IPL 2024: ಐಪಿಎಲ್​ ಹರಾಜಿಗೆ ಶಾರ್ಟ್​ ಲೀಸ್ಟ್​ ಮಾಡುವುದು ಹೇಗೆ?

| Updated By: ಝಾಹಿರ್ ಯೂಸುಫ್

Updated on: Dec 07, 2023 | 4:56 PM

IPL 2024 Auction: ಈ ಬಾರಿಯ ಐಪಿಎಲ್​ನಲ್ಲಿ ಕೇವಲ 77 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ. ಅಂದರೆ ಪ್ರತಿ ತಂಡಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಮಾತ್ರ ಹರಾಜು ನಡೆಯಲಿದೆ. ಐಪಿಎಲ್ ನಿಯಮದಂತೆ ಪ್ರತಿ ತಂಡಗಳು ಕನಿಷ್ಠ 18 ಆಟಗಾರರನ್ನು ಹೊಂದಿರಲೇಬೇಕು

IPL 2024: ಐಪಿಎಲ್​ ಹರಾಜಿಗೆ ಶಾರ್ಟ್​ ಲೀಸ್ಟ್​ ಮಾಡುವುದು ಹೇಗೆ?
IPL 2024
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 17ನೇ ಆವೃತ್ತಿಯ ಹರಾಜಿಗಾಗಿ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 19 ರಂದು ನಡೆಯಲಿರುವ ಹರಾಜಿಗಾಗಿ 1,166 ಆಟಗಾರರು ಹೆಸರು ನೀಡಿದ್ದಾರೆ. ಆದರೆ ಈಗ ಹೆಸರು ನೀಡಿರುವ ಎಲ್ಲಾ ಆಟಗಾರರ ಹೆಸರು  ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ 400 ರಿಂದ 600 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.

ಅಂದರೆ ಇಲ್ಲಿ 1166 ಆಟಗಾರರ ಹೆಸರುಗಳನ್ನು ಶಾರ್ಟ್ ಲೀಸ್ಟ್​ ಮಾಡಲಾಗುತ್ತದೆ. ಈ ಮೂಲಕ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ಇಲ್ಲಿ ಹರಾಜಿಗೂ ಮುನ್ನ ಫೈನಲ್ ಲೀಸ್ಟ್ ಅನ್ನು ಸಿದ್ಧಪಡಿಸುವುದು 10 ತಂಡಗಳು ಎಂಬುದು ವಿಶೇಷ.

ಶಾರ್ಟ್ ಲೀಸ್ಟ್​ ಮಾಡುವುದು ಹೇಗೆ?

ಐಪಿಎಲ್​ ಹರಾಜಿಗಾಗಿ ಹೆಸರು ನೀಡಿದ ಎಲ್ಲಾ ಆಟಗಾರರ ಪಟ್ಟಿಯನ್ನು 10 ಫ್ರಾಂಚೈಸಿಗಳಿಗೆ ನೀಡಲಾಗುತ್ತದೆ. ಆ ಬಳಿಕ ಹತ್ತು ಫ್ರಾಂಚೈಸಿಗಳು ಬಿಡ್ ಮಾಡಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. 10 ತಂಡಗಳ ಟಾರ್ಗೆಟ್ ಲೀಸ್ಟ್​ನಲ್ಲಿ ಸ್ಥಾನ ಪಡೆಯದ ಆಟಗಾರರನ್ನು ಹರಾಜಿನಿಂದ ಹೊರಗಿಡಲಾಗುತ್ತದೆ.

ಇಲ್ಲಿ 10 ತಂಡಗಳಲ್ಲಿ ಯಾವುದೇ ಒಂದು ತಂಡ ಒಬ್ಬ ಆಟಗಾರನ ಬಗ್ಗೆ ಆಸಕ್ತಿ ತೋರಿಸಿದ್ದರೂ, ಆತನ ಹೆಸರನ್ನು ಹರಾಜಿಗೆ ಪರಿಗಣಿಸಲಾಗುತ್ತದೆ. ಉದಾಹರಣೆಗೆ- 10 ತಂಡಗಳಲ್ಲಿ 9 ಟೀಮ್​ಗಳು ಕೇದರ್​ ಜಾಧವ್ ಅವರನ್ನು ಶಾರ್ಟ್​ ಲೀಸ್ಟ್​ನಲ್ಲಿ ಪರಿಗಣಿಸಿಲ್ಲ ಎಂದಿಕೊಟ್ಟುಕೊಳ್ಳೋಣ, ಇದೇ ವೇಳೆ ಆರ್​ಸಿಬಿ ಮಾಡಿದ ಅಂತಿಮ ಪಟ್ಟಿಯಲ್ಲಿ ಕೇದರ್ ಜಾಧವ್ ಹೆಸರು ಕಾಣಿಸಿಕೊಂಡರೆ ಅವರನ್ನು ಹರಾಜು ಪಟ್ಟಿಗೆ ಪರಿಗಣಿಸಲಾಗುತ್ತದೆ.

