರ ಆಡಿದ ಎಲ್ಲಾ ಆಟಗಾರರಿಗೆ ನೀಡಲಾಗುವುದಿಲ್ಲ. ಬದಲಾಗಿ ತಂಡದ ಪರ ಸರ್ವ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ಮಾತ್ರ ಸಲ್ಲುತ್ತದೆ. ಇದಕ್ಕಾಗಿ ಒಂದಷ್ಟು ಷರತ್ತುಗಳನ್ನು ಕೂಡ ಆರ್‌ಸಿಬಿ ರೂಪಿಸಿದೆ.
ಈ ಷರತ್ತುಗಳೆಂದರೆ, ಕನಿಷ್ಠ 3 ವರ್ಷಗಳ ಕಾಲ RCB ಪರ ಆಡಿರಬೇಕು. ಪ್ರಸ್ತುತ, ಅವರು ಐಪಿಎಲ್‌ನ ಯಾವುದೇ ತಂಡದ ಭಾಗವಾಗಿರಬಾರದು. ಮೈದಾನದಲ್ಲಿ ಮತ್ತು ಹೊರಗೆ RCB ಮೇಲೆ ಗಮನಾರ್ಹ ಪರಿಣಾಮ ಬೀರಬೇಕು. ಇಂತಹ ಸರ್ವ ಶ್ರೇಷ್ಠ ಆಟಗಾರರಿಗೆ ಮಾತ್ರ ಆರ್‌ಸಿಬಿ ಹಾಲ್ ಆಫ್ ಫೇಮ್ ಗೌರವ ನೀಡಲಿದೆ. ಅದರಂತೆ ಆರ್‌ಸಿಬಿ ಪರ 11 ವರ್ಷಗಳ ಕಾಲ ಆಡಿದ್ದ ಎಬಿ ಡಿವಿಲಿಯರ್ಸ್ ಹಾಗೂ 7 ವರ್ಷಗಳ ಬ್ಯಾಟ್ ಬೀಸಿದ್ದ ಕ್ರಿಸ್ ಗೇಲ್ ಆರ್‌ಸಿಬಿ ತಂಡದ ಮೊದಲ ಹಾಲ್ ಫೇಮ್ ಗೌರವ ಸಂದಿದೆ.
ಇದನ್ನೂ ಓದಿ: IPL 2023: RCB ತಂಡಕ್ಕೆ ಮತ್ತೊಂದು ಆಘಾತ: ಮೊದಲಾರ್ಧದಿಂದ ಯುವ ಆಟಗಾರ ಔಟ್
ಇದಲ್ಲದೆ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಸಂಗೀತದ ರಸದೌತಣ ಕೂಡ ಇರಲಿದೆ. ಬಹುಭಾಷಾ ಗಾಯಕ ಸೋನು ನಿಗಮ್, ತುಳಸಿ ಕುಮಾರ್, ಅದಿತಿ ಸಿಂಗ್ ಶರ್ಮಾ ಮತ್ತು ಜೇಸನ್ ಡೆರುಲೋ ಅವರಂತಹ ಖ್ಯಾತ ಗಾಯಕರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಎಲ್ಲಿ ವೀಕ್ಷಿಸಬಹುದು? ಎಷ್ಟು ಗಂಟೆಗೆ ಶುರು ಎಂಬಿತ್ಯಾದಿ ಪ್ರಶ್ನೆಗಳಿಗೆ ಈ ಕೆಳಗೆ ಉತ್ತರ ನೀಡಲಾಗಿದೆ.
ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ಎಷ್ಟು ಗಂಟೆಗೆ ಶುರು?
ಈ ಅದ್ಧೂರಿ ಕಾರ್ಯಕ್ರಮವು ಮಾಚ್ 26 ರಂದು (ಭಾನುವಾರ) ಸಂಜೆ 4 PM IST ಕ್ಕೆ ಪ್ರಾರಂಭವಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಯಾರೆಲ್ಲಾ ಇರಲಿದ್ದಾರೆ?
ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್, ಕ್ರಿಸ್ ಗೇಲ್, ಎಬಿಡಿ, ಆರ್‌ಸಿಬಿ ಮಹಿಳಾ ತಂಡದ ಕೆಲ ಸದಸ್ಯರು ಸೇರಿದಂತೆ ಹಲವು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
RCB ಅನ್‌ಬಾಕ್ಸ್ ಈವೆಂಟ್ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬೇಕು?
ಈ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ RCB ಯ ಯುಟ್ಯೂಬ್ ಚಾನೆಲ್ https://www.youtube.com/@royalchallengersbangalore/streams ನಲ್ಲಿ ಲಭ್ಯವಿರುತ್ತದೆ.