ಅಂದರೆ ಇಲ್ಲಿ 10 ತಂಡಗಳು ಸಲ್ಲಿಸಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳದವರನ್ನು ಮಾತ್ರ ಹರಾಜು ಪಟ್ಟಿಯಿಂದ ಕೈ ಬಿಡಲಾಗುತ್ತದೆ. ಅದರಂತೆ 1166 ಆಟಗಾರರಿಂದ ಈ ಬಾರಿ 400 ರಿಂದ 600 ಆಟಗಾರರು ಮಾತ್ರ ಶಾರ್ಟ್ ಲೀಸ್ಟ್​ನಲ್ಲಿ ಕಾಣಿಸಿಕೊಳ್ಳಬಹುದು.

ಈ ಶಾರ್ಟ್ ಲೀಸ್ಟ್​ ಸಿದ್ಧವಾದ ಬಳಿಕ ಕೆಲ ಆಟಗಾರರನ್ನು ಸೇರ್ಪಡೆಗೊಳಿಸಲು ಕೂಡ ಅವಕಾಶವಿದೆ. ಅಂದರೆ ಹರಾಜಿಗೂ ಮುನ್ನ ಕೆಲ ಫ್ರಾಂಚೈಸಿಗಳು ಶಾರ್ಟ್ ಲೀಸ್ಟ್ ಪಟ್ಟಿಯಲ್ಲಿರದ ಆಟಗಾರರ ಬಿಡ್ಡಿಂಗ್​​ಗೆ ಆಸಕ್ತಿ ತೋರಿಸಿದರೆ ಅವರ ಹೆಸರನ್ನು ಅಂತಿಮ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ. ಇದಾದ ಬಳಿಕ ಅಂತಿಮ ಹರಾಜು ಪಟ್ಟಿಯನ್ನು ಫೈನಲ್ ಮಾಡಲಾಗುತ್ತದೆ. ಹೀಗಾಗಿ ಶಾರ್ಟ್ ಲೀಸ್ಟ್ ಮಾಡಿದ ಬಳಿಕ ಕೆಲ ಆಟಗಾರರ ಹೆಸರುಗಳು ಅದೃಷ್ಟದ ಮೇಲೂ ಹರಾಜಿನಲ್ಲಿ ಕಾಣಿಸಿಕೊಳ್ಳಬಹುದು.

77 ಆಟಗಾರರಿಗೆ ಮಾತ್ರ ಅವಕಾಶ:

ಈ ಬಾರಿಯ ಐಪಿಎಲ್​ನಲ್ಲಿ ಕೇವಲ 77 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ. ಅಂದರೆ ಪ್ರತಿ ತಂಡಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಮಾತ್ರ ಹರಾಜು ನಡೆಯಲಿದೆ. ಐಪಿಎಲ್ ನಿಯಮದಂತೆ ಪ್ರತಿ ತಂಡಗಳು ಕನಿಷ್ಠ 18 ಆಟಗಾರರನ್ನು ಹೊಂದಿರಲೇಬೇಕು. ಇನ್ನು ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಇದಾಗ್ಯೂ 25 ಆಟಗಾರರನ್ನು ಖರೀದಿಸಲೇಬೇಕೆಂಬ ನಿಯಮವಿಲ್ಲ.

ಇತ್ತ ಪ್ರತಿ ತಂಡಗಳು ತಮ್ಮ ಪರ್ಸ್​ಗೆ ಅನುಗುಣವಾಗಿ ಕೆಲ ಆಟಗಾರರಿಗೆ ಮಾತ್ರ ಬಿಡ್ಡಿಂಗ್ ಮಾಡಬಹುದು. ಉದಾಹರಣೆಗೆ- ಆರ್​ಸಿಬಿ ತಂಡದಲ್ಲಿ ಈಗಾಗಲೇ 19 ಆಟಗಾರರಿದ್ದಾರೆ. ಅಂದರೆ ಐಪಿಎಲ್​ ನಿಯಮದಂತೆ ಆರ್​ಸಿಬಿ 18 ಆಟಗಾರರಿಗಿಂತ ಹೆಚ್ಚಿನ ಪ್ಲೇಯರ್ಸ್ ಅನ್ನು ಹೊಂದಿದೆ.  ಇನ್ನುಳಿದ 23.25 ಕೋಟಿಯಲ್ಲಿ ಆರ್​ಸಿಬಿ ಒಬ್ಬನೇ ಆಟಗಾರನನ್ನು ಅಥವಾ ಒಂದಿಬ್ಬರು ಆಟಗಾರರನ್ನು ಮಾತ್ರ ಖರೀದಿಸಬಹುದು.

ಇದನ್ನೂ ಓದಿ: IPL 2024 Auction: ಪ್ರತಿ ತಂಡಗಳು ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

ಹಾಗೆಯೇ ಇಲ್ಲಿ ಪ್ರತಿ ತಂಡಗಳು ಒಟ್ಟು ಹರಾಜು ಮೊತ್ತದಲ್ಲಿ ಶೇ.75 ರಷ್ಟು ಖರ್ಚು ಮಾಡಲೇಬೇಕು. ಪ್ರಸ್ತುತ ಮಾಹಿತಿಯಂತೆ ಈ ಬಾರಿಯ ಹರಾಜು ಮೊತ್ತ 100 ಕೋಟಿ. ಇದರಲ್ಲಿ 75 ಕೋಟಿಯನ್ನು ಆಟಗಾರರ ಖರೀದಿಗೆ ವ್ಯಯಿಸಬೇಕಾಗುತ್ತದೆ.

 

 

Published On - 4:55 pm, Thu, 7 December 23